ಹನೂರು: ಕನ್ನಂಬಾಡಿಲೂ ನೀರಿಲ್ಲ, ಕಾಡಲ್ಲೂ ನೀರಿಲ್ಲ: ಬಾಯಾರಿಕೆ ನೀಗಿಸಿಕೊಳ್ಳಲು ರಸ್ತೆಗೆ ಬಂದ ಗಜರಾಜ
ಚಾಮರಾಜನಗರ, ಅಕ್ಟೋಬರ್, 05: ನೀರಿನ ಅಭಾವ ಕೇವಲ ನಾಡಲ್ಲಿ ಮಾತ್ರವಲ್ಲದೇ ಕಾಡಲ್ಲೂ ಕಾಣಿಸಿಕೊಂಡಿದೆ ಎಂಬುದಕ್ಕೆ ರಸ್ತೆಬದಿ ನಿಂತಿದ್ದ ನೀರು ಕುಡಿದ ಈ ಆನೆಯೇ ಸಾಕ್ಷಿ. ಹನೂರು ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆ ಜಮೀನಿನಲ್ಲಿ ಹಾಕಿರುವ ಫೈರುಗಳು ಒಣಗಿರುವುದು ಒಂದೆಡೆಯಾದರೆ, ಅರಣ್ಯದಲ್ಲಿ ಕೆರೆಕಟ್ಟೆಗಳು ಖಾಲಿಯಾಗಿರುವುದರಿಂದ ವನ್ಯ ಪ್ರಾಣಿಗಳು ನಾಡಿನತ್ತ ಬರಲು ಪ್ರಾರಂಭಿಸಿದೆ.
ಮಲೆ ಮಹದೇಶ್ವರ ಬೆಟ್ಟದಿಂದ ಪಾಲಾರ್ ಕಡೆಗೆ ತೆರಳುವ ರಸ್ತೆಯಲ್ಲಿ ಕಾಡಿನಿಂದ ಹೊರಬಂದ ಆನೆಯೊಂದು ರಸ್ತೆಬದಿ ನಿಂತಿದ್ದ ಹಳ್ಳದ ನೀರನ್ನು ಕುಡಿದು ದಣಿವಾರಿಸಿಕೊಂಡಿದೆ. ಇನ್ನು ಆನೆ ನೀರು ಕುಡಿಯುವುದನ್ನು ವಾಹನ ಸವಾರರೋರ್ವ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಕಾಡಾನೆ ಮೃತದೇಹ ಪತ್ತೆ
ಇನ್ನು ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಕುರುಬರಹುಂಡಿಯ ಆಲದ ಮರದ ಹಳ್ಳ ಅರಣ್ಯ ಪ್ರದೇಶದಲ್ಲಿ 35 ವರ್ಷದ ಗಂಡು ಕಾಡಾನೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕಾಡಾನೆಯು ಮತ್ತೊಂದು ಕಾಡಾನೆಯ ಜೊತೆ ಕಾದಾಟ ನಡೆಸಿ ಮೃತಪಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಕಾಡಾನೆಯ ಕಣ್ಣಿನ ಕೆಳಭಾಗದಲ್ಲಿ ಎದುರಾಳಿ ಕಾಡಾನೆಯ ದಂತ ಚುಚ್ಚಿರುವುದು ಕಂಡು ಬಂದಿದ್ದು, ರಕ್ತಸ್ರಾವ ಹಾಗೂ ನಿತ್ರಾಣದಿಂದ ಮೃತಪಟ್ಟಿದೆ. ಎದುರಾಳಿ ಕಾಡಾನೆಯ ದಂತ ಚುಚ್ಚಿ ದಂತವು ಮೃತ ಕಾಡಾನೆಯ ಮೇಲ್ದವಡೆಯವರೆಗೆ 30 ಸೆ.ಮೀ ಆಳದವರೆಗೆ ಹೊಳಹೊಕ್ಕಿದ್ದು, ದವಡೆಯ ಒಳಗೆ ದಂತವು ಮುರಿದಿರುವುದರಿಂದ ಕಾಡಾನೆಯು ಸಾವನ್ನಪ್ಪಿದೆ ಎಂದು ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‍ಕುಮಾರ್ ಮಾಹಿತಿ ನೀಡಿದ್ದಾರೆ.
ಎದುರಾಳಿ ಆನೆಯ ಮುರಿದ ದಂತದ ಭಾಗ ಹಾಗೂ ಮೃತ ಕಾಡಾನೆಯ ಎರಡು ದಂತಗಳನ್ನು ಇಲಾಖೆಯು ವಶಪಡಿಸಿಕೊಂಡು ಮೃತ ಕಾಡಾನೆಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರವನ್ನು ನಿಯಮಾನುಸಾರ ಅರಣ್ಯ ಪ್ರದೇಶದಲ್ಲೇ ಬಿಡಲಾಗಿದೆ.
ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್, ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಓಂಕಾರ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ಇಲಾಖಾ ಪಶುವೈದ್ಯಾಧಿಕಾರಿ ಡಾ.ಮಿರ್ಜಾ ವಾಸಿಂ, ಗಸ್ತು ವನಪಾಲಕ ಸಂತೋಷ್ ಸೇರಿದಂತೆ ಅರಣ್ಯ ವೀಕ್ಷಕ ಹಾಗೂ ಇಲಾಖಾ ಸಿಬ್ಬಂದಿ ವರ್ಗದವರು ಹಾಜರಿದ್ದರು.












Click it and Unblock the Notifications