ಬಂಡೀಪುರದಲ್ಲಿ ತುಂಬಿ ತುಳುಕುತ್ತಿರುವ 350ಕ್ಕೂ ಹೆಚ್ಚು ಕೆರೆಗಳು, ನೋಡುಗರಿಗೆ ಉಲ್ಲಾಸ
ಚಾಮರಾಜನಗರ, ಆಗಸ್ಟ್, 20: ಈ ಬಾರಿ ಸುರಿದ ಉತ್ತಮ ಮುಂಗಾರಿನಿಂದ ಆಣೆಕಟ್ಟಗಳು ಭರ್ತಿಯಾಗಿರುವುದಷ್ಟೇ ಅಲ್ಲದೆ, ಕೆರೆ ಕಟ್ಟೆಗಳೂ ಸಹ ತುಂಬಿ ಹಸಿರನಿಂದ ಕಂಗೊಳಿಸುವಂತೆ ಮಾಡಿವೆ. ಪ್ರಾಣಿ, ಪಕ್ಷಿಗಳಿಗೆ ಜೀವಜಲದ ಕೊರತೆಯಾಗದಂತೆ ವರುಣ ದಯೆ ತೋರಿದ್ದಾನೆ.
ಜುಲೈ ಅಂತ್ಯ ಹಾಗೂ ಆಗಸ್ಟ್ ಮೊದಲನೇ ವಾರದ ಆರಂಭದಲ್ಲಿ ಭಾರೀ ಮಳೆ ಸುರಿದ ಕಾರಣ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 373 ಕೆರೆಗಳಿದ್ದು, ಇವುಗಳಲ್ಲಿ 350ಕ್ಕೂ ಹೆಚ್ಷು ಕೆರೆಗಳು ತುಂಬಿ ತುಳುಕುತ್ತಿವೆ. ಎಲ್ಲಿ ನೋಡಿದರೂ ಗಿಡ, ಮರಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಇದರಿಂದ ಪ್ರಾಣಿಗಳಿಗೆ ಮೇವು, ನೀರಿಗೆ ಕೊರತೆ ತಪ್ಪಿದಂತಾಗಿದೆ. ಮತ್ತೊಂದೆಡೆ ಸಫಾರಿಗರು ಕಾಡಿನ ನೋಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಗುಂಡ್ಲುಪೇಟೆ, ಕೇರಳ ಹಾಗೂ ತಮಿಳುನಾಡಿನ ಗಡಿಭಾಗದ ಕಾಡಂಚಿನ ಭಾಗದಲ್ಲಿ ಸತತವಾಗಿ ಮಳೆಯಾಗಿತ್ತು. ಇದರ ಪರಿಣಾಮದಿಂದ ಕಾಡಿನಲ್ಲಿರುವ ನೂರಾರು ಕೆರೆಗಳು ಮೈದುಂಬಿ ತುಳುಕುತ್ತಿವೆ. ಕಾಡು ಪ್ರಾಣಿಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಉದ್ಭವಿಸದ ವಾತಾವರಣ ನಿರ್ಮಾಣವಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ತಮಿಳುನಾಡಿನ ಮಧುಮಲೈ, ಕೇರಳದ ವೈನಾಡು ವನ್ಯಜೀವಿ ಅಭಯಾರಣ್ಯವನ್ನು ಹೊಂದಿಕೊಂಡಿದೆ. ಈ ಭಾಗದಲ್ಲಿ ಸತತವಾಗಿ ವರುಣ ಆರ್ಭಟಿಸಿದ್ದರಿಂದ 13 ವಲಯಗಳಲ್ಲಿನ 350 ಕೆರೆಗಳು ಭರ್ತಿಯಾಗಿವೆ. ಈ ಸುಂದರ ಹಚ್ಚಹಸಿರಿನ ವಾತಾವರಣ ಪರಿಸರ ಪ್ರೇಮಿಗಳ ಸಂತೋಷಕ್ಕೆ ಕಾರಣವಾಗಿದೆ.

ಸೋಲಾರ್ ಪಂಪ್‌ಸೆಟ್‌ಗಳಲ್ಲಿ ಕೆರೆಗೆ ನೀರು
ಈಗಾಗಲೇ ಭಾರೀ ಮಳೆ ಸುರಿದಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆರೆಗಳಲ್ಲಿ ನೀರು ತುಂಬಿ ತುಳುಕುತ್ತಿದೆ. ಇದು ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ದಾಹ ತೀರಿಸುತ್ತದೆ. ಕಾಡಿನ ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೆಲವೆಡೆ ಸೋಲಾರ್ ಪಂಪ್ಗಳ ಮೂಲಕವೂ ಕೆರೆಗೆ ನೀರು ತುಂಬಿಸಲಾಗುತ್ತಿತ್ತು. ಆದರೆ ಈಗಾಗಲೇ ಕೆರೆಗಳು ಭರ್ತಿಯಾಗಿರುವ ಹಿನ್ನೆಲೆ ಬೇಸಿಗೆಯಲ್ಲಿ ನೀರಿನ ಕೊರತೆ ಬಾಧಿಸದು ಎಂಬುದು ಅರಣ್ಯ ಇಲಾಖೆಯ ವಿಶ್ವಾಸವಾಗಿದೆ.

