ಸೋರುತ್ತಿರುವ ನೀರಿನ ಟ್ಯಾಂಕ್: ಕಳಪೆ ಕಾಮಗಾರಿಗೆ ಸಾಕ್ಷಿ
ಗುಂಡ್ಲುಪೇಟೆ: ಮೇಲ್ನೋಟಕ್ಕೆ ಅಭಿವೃದ್ಧಿ ಕಾಮಗಾರಿ ನಡೆಸಿದ್ದೇವೆ ಎಂದು ಬಿಂಬಿಸಿ ಅದರಲ್ಲಿ ಒಂದಷ್ಟು ಹಣ ಕೊಳ್ಳೆ ಹೊಡೆದು ಜೇಬು ತುಂಬಿಸಿಕೊಳ್ಳುವವರ ಸಂಖ್ಯೆ ಹೆಚ್ಚಾದ ಕಾರಣ ಅಭಿವೃದ್ಧಿ ಕಾಮಗಾರಿಗಳು ಯಾವುದೂ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಎಂಬುದಕ್ಕೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಇತ್ತೀಚೆಗೆ ನಿರ್ಮಿಸಿದ ನೀರಿನ ಟ್ಯಾಂಕ್ ಸಾಕ್ಷಿಯಾಗಿದೆ.
ಜನರಿಗೆ ನೀರು ಕಲ್ಪಿಸುವ ಉದ್ದೇಶದಿಂದ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಇತ್ತೀಚೆಗೆ ನಿರ್ಮಿಸಿದ ನೀರಿನ ಟ್ಯಾಂಕ್ ಉದ್ಘಾಟನೆಗೂ ಮೊದಲೇ ಸೋರುತ್ತಿದ್ದು, ಸಮೀಪದ ಗೇಟ್ ವಾಲ್ವ್ ಚೇಂಬರ್ ಒಡೆದುಹೋಗಿರುವುದು ಕಳಪೆ ಕಾಮಗಾರಿಗೆ ನಿದರ್ಶನವಾಗಿದೆ.

ಸುಮಾರು 13 ಲಕ್ಷ ರೂಪಾಯಿ ವೆಚ್ಚದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್‍ಗೆ ನೀರು ತುಂಬಿಸಲಾಗುತ್ತಿದ್ದು, ಟ್ಯಾಂಕ್‍ನಲ್ಲಿ ನೀರು ಸಂಗ್ರಹವಾಗದೆ ಸೋರುತ್ತಿದೆ. ಅಲ್ಲದೆ ಮಳೆಗೆ ಸಮೀಪದಲ್ಲಿ ನಿರ್ಮಿಸಿದ್ದ ಗೇಟ್ ವಾಲ್ವ್ ನ ಸುತ್ತುಗೋಡೆ ಬಿರುಕುಬಿಟ್ಟಿದೆ.

ನಿರ್ಮಾಣ ಸಂದರ್ಭದಲ್ಲಿ ಗುಣಮಟ್ಟ ನಿರ್ವಹಣೆ ಮಾಡದೆ ಮಣ್ಣಿನ ಮೇಲೆಯೇ ಗೋಡೆ ಕಟ್ಟಿದ್ದರಿಂದ ಮಳೆ ನೀರಿನ ತೇವಾಂಶಕ್ಕೆ ಗೋಡೆ ಕುಸಿದಿದೆ. ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಕೆ ಮಾಡಿದ್ದರಿಂದ ಬಳಕೆಗೂ ಮೊದಲೇ ಬಿರುಕುಬಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಸಂಪೂರ್ಣ ನೀರು ತುಂಬಿದ ನಂತರ ಟ್ಯಾಂಕ್ ಕುಸಿದು ಬಿದ್ದರೆ ಅನಾಹುತವಾಗಲಿರುವುದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.












Click it and Unblock the Notifications