ಬಂಡೀಪುರ:ಹೃದಯಾಘಾತದಿಂದ ಕಾಡಾನೆ ಸಾವು, ಅರಣ್ಯಾಧಿಕಾರಿಗಳು ಹೇಳಿದ್ದೇನು?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಫೆಬ್ರವರಿ, 04: ಕೇರಳದ ಮಾನಂದವಾಡಿಯಿಂದ ಸೆರೆ ಹಿಡಿದು ತಂದ ತನ್ನೀರು ಎಂಬ ಕಾಡಾನೆಯು ಬಂಡೀಪುರ ಅಭಯಾರಣ್ಯದ ರಾಂಪುರ ಆನೆ ಶಿಬಿರದಲ್ಲಿ ಹೃದಯಾಘಾತ ಮತ್ತು ಟ್ರಾಮ(ಶಾಕ್)ದಿಂದ ಮೃತಪಟ್ಟಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಹಾಸನದ ಬೇಲೂರು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹಾವಳಿ ನೀಡುತ್ತಿದ್ದ ತನ್ನೀರು ಎಂಬ ಕಾಡಾನೆಯನ್ನು ಜನವರಿ 16ರಂದು ಸೆರೆ ಹಿಡಿದು ರೇಡೀಯೋ ಕಾಲರ್ ಅಳವಡಿಸಿ ಬಂಡೀಪುರ ಹುಲಿ ಯೋಜನೆಯ ಮೂಲೆಹೊಳೆ ವಲಯಕ್ಕೆ ಬಿಡಲಾಗಿತ್ತು. ನಂತರ ಆನೆ ಕಬಿನಿ ನದಿ ದಾಟಿ ಕೇರಳದ ಮಾನಂದವಾಡಿ ಅರಣ್ಯ ಪ್ರದೇಶದ ಮಾರ್ಗವಾಗಿ ಫೆಬ್ರವರಿ 1ರಂದು ಜನವಸತಿ ಪ್ರದೇಶ ಮಾನಂದವಾಡಿ ನಗರದ ತಾಲೂಕು ಕಚೇರಿಯ ಕಾಂಪೌಂಡ್‌ನಲ್ಲಿ ಸೇರಿಕೊಂಡು ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದ ಕುರಿತು ಕೇರಳ ಅರಣ್ಯಾಧಿಕಾರಿಗಳು ಬಂಡೀಪುರ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದರು.

ಕಾಡಾನೆಯನ್ನು ಪುನಃ ಕಾಡಿಗೆ ಹಿಮ್ಮೆಟ್ಟಿಸಲು ಯಾವುದೇ ಸಾಧ್ಯತೆ ಇಲ್ಲದೆ ಹಾಗೂ ಆನೆಯು ಮತ್ತೆ ಜನವಸತಿ ಪ್ರದೇಶಕ್ಕೆ ಹಿಂತಿರುಗುವ ಸಾಧ್ಯತೆ ಹೆಚ್ಚಾಗಿತ್ತು. ಆದ್ದರಿಂದ ಕೇರಳ ಹಾಗೂ ಕರ್ನಾಟಕ ಎರಡು ರಾಜ್ಯಗಳ ಅಧಿಕಾರಿಗಳು ಚರ್ಚಿಸಿ ಕಾಡಾನೆಯನ್ನು ಸೆರೆ ಹಿಡಿದು ಬಂಡೀಪುರ ವಿಭಾಗದಲ್ಲಿ ಬಿಡಲು ತೀರ್ಮಾನಿಸಿ ಫೆಬ್ರವರಿ 2ರಂದು ಕೇರಳ ಅರಣ್ಯಾಧಿಕಾರಿಗಳು ಹಾಗೂ ಪಶು ವೈಧ್ಯಾಧಿಕಾರಿಗಳ ತಂಡವು ಆನೆಯನ್ನು ಮಾನಂದವಾಡಿ ನಗರದಲ್ಲಿ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದು ಬಂಡೀಪುರಕ್ಕೆ ರವಾನಿಸಿದ್ದಾರೆ.
ಆದರೆ ಆನೆ ಕರೆತರುತ್ತಿದ್ದ ಮಾರ್ಗದಲ್ಲಿಯೇ ಹೃದಯಾಘಾತ ಮತ್ತು ಟ್ರಾಮ(ಶಾಕ್) ಕಾರಣದಿಂದ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಆನೆ ಮೃತ ಪಟ್ಟಿರುವುದನ್ನು ಫೆಬ್ರವರಿ 3ರ ಬೆಳಗ್ಗೆ 1:30ರ ಸಮಯದಲ್ಲಿ ರಾಂಪುರ ಸಾಕಾನೆ ಶಿಬಿರಕ್ಕೆ ಬಂದ ಕೇರಳದ ಮೂವರು ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಹುಲಿ ಯೋಜನೆಯ ಇಲಾಖಾ ಪಶು ವೈಧ್ಯಾಧಿಕಾರಿ, ಬಂಡೀಪುರ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಗಮನಿಸಿದರು.
ಬಳಿಕ ಅವರು ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‍ಕುಮಾರ್, ಹೆಡೆಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್‌ಗೆ ಮಾಹಿತಿ ನೀಡಿದ್ದಾರೆ. ನಂತರ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಆನೆಯು ಹೃದಯಾಘಾತ ಮತ್ತು ಟ್ರಾಮ(ಶಾಕ್) ಕಾರಣದಿಂದ ಮೃತಪಟ್ಟಿದೆ ಎಂದು ಧೃಡ ಪಡಿಸಿದ್ದಾರೆ.
ಮೃತ ತನ್ನೀರು ಆನೆಯ ದೇಹದ ಕೆಲವು ಅಂಗಾಂಗಳ ಭಾಗಗಳನ್ನು ಸಂಗ್ರಹಿಸಿ ಹೆಚ್ಚಿನ ಮಾಹಿತಿಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಳಾಗಿದೆ. ಬಳಿಕ ಆನೆಯ ಮೃತ ದೇಹವನ್ನು ಇಲಾಖೆ ನಿಯಮಾನುಸಾರ ಅದೇ ಸ್ಥಳದಲ್ಲಿ ಸ್ವಾಭಾವಿಕವಾಗಿ ಬಿಡಲಾಯಿತು.












Click it and Unblock the Notifications