ಸಮೃದ್ಧವಾಗಿ ಬೆಳೆದ ಮೇವು
ಬಂಡೀಪುರ ವಲಯದ ನೀಲಕಂಠರಾವ್ ಕೆರೆ, ಸೊಳ್ಳಿಕಟ್ಟೆ, ತಾವರಗಟ್ಟೆ, ಕುಂದುಕೆರೆ ವಲಯದ ಮಾಲಗಟ್ಟೆ, ಕಡಬೂರು ಕಟ್ಟೆ, ದೇವರ ಮಾಡು, ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿಕೆರೆ ಕೋಳಚಿಕಟ್ಟೆ, ಹಗ್ಗದ ಹಳ್ಳದ ಕಟ್ಟೆ ಮುಂತಾದ ಕೆರೆಗಳಿಗಳಿಗೆ ನೀರು ತುಂಬಿಸಲಾಗಿದೆ. ಎಲ್ಲಾ ವಲಯದಲ್ಲಿ ಹೆಚ್ಚು ಮಳೆ ಆಗಿರುವುದರಿಂದ ಹಸಿರು ಕಂಗೊಳಿಸುತ್ತಿದ್ದು, ಪ್ರಾಣಿಗಳಿಗೆ ಮೇವು ಸಮೃದ್ಧವಾಗಿದೆ. ನುಗು, ಯಡಿಯಲ, ಓಂಕಾರ, ಮೊಳೆಯೂರು ವಲಯದ ಭಾಗದಲ್ಲಿರುವ ಕೆರೆಗಳು ಸಹ ಭರ್ತಿಯಾಗಿದೆ.

ಕಡಿಮೆ ಆದ ಕಾಡು ಪ್ರಾಣಿಗಳ ಹಾವಳಿ
ಕಾಡಿನಲ್ಲಿ ಮಳೆ ಕಡಿಮೆ ಆಗಿ ಕೆರೆ ಕಟ್ಟೆಗಳು ತುಂಬದಿದ್ದರೆ ಅಲ್ಲಿನ ಗ್ರಾಮಗಳ ಜಮೀನುಗಳಿಗೆ ಪ್ರಾಣಿಗಳು ದಾಳಿ ಮಾಡಿ ಗೀಳಿಗಿಡುತ್ತವೆ. ಇದರಿಂದ ಮಾನವ, ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತಿತ್ತು. ಈಗ ಕಾಡಿನ ಭಾಗದಲ್ಲಿ ಉತ್ತಮ ಮಳೆ ಆಗಿರುವುದರಿಂದ ಎಲ್ಲೆಡೆ ಹಸಿರು ಹುಲ್ಲು ಬೆಳೆದು ನಿಂತಿದೆ. ಸಫಾರಿ ವಲಯದಲ್ಲಂತೂ ಕಾಡು ಸಂಪೂರ್ಣ ಹಸಿರು ಹೊದ್ದು ನಿಂತಿದ್ದು, ಆನೆ, ಕಾಡೆಮ್ಮೆ, ಜಿಂಕೆಗಳ ಹಿಂಡು ಕೆಲವೊಮ್ಮೆ ಹುಲಿಗಳು ಕಾಣಿಸಿಕೊಳ್ಳುತ್ತವೆ ಎಂದು ಅಲ್ಲಿನ ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಹೇಳಿದರು.

ಅತೀ ಹೆಚ್ಚು ಹುಲಿಗಳ ತಾಣವಾದ ಅರಣ್ಯ
ಬಂಡೀಪುರ ಅಭಯಾರಣ್ಯ ಹುಲಿ ರಕ್ಷಿತ ಅರಣ್ಯ ಪ್ರದೇಶ ಆಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಹುಲಿಯನ್ನು ಹೊಂದಿರುವ ಕಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಲ್ಲದೇ ಆನೆ, ಚಿರತೆ ಹಾವಳಿಯೂ ಈ ಭಾಗದ ಗಡಿಯ ಗ್ರಾಮಗಳಲ್ಲಿ ಹೆಚ್ಚಾಗಿತ್ತು. ಇದೀಗ ಈ ಭಾಗರದಲ್ಲಿ ಹೆಚ್ಚಾಗಿ ಮಳೆ ಆಗಿದ್ದು, ಪ್ರಾಣಿಗಳಿಗೆ ಸಮೃದ್ಧವಾಗಿ ಮೇವು ಸಿಕ್ಕಂತಾಗಿದೆ. ಇದರಿಂದ ಗ್ರಾಮಗಳಿಗೆ ಪ್ರಾಣಿಗಳು ದಾಳಿ ಮಾಡುವುದು ತಪ್ಪಿದಂತಾಗಿದೆ.












Click it and Unblock the Notifications