ತಬ್ಲಿಘಿ ಜಮಾತ್; ಜಾಮೀನು, ಕ್ರಿಮಿನಲ್ ಕೇಸ್ ರದ್ದು, ದೇಶಕ್ಕೆ ವಾಪಸ್
ಚೆನ್ನೈ, ಜೂನ್ 16 : ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 31 ವಿದೇಶಿ ಪ್ರಜೆಗಳಿಗೆ ಮದ್ರಾಸ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಎಲ್ಲರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಸೂಚನೆ ನೀಡಿದೆ.
ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿತ್ತು. ಮದ್ರಾಸ್ ಹೈಕೋರ್ಟ್ ಎಲ್ಲರಿಗೂ ಜಾಮೀನು ಮಂಜೂರು ಮಾಡಿದೆ.
ವಿದೇಶಿ ಪ್ರಜೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಮುಂದುವರೆಸುವುದು ಆರ್ಟಿಕಲ್ 21ರ ಉಲ್ಲಂಘನೆಯಾಗುತ್ತದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಬದುಕಿನ ಹಕ್ಕು ಕಸಿದಂತೆ ಎಂದು ಹೇಳಿರುವ ನ್ಯಾಯಾಲಯ ಎಲ್ಲರೂ ತಮ್ಮ ತವರು ದೇಶಕ್ಕೆ ವಾಪಸ್ ಹೋಗಬಹುದು ಎಂದು ಹೇಳಿದೆ.

ವಿದೇಶದಿಂದ ಬಂದವರು ನಿಯಮಗಳನ್ನು ಉಲ್ಲಂಘನೆ ಮಾಡಿರುವುದಕ್ಕೆ ಸಾಕಷ್ಟು ಅನುಭವಿಸಿದ್ದಾರೆ. ದೇಶದಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿ ಇದೆ, ಅವರು ತಮ್ಮ ತವರು ದೇಶಕ್ಕೆ ವಾಪಸ್ ಆಗಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 11 ಬಾಂಗ್ಲಾದೇಶ, 20 ಇಂಡೋನೇಷಿಯಾ ಪ್ರಜೆಗಳನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿತ್ತು. ಈ 31 ಜನರಲ್ಲಿ ಯಾರಿಗೂ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿಲ್ಲ.
ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಸಾವಿರಾರು ವಿದೇಶಿಯರು ಪಾಲ್ಗೊಂಡಿದ್ದರು. ಎಲ್ಲರೂ ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ಎಲ್ಲರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವಾರು ಜನರಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿತ್ತು.












Click it and Unblock the Notifications