ಡಿಎಂಕೆಯಿಂದ ಉಚ್ಚಾಟನೆಗೊಂಡ ನಟ ರಾಧಾರವಿ ಎಐಎಡಿಎಂಕೆಗೆ
ಚೆನ್ನೈ, ಜೂನ್ 12: ನಟಿ ನಯನತಾರಾ ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣಕ್ಕೆ ಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ನಟ ರಾಧಾರವಿ ಅವರು ಎಐಎಡಿಎಂಕೆ ಪಕ್ಷ ಸೇರಿದ್ದಾರೆ.
ಡಿಎಂಕೆ ಸೇರುವುದಕ್ಕೂ ಮುನ್ನ ರಾಧಾರವಿ ಅವರು ಎಐಎಡಿಎಂಕೆಯಲ್ಲೇ ಇದ್ದರು. ನಟ ಕಮ್ ರಾಜಕಾರಣಿ ಮದ್ರಾಸ್ ರಾಜಗೋಪಾಲನ್ ರಾಧಾಕೃಷ್ಣನ್ ರವಿ ಅಲಿಯಾಸ್ ರಾಧಾರವಿ(66) ಅವರನ್ನು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಪಕ್ಷಕ್ಕೆ ಮತ್ತೊಮ್ಮೆ ಸ್ವಾಗತಿಸಿದರು.
2002ರ ಉಪ ಚುನಾವಣೆಯಲ್ಲಿ ಎಐಎಡಿಎಂಕೆ ಟಿಕೆಟ್ ಪಡೆದು ಸೈದಾಪೇಟ್ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ರವಿ ಆಯ್ಕೆಯಾಗಿದ್ದರು. ಮಾರ್ಚ್ 2017ರಲ್ಲಿ ಎಐಎಡಿಎಂಕೆ ತೊರೆದು ಡಿಎಂಕೆ ಸೇರಿದ್ದರು.

ತಮಿಳು ಚಿತ್ರರಂಗದ ನಟರ ಸಂಘದಲ್ಲಿ ಸಕ್ರಿಯರಾಗಿರುವ ರಾಧಾರವಿ ಅವರು 2002ರ ತನಕ ಸಂಘದ ಅಧ್ಯಕ್ಷರಾಗಿದ್ದರು. 2015ರಲ್ಲಿ ರವಿ ಹಾಗೂ ಸಂಬಂಧಿ ನಟ ಶರತ್ ಕುಮಾರ್ ಬಣವನ್ನು ನಟ ವಿಶಾಲ್, ನಾಸರ್ ಬಣ ಸೋಲಿಸಿ ಹೊಸ ಇತಿಹಾಸ ನಿರ್ಮಿಸಿತು.
2018ರಲ್ಲಿ ಮೀಟೂ ಅಭಿಯಾನದ ಮೂಲಕ ರಾಧಾರವಿ ವಿರುದ್ಧವೂ ಆರೋಪ ಕೇಳಿ ಬಂದಿತು. ನಂತರ 2019ರ ಮಾರ್ಚ್ ನಲ್ಲಿ ನಯನತಾರಾ ವಿರುದ್ಧ ನೀಡಿದ್ದ ಹೇಳಿಕೆಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಡಿಎಂಕೆಯಿಂದ ಉಚ್ಚಾಟಿಸಲಾಯಿತು.












Click it and Unblock the Notifications