ಚಾಮರಾಜನಗರ: ಪೊಲೀಸ್ ಕಾನ್ಸ್‌ಟೇಬಲ್ ಮನೆಯಲ್ಲೇ ಚಿನ್ನ, ಬೆಳ್ಳಿ, ಹನ ಎಗರಿಸಿದ ಖದೀಮರು
ಚಾಮರಾಜನಗರ, ಅಕ್ಟೋಬರ್, 16: ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳರ ಕರಾಮತ್ತು ಮುಂದುವರೆದಿದೆ. ಇದೀಗ ಪೊಲೀಸ್ ಸಿಬ್ಬಂದಿ ಮನೆಯಲ್ಲೇ ಕಳ್ಳರು ಕೈ ಚಳಕ ತೋರಿರುವ ಘಟನೆ ನಗರದ ಹೊಸ ವಿಎಚ್‌ಪಿ ಶಾಲೆ ಸಮೀಪದ ಮನೆಯಲ್ಲಿ ನಡೆದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಾಮರಾಜನಗರ ಪಟ್ಟಣ ಠಾಣೆ ಕಾನ್ಸ್‌ಟೇಬಲ್ ಮನುಕುಮಾರ್ ಎಂಬವವರ ಮನೆಯಲ್ಲಿ ಕಳ್ಳತನ ಆಗಿದ್ದು, 93 ಗ್ರಾಂ ಚಿನ್ನ, ಒಂದೂವರೆ ಕೆ.ಜಿ. ಬೆಳ್ಳಿ, 40,000 ರೂಪಾಯಿ ಹಣವನ್ನು ಹೊತ್ತೊಯ್ದಿದ್ದಾರೆ. ಮನೆ ಮಂದಿ ಕಳೆದ ಸೋಮವಾರದಂದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಇಂದು ಮಧ್ಯಾಹ್ನ ಬಂದು ನೋಡಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿ ಕಳ್ಳರು ಬಾಗಿಲು ಮೀಟಿ ಕೃತ್ಯ ಎಸಗಿದ್ದಾರೆ.

ಜಿಲ್ಲೆಯಲ್ಲಿ ಕಳವು ಪ್ರಕರಣಗಳು ಒಂದರ ಹಿಂದೆ ಒಂದಂತೆ ನಡೆಯುತ್ತಿದ್ದು, ಇದೀಗ ಖಾಕಿ ಮನೆಗೇ ಕಳ್ಳರು ಕನ್ನ ಹಾಕಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಗುಂಡ್ಲುಪೇಟೆ ಪಟ್ಟಣದಲ್ಲಿ ಆಟೋ ಚಾಲಕ ಸೇರಿದಂತೆ ಇಬ್ಬರ ಮನೆಯಲ್ಲಿ ಕನ್ನ ಹಾಕಿ ನಗದು, ಚಿನ್ನ ಎಗರಿಸಿದ್ದರು.
ಇದಕ್ಕೂ ಮುನ್ನ ಚಾಮರಾಜನಗರದ ಭುವನೇಶ್ವರಿ ವೃತ್ತದ ಸಮೀಪದ 3 ಅಂಗಡಿಗಳಿಗೆ ಏಣಿ ಮೂಲಕ ಹತ್ತಿ ನಗದು ಕದ್ದೊಯ್ದಿದ್ದರು. ಹನೂರು ತಾಲೂಕಿನಲ್ಲೂ ಕಳ್ಳತನ ಪ್ರಕರಣಗಳು ವರದಿ ಆಗಿದ್ದು, ಸದ್ಯ ಜನರು ಬೆಚ್ಚಿ ಬೀಳುವಂತಾಗಿದೆ.
ಸಿಸಿ ಕ್ಯಾಮೆರಾ ತೆಗೆಸುವಂತೆ ಬೆದರಿಕೆ: ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದೀಗ ತಮ್ಮ ಅಂಗಡಿಗಳಲ್ಲಿ ಅಳವಡಿಕೆ ಮಾಡಿರುವ ಸಿಸಿಟಿವಿ ಕ್ಯಾಮೆರಾವನ್ನು ತೆಗೆದು ಹಾಕುವಂತೆ ಚಿನ್ನದಂಗಡಿ ಹಾಗೂ ಬಟ್ಟೆ ಅಂಗಡಿ ಮಾಲೀಕರಿಗೆ ಅಪರಿಚಿತರು ಬೆದರಿಕೆ ಪತ್ರ ಅಂಟಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಎಂ.ಕೆ.ಸುಬ್ರಮಣ್ಯ, ಎಂ.ಕೆ.ಶ್ರೀನಿವಾಸ ಹಾಗೂ ವಾಸುಕಿ ಎಂಬುವವರಿಗೆ ಬೆದರಿಕೆ ಪತ್ರ ಬರೆದು ಅಂಚೆ ಮೂಲಕ ಕಳುಹಿಸಲಾಗಿದೆ.
