ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ಶಾಸಕರ ಜೊತೆ ಎಚ್‌ಡಿಕೆ ವಾಸ್ತವ್ಯ!
ಬೆಂಗಳೂರು, ನವೆಂಬರ್ 17; ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರೆಸಾರ್ಟ್ ಪಾಲಿಟಿಕ್ಸ್ ಆರಂಭಿಸಿದ್ದಾರೆ. ಜೆಡಿಎಸ್ ಶಾಸಕರ ಜೊತೆ ಚಿಕ್ಕಮಗಳೂರಿನ ರೆಸಾರ್ಟ್‌ನಲ್ಲಿ ಅವರು ವಾಸ್ತವ್ಯ ಹೂಡಲಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.
ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೆಡಿಎಸ್‌ನ ಹಿರಿಯ ಶಾಸಕರ ಸಭೆ ನಡೆಸಿದ ಹಿನ್ನಲೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಎಚ್. ಡಿ. ಕುಮಾರಸ್ವಾಮಿ ರೆಸಾರ್ಟ್ ರಾಜಕೀಯ ಆರಂಭಿಸಿದ್ದಾರೆ. ಎರಡು ದಿನಗಳ ಹಿಂದೆ ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಸೇರಿದ್ದಾರೆ.

ಚಿಕ್ಕಮಗಳೂರಿನ ರೆಸಾರ್ಟ್‌ನಲ್ಲಿ ಎಚ್. ಡಿ. ಕುಮಾರಸ್ವಾಮಿ ಶಾಸಕರ ಜೊತೆ ವಾಸ್ತವ್ಯ ಹೂಡಲಿದ್ದಾರೆ. ವಿಧಾನ ಪರಿಷತ್ ಸದಸ್ಯರು ಸಹ ಜೊತೆ ಇರಲಿದ್ದಾರೆ. ಭಾನುವಾರ ನಡೆಯುವ ಎಂಎಲ್‌ಸಿ, ಜೆಡಿಎಸ್ ನಾಯಕ ಭೋಜೇಗೌಡರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದ ನೆಪದಲ್ಲಿ ಶಾಸಕರು ರೆಸಾರ್ಟ್ ಸೇರುತ್ತಿದ್ದಾರೆ.
ಶಾಸಕರ ಜೊತೆ ಸಭೆ; ಕುಮಾರಸ್ವಾಮಿ ಹೆಸರಿನಲ್ಲಿ ಸಿಲ್ವರ್ ಗೇಟ್, ಹನಿ ಡ್ಯೂ ರೆಸಾರ್ಟ್‌ನಲ್ಲಿ ರೂಮ್ ಬುಕ್ ಆಗಿವೆ. ಹಾಸನದಲ್ಲಿ ಶಾಸಕರ ಜೊತೆ ಸಭೆ ನಡೆಸಿ, ಹಾಸನಾಂಬೆ ದರ್ಶನ ಪಡೆದಿದ್ದ ಜೆಡಿಎಸ್ ಶಾಸಕರ ರಾಜಕೀಯ ಈಗ ಪಕ್ಕದ ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರಗೊಂಡಿದೆ.
ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಿಂದ ಎಚ್. ಡಿ. ಕುಮಾರಸ್ವಾಮಿ ಚಿಕ್ಕಮಗಳೂರಿನ ರೆಸಾರ್ಟ್‌ಗೆ ಆಗಮಿಸಲಿದ್ದಾರೆ. ನವೆಂಬರ್ 18ರ ಸಂಜೆ ಕುಮಾರಸ್ವಾಮಿ ರೆಸಾರ್ಟ್‌ನಲ್ಲಿ ಶಾಸಕರ ಜೊತೆ ವಿಧಾನಸಭೆ ಅಧಿವೇಶನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆ ನಡೆಸುವ ಸಾಧ್ಯತೆ ಇದೆ.
ನವೆಂಬರ್ 19ರಂದು ಎಂಎಲ್‌ಸಿ ಭೋಜೇಗೌಡರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಚಿಕ್ಕಮಗಳೂರಿನ ರೆಸಾರ್ಟ್‌ನಲ್ಲಿ ಮತ್ತೊಮ್ಮೆ ಸಭೆ ಸೇರುವ ಮೂಲಕ ಜೆಡಿಎಸ್ ಶಾಸಕರು ಒಗ್ಗಟ್ಟಿನ ಪ್ರದರ್ಶನ ಮಾಡಲಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ 19 ಶಾಸಕರು ಗೆಲುವು ಸಾಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಜೆಡಿಎಸ್ ಎನ್‌ಡಿಎ ಮೈತ್ರಿಕೂಟ ಸೇರಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲಿದೆ.
ಜೆಡಿಎಸ್‌ನ ಕೆಲವು ನಾಯಕರು ಬಿಜೆಪಿ ಜೊತೆ ಮೈತ್ರಿಯನ್ನು ವಿರೋಧಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಶಾಸಕರ ಜೊತೆ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಹಿರಿಯ ನಾಯಕ ಹೆಚ್. ಡಿ. ರೇವಣ್ಣ ಸಹ ರೆಸಾರ್ಟ್‌ಗೆ ಸಭೆಗೆ ಆಗಮಿಸುವ ಸಾಧ್ಯತೆ ಇದೆ.












Click it and Unblock the Notifications