ನಟ ದರ್ಶನ್ ವಿರುದ್ಧ ವೀರಶೈವ ಲಿಂಗಾಯತ ಮಹಾಸಭಾದ ಮಠಾಧೀಶರ ಪ್ರತಿಭಟನೆ
ಚಾಮರಾಜನಗರ, ಜೂನ್. 18: ತನ್ನದೆ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಚಾಮರಾಜನಗರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಗರದಲ್ಲಿ ಮಠಾಧೀಶರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಚಾಮರಾಜನಗರದ ಚಾಮರಾಜೇಶ್ವರ ದೇಗುಲ ಮುಂಭಾಗ ಹರವೆ ಮಠದ ಸರ್ಪಭೂಷಣ ಸ್ವಾಮೀಜಿ, ಚಾಮರಾಜನಗರ ವಿರಕ್ತ ಮಠದ ಸ್ವಾಮೀಜಿ, ಮರಿಯಾಲ ಮಠದ ಶ್ರೀಗಳ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬೃಹತ್ ಮೆರವಣಿಗೆ ನಡೆಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಭುವನೇಶ್ವರಿ ವೃತ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ನಟ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ದರ್ಶನ್ ನಟನೆಯ ಸಿನಿಮಾ ಸಿಡಿಗಳು, ಪೋಸ್ಟರ್ ಗಳನ್ನು ಸುಟ್ಟು ಧಿಕ್ಕಾರ ಕೂಗಿದ್ದಾರೆ.
ಈ ನಡುವೆ ಪೊಲೀಸರು ಮಧ್ಯ ಪ್ರವೇಶ ಮಾಡಿದ್ದರಿಂದ ಕೆಲಕಾಲ ಪ್ರತಿಭಟನಾಕಾರರು ಹಾಗೂ ಖಾಕಿ ನಡುವೆ ಜಟಾಪಟಿ ನಡೆಯಿತು. ಬಳಿಕ, ಜಿಲ್ಲಾಡಳಿತ ಭನವನದ ತನಕ ಮೆರವಣಿಗೆಯಲ್ಲಿ ತೆರಳಿ ನಟನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ದರ್ಶನ್ ಟೀಂಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಮೃತನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ದರ್ಶನ್ ಮಾಡಿರುವುದು ಸಾಮನ್ಯ ಕೃತ್ಯವಲ್ಲ, ವಿಕೃತಿ
ಇನ್ನು, ಚಿತ್ರನಟ ದರ್ಶನ್ ಮಾಡಿರುವುದು ಸಾಮನ್ಯ ಕೃತ್ಯವಲ್ಲ, ವಿಕೃತಿ ಎಂದು ರೇಣುಕಾಸ್ವಾಮಿ ಕೊಲೆ ಸಂಬಂಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಕಿಡಿಕಾರಿದ್ದಾರೆ. ನಟ ದರ್ಶನ್ ತಾನು ಅಜಾನಬಾಹು ಎಂಬುದನ್ನು ರೇಣುಕಾಸ್ವಾಮಿ ಎದುರು ತೋರಿಸಿಕೊಂಡಿದ್ದಾನೆ. ದರ್ಶನ್‌ಗೆ ಕಠಿಣಾತಿ ಕಠಿಣ ಶಿಕ್ಷೆ ಕೊಡಬೇಕು, ಆತನ ಬೆಂಬಲಕ್ಕೆ ಸಿಎಂ ಹೋಗದಿರುವುದು ಸ್ವಾಗತಾರ್ಹ. ಯಾವ ಮಂತ್ರಿಗಳು, ಶಾಸಕರು ದರ್ಶನ್ ಬೆಂಬಲಕ್ಕೆ ನಿಲ್ಲಬಾರದು ಎಂದು ಆಗ್ರಹಿಸಿದ್ದಾರೆ.
"ಪೊಲೀಸರು ಯಾವ ಪ್ರಭಾವಿ ಮಾತನ್ನೂ ಕೇಳಬಾರದು, ನಿಜವಾದ ಪ್ರಭಾವಿ ರೇಣುಕಾಸ್ವಾಮಿ ಕುಟುಂಬವಾಗಿದೆ. ರೇಣುಕಾಸ್ವಾಮಿ ಕುಟುಂಬದ ಮಾತನ್ನು ಕೇಳಬೇಕು, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ. ನಟ ದರ್ಶನ್ ಮಾಡಿರುವುದು ಸಾಮಾನ್ಯ ಕೃತ್ಯವಲ್ಲ, ವಿಕೃತಿ" ಎಂದು ಒತ್ತಿ ಹೇಳಿದ್ದಾರೆ.












Click it and Unblock the Notifications