ಸಿಲ್ಕಲ್ ಪುರದಲ್ಲಿ 7 ವರ್ಷದ ಬಾಲಕನ ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು
ಚಾಮರಾಜನಗರ, ಅಕ್ಟೋಬರ್.14: ಅನೈತಿಕ ಸಂಬಂಧಕ್ಕೆ ಸಾಕ್ಷಿಯಾಗಿದ್ದ ಮಗನನ್ನು ಕೆರೆಯಲ್ಲಿ ಮುಳಗಿಸಿ ತಾಯಿ ಹಾಗೂ ಆಕೆಯ ಪ್ರಿಯಕರ ಕೊಲೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರ ಗ್ರಾಮದಲ್ಲಿ ನಡೆದಿದೆ.
ಸಿಲ್ಕಲ್ ಪುರ ಗ್ರಾಮದ ನಂಜುಂಡಸ್ವಾಮಿರವರ ಪುತ್ರ ಪ್ರೀತಂ(7) ಕೊಲೆಯಾದ ದುರ್ದೈವಿ. ಈತ ಒಂದು ವಾರದಿಂದ ಕಾಣೆಯಾಗಿದ್ದು, ಬಳಿಕ ಶವವಾಗಿ ಪತ್ತೆಯಾಗಿದ್ದನು. ಈತನ ಸಾವಿನ ಹಿಂದಿನ ರಹಸ್ಯ ಭೇದಿಸಿದ ಪೊಲೀಸರಿಗೆ ಬಾಲಕನ ತಾಯಿ ಮತ್ತು ಪ್ರಿಯಕರನೇ ಹಂತಕರು ಎನ್ನುವುದು ಪತ್ತೆಯಾಗಿದ್ದು, ಇದೀಗ ಅವರಿಬ್ಬರನ್ನು ಬಂಧಿಸಲಾಗಿದೆ.
ಅ.6ರಂದು ಬಾಲಕ ಪ್ರೀತಂ ನಾಪತ್ತೆಯಾಗಿದ್ದು, ಈ ಸಂಬಂಧ ಪೋಷಕರು ದೂರು ನೀಡಿದ್ದರು. ಆದರೆ ಅ.10 ರಂದು ಗ್ರಾಮದ ಕೆರೆಯಲ್ಲಿ ನಾಪತ್ತೆಯಾಗಿದ್ದ ಪ್ರೀತಂನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಬಾಲಕನ ಸಾವು ಸಂಶಯಾಸ್ಪದವಾಗಿದ್ದುದರಿಂದ ಪೊಲೀಸರು ತನಿಖೆ ಆರಂಭಿಸಿದಾಗ ಬಾಲಕ ಪ್ರೀತಂ ಸಾವಿನ ಹಿಂದೆ ಆತನ ತಾಯಿಯ ಅನೈತಿಕ ಸಂಬಂಧ ಇರೋದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಾಲಕನ ತಾಯಿ ಸಾಕಮ್ಮ ಮತ್ತು ಆಕೆಯ ಪ್ರಿಯಕರ ನಾಗರಾಜ್ ಮೂರ್ತಿಯವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾವೇ ಪ್ರೀತಂನನ್ನು ನೀರಿನಲ್ಲಿ ಮುಳುಗಿಸಿ ಕೊಂದಿರುವ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕೊಳ್ಳೇಗಾಲ ಸರ್ಕಲ್ ಇನ್ಸ್ ಪೆಕ್ಟರ್ ರಾಜಣ್ಣ, ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ವನರಾಜು ನೇತೃತ್ವದಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ.












Click it and Unblock the Notifications