Chikkaballapur: 108 ಆಂಬುಲೆನ್ಸ್‌ನಲ್ಲಿ ಸೌಲಭ್ಯಗಳ ಕೊರತೆ- ಸಿಬ್ಬಂದಿಗಿಲ್ಲ ಕೆಲಸ
ಚಿಕ್ಕಬಳ್ಳಾಪುರ ಸೆಪ್ಟೆಂಬರ್ 29: ಜೀವ ಉಳಿಸಲು ವೈದ್ಯರು ಎಷ್ಟು ಮುಖ್ಯವೋ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಇರುವ ಆಂಬುಲೆನ್ಸ್ ವಾಹನ ಕೂಡ ಅಷ್ಟೇ ಮುಖ್ಯ. ಆದರೆ ಗುಡಿಬಂಡೆ 108 ಆಂಬುಲೆನ್ಸ್ ನಲ್ಲಿ ಸೌಲಭ್ಯಗಳ ಕೊರತೆ ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಿಂದ ಕೂಗಳತೆ ದೂರದಲ್ಲಿರುವ ದಪ್ಪರ್ತಿ ಗ್ರಾಮದ ಮಹಿಳೆಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿ ನೋವಿನಿಂದ ಬಳಲುತ್ತಿದ್ದಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ತಕ್ಷಣ 108 ಆಂಬುಲೆನ್ಸ್ ಗೆ ಕರೆ ಮಾಡಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದು ರೋಗಿಗೆ ಉಸಿರಾಟಕ್ಕೆ ತೊಂದರೆ ಆಗುತ್ತಿದೆ ಎಂದು ರೋಗಿಯ ಪರ ಹೇಳಿದಾಗ, ನಮ್ಮಲ್ಲಿ ಆಕ್ಸಿಜನ್ ಖಾಲಿಯಾಗಿದೆ, ಬರಲು ಅರ್ಧಗಂಟೆ ಆಗುತ್ತದೆ ಕಾಯಿತ್ತಿರ? ಇಲ್ಲದಿದ್ದರೆ ನಿಮ್ಮ ಇಷ್ಟ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಆಕ್ಸಿಜನ್ ಖಾಲಿ:
ನೀವು ಹೀಗೆ ಕೇಳಿದರೆ ನಾವೇನು ಮಾಡಬೇಕು ಎಂದು ಕೇಳಿದ್ದಕ್ಕೆ, ನಿಮ್ಮ ಮನೇಲಿ ಗ್ಯಾಸ್ ಖಾಲಿ ಆದಂಗೆ ಆಕ್ಸಿಜನ್ ಸಹ ಖಾಲಿ ಆಗಿದೆ, ನಾವೇನು ಮಾಡುವುದು ಎಂದಿದ್ದಾರೆ, ಆಕ್ಸಿಜನ್ ಬೇಡ ವಾಹನ ಬರೋದಿಕ್ಕೆ ಹೇಳಿದರೆ 5 ಕಿ.ಮೀ ದೂರದಲ್ಲಿರುವ ಊರನ್ನು ತಲುಪಲು ಅರ್ಧಗಂಟೆ ಬೇಕಾ ಎಂದು ಪ್ರಶ್ನಿಸಿದ್ದಕ್ಕೆ, ವಾಹನ ಅವಶ್ಯಕತೆ ಇರುವುದು ನಿಮಗೆ ಬೇಕೆಂದರೆ ಇರಿ ಇಲ್ಲವೇ ನಿಮ್ಮ ಇಷ್ಟ, ರೋಗಿಗಳನ್ನು ಡ್ರಾಪ್ ಮಾಡಿ ಬಂದ ಮೇಲೆ ನಮಗೂ ಕೆಲ ನಿಯಮಗಳಿರುತ್ತೆ ಅದೆಲ್ಲ ಮುಗಿಸಿಕೊಂಡು ಬರುತ್ತೇವೆ, ಎಂಬ ಬೇಜವಾಬ್ದಾರಿ ಉತ್ತರವನ್ನು ನೀಡುವ ಮೂಲಕ, ಪ್ರಾಣ ಹೋಗುವ ಪರಿಸ್ಥಿತಿ ಇದೆ ಎಂದರು ಸಹ ಮಾನವೀಯತೆ ಇಲ್ಲದೆ ಉತ್ತರ ಕೊಟ್ಟಿದ್ದು ಇಂತಹ ಸಿಬ್ಬಂದಿಯಿಂದ ಸರಕಾರದ ಆಶಯಗಳನ್ನು ಈಡೇರಿಸಲು ಸಾಧ್ಯವೇ ಎಂಬ ಪ್ರಶ್ನೆ ಕೇಳಿ ಬಂದಿದೆ.