ನಿಮ್ಮ ಅಂಗಡಿಗಳ ಮುಂದೆ ಇರುವ ಸಿಸಿ ಕ್ಯಾಮೆರಾ ತೆಗೆಸಿ, ಇಲ್ಲದಿದ್ದರೇ ತಕ್ಕ ಪಾಠ ಕಲಿಸುತ್ತೇವೆ ಎಂದು ಡೇಂಜರ್ ಸಿಂಬಲ್ ಬರೆದು ಕಳುಹಿಸಿದ್ದಾರೆ. ಮೂರು ಅಂಗಡಿ ಮಾಲೀಕರ ಹೆಸರು ಬರೆದು ಬೆದರಿಕೆ ಹಾಕಿರುವ ಆಸಾಮಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ಕೊಡಲಾಗಿದೆ. ಇದರ ಬೆನ್ನಲೆ ನಿನ್ನೆ (ಅಕ್ಟೋಬರ್ 02) ರಾತ್ರಿ ಮೂರು ಅಂಗಡಿಗಳಲ್ಲಿ ಕಳ್ಳತನ ಆಗಿದ್ದು, ವ್ಯಾಪಾರಿಗಳನ್ನು ಬೆಚ್ಚಿ ಬೀಳಿಸಿದೆ.
ಸರಣಿ ಕಳ್ಳತನ: ಚಾಮರಾಜನಗರದ ಹೃದಯಭಾಗದಲ್ಲೇ, ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತ ಆಸುಪಾಸಲ್ಲೇ ಸರಣಿ ಕಳ್ಳತನ ತಡರಾತ್ರಿ ನಡೆದಿದ್ದು ವ್ಯಾಪರಸ್ಥರು, ಉದ್ಯಮಿಗಳು ಇದರಿಂದ ದಿಗಿಲುಗೊಂಡಿದ್ದಾರೆ.
ಸ್ವಾಗತ್ ಟ್ರೇಡರ್ಸ್, ಪ್ರಭು ಎಲೆಕ್ಟ್ರಿಕಲ್, ವಿನಯ್ ಆಟೋಮೊಬೈಲ್‌ಗಳಲ್ಲಿ ಕಳ್ಳತನ ನಡೆದಿದ್ದು, ಸಿಸಿಟಿವಿಗಳನ್ನು ಜಖಂ ಮಾಡಿ, ಏಣಿಗಳನ್ನು ಬಳಸಿ ಕಳ್ಳರು ಕೃತ್ಯ ಎಸಗಿದ್ದಾರೆ. ಅಂಗಡಿಗಳ ಗ್ಲಾಸ್ ಕೂಡ ಒಡೆದು ಹಾಕಿರುವ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು, ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಹನೂರು ತಾಲ್ಲೂಕಿನಲ್ಲಿ ಹಾಡಹಗಲೇ ವೃದ್ಧನ ಕೈ-ಕಾಲು ಕಟ್ಟಿ ಹಣ ದೋಚಿದ್ದರು. ಇದಕ್ಕೂ ಮುನ್ನ, ಹನೂರಲ್ಲೇ ಮದುವೆಗೆ ಕೂಡಿಟ್ಟಿದ್ದ ಹಣವನ್ನು ದೋಚಿದ್ದರು.
ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ಅಂಗಡಿಗಳ ಸರಣಿ ಕಳ್ಳತನ ನಡೆಸಿದ್ದರು. ಈಗ ಚಾಮರಾಜನಗರದ ಹೃದಯಭಾಗದಲ್ಲೇ ಕಳ್ಳರು ಕೃತ್ಯ ಎಸಗಿದ್ದು ವ್ಯಾಪಾರಿಗಳು ಪತರಗುಟ್ಟಿದ್ದಾರೆ. ನಗರದ ಸರಣಿ ಕಳ್ಳತನ ಸ್ಥಳಗಳಿಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications