• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿ‌ ವಿಶೇಷ: ಮಹದೇಶ್ವರ ಬೆಟ್ಟದಲ್ಲಿ ಅದ್ದೂರಿಯಾಗಿ ನೆರವೇರಿದ ಹಾಲರವೆ ಉತ್ಸವ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 25: ಪ್ರಸಿದ್ಧ ಯಾತ್ರಾ ಸ್ಥಳ ಹನೂರು ತಾಲೂಕಿನ ಮಲೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಪ್ರಯುಕ್ತ ಮಂಗಳವಾರ ಹಾಲರವೆ ಉತ್ಸವ ಸಂಭ್ರಮ, ಸಡಗರದಿಂದ ಬೇಡಗಂಪಣ ವಿಧಿ ವಿಧಾನದಲ್ಲಿ ಸಂಪ್ರದಾಯ ಬದ್ಧವಾಗಿ ನೆರವೇರಿದೆ.

ಪ್ರತಿ ವರ್ಷ ದೀಪಾವಳಿ ಜಾತ್ರೆಯ ಸಮಯದಲ್ಲಿ ಅಮಾವಾಸ್ಯೆ ದಿನದಂದು ಈ ಉತ್ಸವ ನಡೆಯಲಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್‌ 19 ಕಾರಣದಿಂದ ಭಕ್ತರಿಗ ನಿರ್ಬಂಧ ವಿಧಿಸಲಾಗಿತ್ತು. ಸ್ಥಳೀಯರ ಉಪಸ್ಥಿತಿಯಲ್ಲಿ ಮಾತ್ರ ಉತ್ಸವ ನಡೆದಿತ್ತು. ಆದರೆ ಈ ಬಾರಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಹಾಲರವಿ ಉತ್ಸವವನ್ನು ಕಣ್ತುಂಬಿಕೊಂಡರು.

ಸ್ಥಳೀಯ ಬೇಡಗಂಪಣ ಸಮುದಾಯದವರು ಮಾದೇಶ್ವರನಿಗೆ ನಡೆಸುವ ಉತ್ಸವ ಇದಾಗಿದ್ದು, ಸಮುದಾಯದ 10 ರಿಂದ 12 ವರ್ಷದ 101 ಹೆಣ್ಣು ಮಕ್ಕಳು ಇದರಲ್ಲಿ ಭಾಗಿಯಾಗುತ್ತಾರೆ.

ಉತ್ಸವದಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳು ಉಪವಾಸ ಇರುತ್ತಾರೆ. ಎಲ್ಲರೂ ಬೆಳ್ಳಂಬೆಳಗ್ಗೆ ಬೆಟ್ಟದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ಹಾಲರವಿ ಬಾವಿಗೆ ತೆರಳಿ ಅಲ್ಲಿ ಸ್ನಾನ ಮಾಡಿ ಹಿತ್ತಾಳೆಯ ಕಳಶದಲ್ಲಿ ಹಾಲರವಿ ಹಳ್ಳದ ನೀರನ್ನು ತುಂಬಿ, ಅದನ್ನು ತಲೆ ಮೇಲೆ ಇರಿಸಿ ಕಳಶಗಳಿಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಬಳಿಕ 101 ಹೆಣ್ಣು ಮಕ್ಕಳು ಕಳಶವನ್ನು ಹೊತ್ತು ಏಳು ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಿ ಬಂದು ಬೆಟ್ಟದ ಪ್ರವೇಶ ದ್ವಾರ ತಲುಪುತ್ತಾರೆ.

ಹಾಲರವಿ ಉತ್ಸವ ಜರಗುವುದಕ್ಕೂ ಮುನ್ನ ಕತ್ತಿ ಪವಾಡ ನಡೆಯುತ್ತದೆ. ಹರಕೆ ಹೊತ್ತ ಭಕ್ತರೊಬ್ಬರು ಕತ್ತಿಯ ಅಲಗಿನ ಮೇಲೆ ಮಲಗುತ್ತಾರೆ. ಅವರ ಮೇಲೆ ಬೇಡಗಂಪಣ ಅರ್ಚಕರು ನಡೆದುಕೊಂಡು ಹೋಗುತ್ತಾರೆ.

ಏಳು ಕಿ.ಮೀ ದೂರದಿಂದ ನೀರು ತರುವ ಹೆಣ್ಣುಮಕ್ಕಳು ಉಪವಾಸವಿದ್ದು, ಬರಿಗಾಲಲ್ಲಿ ನಡೆದುಕೊಂಡು ಬರುತ್ತಾರೆ. ಮಾರ್ಗ ಮಧ್ಯದಲ್ಲಿ ಯಾವುದೇ ದುಷ್ಟಶಕ್ತಿಗಳ ಕಣ್ಣು ಬಿದ್ದಿದ್ದರೂ ಕತ್ತಿ ಪವಾಡ ಮಾಡುವ ಸ್ಥಳದಲ್ಲಿ ಇವು ನಿಲ್ಲುವುದಿಲ್ಲ, ಪವಾಡ ಮಾಡಿದ ಸ್ಥಳದಿಂದ ಹಾಲರವೆ ಗಂಗೆ ಶುದ್ಧಳಾಗುತ್ತಾಳೆ ಎಂಬ ನಂಬಿಕೆ ಭಕ್ತರದ್ದಾಗಿದೆ.

ಮಂಗಳವಾರ ಸೂರ್ಯಗ್ರಹಣ ಇದ್ದು, ಇಂದೂ ಕೂಡ ಪೂಜೆ ಪುನಸ್ಕಾರಗಳು ನಿಗದಿಯಂತೆ ನಡೆಯಲಿದೆ. ದೇವರ ದರ್ಶನಕ್ಕೆ ಅವಕಾಶ ಇದೆ.

ತೆಪ್ಪೋತ್ಸವ ರದ್ಧು

ಪ್ರತಿವರ್ಷ ಮಹದೇಶ್ವರ ಬೆಟ್ಟದಲ್ಲಿ ರಥೋತ್ಸವದ ದಿನ ರಾತ್ರಿ ತೆಪ್ಪೋತ್ಸವದ ಮೂಲಕ ಕೊನೆಯಾಗುವುದು ವಾಡಿಕೆ, ಆದರೆ ಬೆಟ್ಟದ ದೊಡ್ಡಕೆರೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ತೆಪ್ಪೋತ್ಸವವನ್ನು ರದ್ದು ಮಾಡಲಾಗಿದೆ. ಹಾಗಾಗಿ ಬುಧವಾರ ಮಹಾರಥೋತ್ಸವ ನಡೆಯಲಿದ್ದು, ಆ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

English summary
Lakhs of Devotees Gathered at the Male Mahadeshwara Hill to witness the Historical Halarave Utsav, As many as 101 girls aged between 10 and 12 years belonging to Bedagampanna community bring holy water from Haalaahalla nearly 7 km from MM Hills for Abhisheka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X