ಚಿಕ್ಕಮಗಳೂರು: ಅಕ್ರಮವಾಗಿ ಹಸು-ಎಮ್ಮೆ ಸಾಗಾಟ ಮಾಡುತ್ತಿದ್ದವರ ಬಂಧನ
ಚಿಕ್ಕಮಗಳೂರು, ಅಕ್ಟೋಬರ್ 20: ಅಕ್ರಮವಾಗಿ ಹಸು-ಎಮ್ಮೆ ಸಾಗಾಟ ಮಾಡುತ್ತಿದ್ದವರನ್ನು ಚಿಕ್ಕಮಗಳೂರಿನ ಭಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ತಡರಾತ್ರಿ ತಾಲ್ಲೂಕಿನ ಮಲ್ಲೇಶ್ವರದಲ್ಲಿ ನಡೆದಿದೆ.
ಕಂಟೈನರ್ ಗಾಡಿಯಲ್ಲಿ 3 ಎಮ್ಮೆ, 3 ಕೋಣ ಮತ್ತು 2 ಎಮ್ಮೆ ಕರುಗಳು ಹಾಗೂ 3 ಸಿಂದಿ ಹಸುಗಳನ್ನು ಕೇರಳಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಪಡೆದ ಭಜರಂಗದಳದ ಕಾರ್ಯಕರ್ತರು ಪೊಲೀಸರ ಸಹಾಯದೊಂದಿಗೆ ಮಲ್ಲೇಶ್ವರದ ಬಳಿ ತಡೆದು ಹಸು ಎಮ್ಮೆಗಳನ್ನು ರಕ್ಷಿಸಿದ್ದಾರೆ.
ವಾಹನದಲ್ಲಿದ್ದ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಚಟ್ಟಚಟ್ಟಿಹಳ್ಳಿಯ ರೆಹಮಾನ್ ಮತ್ತು ಮೈಸೂರಿನ ನೂರ್ ಅಹಮದ್ ಎಂಬುವವರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಇವರುಗಳು ಕಲ್ಲಾಪುರದ ಆಲಿ ಎಂಬುವವನಿಂದ ಹಸು ಮತ್ತು ಎಮ್ಮೆಗಳನ್ನು ಖರೀದಿಸಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಭಜರಂಗದಳದ ತಾಲ್ಲೂಕು ಸಂಚಾಲಕ ಅಭಿಷೇಕ್, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಜೈನ್, ಸಚಿನ್, ದರ್ಶನ್, ಲೋಹಿತ್, ರಾಮ್ ಜಾನುವಾರು ರಕ್ಷಿಸಿದ ತಂಡದಲ್ಲಿದ್ದರು.