ಖಾಸಗಿ ವಾಹನಗಳ ಮೊರೆ:
108 ಆಂಬುಲೆನ್ಸ್ ನಿರ್ವಹಣೆ ಮಾಡಬೇಕಾದ ಏಜೆನ್ಸಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನಸಾಮಾನ್ಯರು ತೊಂದರೆಗೆ ಸಿಲುಕುತ್ತಿದ್ದಾರೆ. ಸೌಲಭ್ಯ ವಂಚಿತರು ಖಾಸಾಗಿ ವಾಹನಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಸಮುದಾಯ ಕೇಂದ್ರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅನೇಕ ಪ್ರಕರಣಗಳು ನಡೆಯುತ್ತಿದ್ದರು ಸಹ ಸಂಬಂಧಪಟ್ಟವರು ಮಾತ್ರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಆಕ್ಸಿಜನ್ ಖಾಲಿ:
ಗುಡಿಬಂಡೆ ಪಟ್ಟಣದಲ್ಲಿರುವ ಎಕೈಕ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಸಂಪೂರ್ಣ ಖಾಲಿಯಾಗಿದ್ದು, ಎಮರ್ಜೆನ್ಸಿ ರೋಗಿಗಳು ಕರೆ ಮಾಡಿ ರೋಗಿಯ ಸಮಸ್ಯೆಯ ಬಗ್ಗೆ ವಿಚಾರಿಸುತ್ತಾರೆ, ರೋಗಿಗೆ ಆಕ್ಸಿಜನ್ ಅವಶ್ಯಕತೆ ಇದೆ ಎಂದು ಹೇಳಿದರೆ, ಆಕ್ಸಿಜನ್ ಖಾಲಿಯಾಗಿದೆ ಬನ್ನಿ ಎಂದರೆ ಬರುತ್ತೇವೆ ಇಲ್ಲ ಎಂದರೆ ನಿಮ್ಮಿಷ್ಟ ಎಂಬ ಬೇಜವಾಬ್ದಾರಿತನದ ಉತ್ತರ ಸಿಬ್ಬಂದಿಯಿಂದ ಬರುತ್ತದೆ. ಹೀಗಾದರೆ ಬಡ ರೋಗಿಗಳನ್ನು ಕಾಪಾಡುವವರು ಯಾರು ಎಂಬ ಪ್ರಶ್ನೆ ಎಲ್ಲರದ್ದಾಗಿದೆ.
ಚಿಕ್ಕಬಳ್ಳಾಪುರದ ಡಿಎಚ್ಒ ಡಾ. ಮಹೇಶ್ ಈ ಬಗ್ಗೆ ಮಾತನಾಡಿ, ಬೇಜವಾಬ್ದಾರಿ ತನದಿಂದ ಮಾತನಾಡಿದ 108 ಸಿಬ್ಬಂದಿ ವಿರುದ್ಧ ರೋಗಿ ಅಥವಾ ರೋಗಿಯ ಕಡೆಯವರು ದೂರು ನೀಡಲಿ, ನಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಜರುಗಿಸುತ್ತೇವೆ ಎಂದರು.
ಈ ಬಗ್ಗೆ ಮಾತನಾಡಿದ ಗುಡಿಬಂಡೆ ಆರೋಗ್ಯಧಿಕಾರಿ ಡಾ. ನರಸಿಂಹಮೂರ್ತಿ, ಸಾರ್ವಜನಿಕರು 108 ಗೆ ಕರೆ ಮಾಡಿ ಆಂಬುಲೆನ್ಸ್ ಬೇಕೆಂದು ಹೇಳಿದಾಗ, ಕರೆ ಸ್ವೀಕರಿಸಿರುವ ಗುಡಿಬಂಡೆ 108 ಸಿಬ್ಬಂದಿ ಬೇಜವಾಬ್ದಾರಿಯುತವಾಗಿ ಮಾತನಾಡಿರುವ ವಿಡಿಯೋ ತುಣುಕುಗಳನ್ನು ಜಿಲ್ಲಾ ಅರೋಗ್ಯಧಿಕಾರಿಗಳಿಗೆ ಕಳುಹಿಸಿದ್ದೇನೆ, ಸಂಬಂಧಪಟ್ಟವರ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಗುಡಿಬಂಡೆಯಲ್ಲಿರುವ ಆಂಬುಲೆನ್ಸ್ ನಲ್ಲಿ ಸೌಲಭ್ಯಗಳ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದಿದೆ, ಆಕ್ಸಿಜನ್ ಖಾಲಿಯಾಗಿರುವ ಏಕೈಕ ಕಾರಣಕ್ಕೆ ರೋಗಿಯನ್ನು ಕರೆದುಕೊಂಡು ಬರಲು ಅರ್ಧಗಂಟೆ ಸಮಯ ಕೇಳಿರುವ ಬಗ್ಗೆ ದೂರು ಕೇಳಿ ಬಂದಿದೆ, ಈ ಬಗ್ಗೆ ನೋಟೀಸ್ ನೀಡಿ ಬೇಜವಾಬ್ದಾರಿಯಾಗಿ ಮಾತನಾಡಿರುವ ಸಿಬ್ಬಂದಿಗೆ ನೋಟೀಸ್ ನೀಡಿ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದು ಜಿವಿಕೆ ಸಂಸ್ಥೆ ವ್ಯವಸ್ಥಾಪಕ ಗೋವಿಂದ ರಾಜು ಭರವಸೆ ನೀಡಿದರು.












Click it and Unblock the Notifications