ಕಡ್ಡಾಯ ಶಿಕ್ಷಣಕ್ಕಾಗಿ ಉಪ್ಪಾರ ಸಮುದಾಯದಿಂದ ದಿಟ್ಟ ನಿಲುವು: ಮಕ್ಕಳು ಶಾಲೆ ಬಿಟ್ಟರೆ ಸಮುದಾಯವೇ ಕುಟುಂಬದಿಂದ ದೂರ
ತಮ್ಮ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗ ಬಾರದೆಂದು ಚಾಮರಾಜನಗರದ ಉಪ್ಪಾರ ಸಮುದಾಯವು ದಿಟ್ಟ ನಿಲುವೊಂದನ್ನು ತೆಗೆದುಕೊಂಡಿದ್ದು, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿಸಲು ಸಮುದಾಯದ ಮುಖಂಡರು ಮುಂದಾಗಿದ್ದಾರೆ.
ಚಾಮರಾಜನಗರ, ಫೆಬ್ರವರಿ 15: ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಆ ಕುಟುಂಬದಿಂದ ಸಂಪೂರ್ಣ ಸಮುದಾಯವೇ ದೂರಾಗಬೇಕು. ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳ ಶಿಕ್ಷಣಕ್ಕಾಗಿ ಚಾಮರಾಜನಗರದ ಉಪ್ಪಾರ ಸಮುದಾಯ ಈ ರೀತಿ ದಿಟ್ಟ ನಿಲುವೊಂದನ್ನು ತೆಗೆದುಕೊಂಡಿದೆ.
ತಮ್ಮ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಿತರಾಗಬೇಕು, ಉನ್ನತ ವ್ಯಾಸಂಗ ಮಾಡಬೇಕೆಂಬ ನಿಟ್ಟಿನಲ್ಲಿ ಚಾಮರಾಜನಗರದ ಉಪ್ಪಾರ ಸಮುದಾಯವು ದಿಟ್ಟ ನಿಲುವೊಂದನ್ನು ತೆಗೆದುಕೊಂಡಿದ್ದು, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿಸಲು ಸಮುದಾಯದ ಮುಖಂಡರು ಮುಂದಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಪ್ರವರ್ಗ-1 ರ ಅಡಿಯಲ್ಲಿ 158 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಇವರಲ್ಲಿ ಉಪ್ಪಾರ ಸಮುದಾಯದವರೇ ಹೆಚ್ಚಾಗಿದ್ದರು. ಹೀಗಾಗಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ಶಿಕ್ಷಣ ಇಲಾಖೆಯು ಉಪ್ಪಾರ ಸಮಯದಾಯದ ಮುಖಂಡರ ಸಭೆ ನಡೆಸಿ, ಮಕ್ಕಳನ್ನು ಶಾಲೆಗೆ ಕಳುಹಿಸಲು ಜಾಗೃತಿ ಮೂಡಿಸುವಂತೆ ಸಭೆಯಲ್ಲಿ ಮನವಿ ಮಾಡಿದ್ದರು.

ಚಾಮರಾಜನಗರದಲ್ಲಿ 40 , ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನಲ್ಲಿ 39 ಹೀಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಿಕ್ಷಣದ ಮಹತ್ವ ಅರಿತಿರುವ ಉಪ್ಪಾರ ಸಮುದಾಯದ ಮುಖಂಡರು ಯಾರೂ ಕೂಡ ಕಡ್ಡಾಯ ಶಿಕ್ಷಣದಿಂದ ವಂಚಿತರಾಗಬಾರದೆಂದು ಮಂಗಳವಾರದಿಂದಲೇ ಮನೆ ಮನೆಗೆ ತೆರಳಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಉಪ್ಪಾರ ಸಮುದಾಯದ ಸ್ಥಳೀಯ ಪಂಚಾಯತಿಗಳು ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದ್ದು ಸಮುದಾಯದ ಮುಖಂಡರ ಮಾತನ್ನೂ ಯಾರೂ ಮೀರುವುದಿಲ್ಲ. ಒಂದು ವೇಳೆ ತಪ್ಪಿದರೆ ಅವರದೇ ಆದ ದಂಡ ಹಾಗೂ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ.
ಗಡಿ ಯಜಮಾನರುಗಳು ( ಓರ್ವ ಗಡಿ ಯಜಮಾನ ಕನಿಷ್ಠ 18 ಊರುಗಳಿಗೆ ಸಮಯದಾಯದ ಮುಖಂಡ) ಮನೆ ಮನೆಗೆ ತೆರಳಿ ಶಾಲೆಗೆ ಮಕ್ಕಳನ್ನು ಕಳುಹಿಸುವಂತೆ ಮನವಿ ಮಾಡಿ ಮಾಡಿದ್ದಾರೆ. ಒಂದು ವೇಳೆ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇದ್ದರೆ, ನಿಮ್ಮ ಮನೆಯ ಶುಭ-ಅಶುಭ ಕಾರ್ಯಗಳಿಗೆ ತಾವುಗಳು ಬರುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಉಪ್ಪಾರ ಸಮಯದಾಯದಲ್ಲಿ ಅತಿಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ನಡೆಯುತ್ತಿದ್ದವು. ಇದರಿಂದ, ಎಚ್ಚೆತ್ತ ಸಮಯದಾಯವು ಕಳೆದ ಎರಡು ವರ್ಷಗಳ ಹಿಂದೆ ಯಾರೂ ಕೂಡ ಬಾಲ್ಯ ವಿವಾಹವನ್ನು ಮಾಡಬಾರದು, ಬಾಲ್ಯ ವಿವಾಹ ಮಾಡಿದ್ದೇ ಆದರೆ ಸಮುದಾಯ ಸಹಾಯ ಮಾಡುವುದಿಲ್ಲ, ಸಮುದಾಯದ ಮುಖಂಡರು ವೀಳ್ಯಶಾಸ್ತ್ರಕ್ಕೆ ಬರುವುದಿಲ್ಲ, ಕಾನೂನು ಕ್ರಮಕ್ಕೆ ತಾವು ಜವಾಬ್ದಾರರಲ್ಲ ಎಂದು ನಿಲುವು ತೆಗೆದುಕೊಂಡ ಪರಿಣಾಮ ಉಪ್ಪಾರ ಸಮುದಾಯದಲ್ಲಿ ಗಣನೀಯ ಪ್ರಮಾಣದಲ್ಲಿ ಬಾಲ್ಯ ವಿವಾಹ ನಿಂತಿದೆ.
ಈಗ ಶಿಕ್ಷಣಕ್ಕೂ ಕಠಿಣ ಅಸ್ತ್ರ ಪ್ರಯೋಗ ಮಾಡಿದ್ದು, ಯಶಸ್ಸು ಕಾಣುವ ನಿರೀಕ್ಷೆ ಸಮುದಾಯಕ್ಕಿದೆ. ತಮ್ಮ ಸಮಯದಾಯ ಶಿಕ್ಷಣದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎಂದು ಪಣ ತೊಟ್ಟಿರುವ ಉಪ್ಪಾರ ಸಮಯದಾಯದ ನಡೆ ಮಾದರಿಯಾಗಿದೆ.











Click it and Unblock the Notifications