Breaking: ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯ ಮೊದಲ ಆರೋಪಿ ಬಂಧನ
ಚಂಡೀಘರ್, ಮೇ 31: ಪಂಜಾಬಿ ಗಾಯಕ ಮತ್ತು ರಾಜಕಾರಣಿ ಸಿಧು ಮೂಸೆವಾಲಾರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಮೊದಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮನ್‌ಪ್ರೀತ್‌ನನ್ನು ಬಂಧಿಸಿದ ಪೊಲೀಸರು ಆತನನ್ನು ಕೋರ್ಟ್ ಎದುರು ಹಾಜರುಪಡಿಸಿದರು. ನಂತರ ಐದು ದಿನಗಳ ಕಾಲ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮನ್‌ಪ್ರೀತ್‌ನನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿದ್ದು, ನಿನ್ನೆ ಉತ್ತರಾಖಂಡದಲ್ಲಿ ಈತನನ್ನು ಬಂಧಿಸಲಾಗಿತ್ತು.
ಪೊಲೀಸರ ಪ್ರಕಾರ, ಜಂಟಿ ಪಂಜಾಬ್ ಮತ್ತು ಉತ್ತರಾಖಂಡ್ ಪೊಲೀಸ್ ತಂಡವು ಆರೋಪಿಯನ್ನು ಬಂಧಿಸಿದಾಗ ಹೇಮಕುಂಡ್ ಸಾಹಿಬ್ ಯಾತ್ರೆಯ ಭಾಗವಾಗಿರುವ ಯಾತ್ರಾರ್ಥಿಗಳ ನಡುವೆ ಅಡಗಿಕೊಂಡಿದ್ದನು ಎಂದು ತಿಳಿದು ಬಂದಿದೆ. ಸೋಮವಾರ ಪೊಲೀಸರು ಬಂಧಿಸಿದ ಆರು ಮಂದಿ ಆರೋಪಿಗಳಲ್ಲಿ ಮನ್‌ಪ್ರೀತ್ ಕೂಡ ಒಬ್ಬರಾಗಿದ್ದಾರೆ.

ಮೂಸೆವಾಲಾ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ
ಪಂಜಾಬಿನ ಮಾನ್ಸಾ ಜಿಲ್ಲೆಯ ಸಿಧು ಮೂಸೆವಾಲಾ ಸ್ವಗ್ರಾಮ ಮೂಸಾದಲ್ಲಿರುವ ಕೃಷಿ ಭೂಮಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಈ ವೇಳೆ ಕುಟುಂಬ ಸದಸ್ಯರು ಸಿದ್ದು ಮೂಸೆವಾಲಾ ಅವರ ತಾಯಿಗೆ ಚರಣ್ ಕೌರ್ ಸಾಂತ್ವನ ಹೇಳಿದರು.

ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿಧು ಮೂಸೆವಾಲ ಹತ್ಯೆ ಘಟನೆಯನ್ನು ಖಂಡಿಸಿದ, ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಪಂಜಾಬ್ ಮತ್ತು ಹೈಕೋರ್ಟ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರನ್ನು ಸಿಎಂ ಮನವಿ ಮಾಡಿದ್ದಾರೆ.

ಸಿಧು ಮೂಸೆವಾಲಾ ಕಾರಿನ ಮೇಲೆ ಗುಂಡಿನ ದಾಳಿ
ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೇ 29ರ ಭಾನುವಾರ ಸಿಧು ಮೂಸೆವಾಲಾ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಈ ಹತ್ಯೆಯು ಭಾರೀ ಗಲಾಟೆ ಮತ್ತು ಪ್ರತಿಭಟನೆಗಳಿಗೆ ಕಾರಣವಾಯಿತು. ಪಂಜಾಬಿ ಗಾಯಕನ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆಪ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದ ಮೂಸೆವಾಲಾ
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗಾಯಕ ಸಿಧು ಮೂಸೆವಾಲಾ ಮಾನ್ಸಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಎಎಪಿ ಅಭ್ಯರ್ಥಿ ವಿಜಯ್ ಸಿಂಗ್ಲಾ ವಿರುದ್ಧ 63,000 ಮತಗಳ ಭಾರೀ ಅಂತರದಿಂದ ಸೋಲು ಅನುಭವಿಸಿದ್ದರು. ಭ್ರಷ್ಟಾಚಾರದ ಆರೋಪದ ಮೇಲೆ ವಿಜಯ್ ಸಿಂಗ್ಲಾ ಅವರನ್ನು ಇತ್ತೀಚೆಗೆ ಪಂಜಾಬ್ ಸಿಎಂ ಭಗವಂತ್ ಮಾನ್ ವಜಾಗೊಳಿಸಿದ್ದರು.












Click it and Unblock the Notifications