ಆಂಗ್ಲಮಯವಾದ ಬಂಡೀಪುರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೆಗೆದುಕೊಂಡ ದೃಢ ನಿರ್ಧಾರ ಏನು ಗೊತ್ತಾ?
ಚಾಮರಾಜನಗರ, ಅಕ್ಟೋಬರ್, 27: ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕನ್ನಡ ಮಾಯವಾಗಿದೆ ಎಂದು ಸಫಾರಿಗರೊಬ್ಬರು ದೂರಿದ ಹಿನ್ನೆಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅರಣ್ಯ ಇಲಾಖೆಗೆ ಪತ್ರ ಬರೆದು ಕನ್ನಡ ಬಳಸುವಂತೆ ಸೂಚಿಸಿದೆ.
ಬಂಡೀಪುರ ಸಫಾರಿ ವಾಹನ ನಿಲುಗಡೆ, ಹಲವು ಫಲಕಗಳಲ್ಲಿ ಕನ್ನಡವನ್ನು ಬಳಸುತ್ತಿಲ್ಲ. ಕನ್ನಡ ಬಳಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಇ-ಮೇಲ್ ಕಳುಹಿಸಿ ಹಾಗೂ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದರು. ಅರವಿಂದಶರ್ಮಾ ಅವರ ದೂರಿಗೆ ಸ್ಪಂದಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಕನ್ನಡ ಬಳಸುವಂತೆ ತಿಳಿಸಿದೆ.

1963 ರಾಜಭಾಷಾ ಅನ್ವಯ ಕರ್ನಾಟಕದ ಎಲ್ಲಾ ಇಲಾಖೆಗಳು ಆಡಳಿತವಾಗಿ, ವ್ಯವಹಾರಿಕವಾಗಿ ಕನ್ನಡ ಬಳಸಬೇಕು. ಸಂಪೂರ್ಣ ಕನ್ನಡ ಬಳಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಪ್ರಾಧಿಕಾರ ತಿಳಿಸಿದೆ.
ಬಾಯಿಗೆ ಬೀಗ ಹಾಕಿಕೊಂಡು ಆಕ್ರೋಶ
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಕನ್ನಡಪರ ಹೋರಾಟಗಾರರು ಇಂದು 45ನೇ ದಿನದ ಪ್ರತಿಭಟನೆ ನಡೆಸಿದರು.
ನಿತ್ಯವೂ ವಿನೂತನವಾಗಿ ಪ್ರತಿಭಟಿಸುತ್ತಿರುವ ಕನ್ನಡಪರ ಹೋರಾಟಗಾರರು ಇಂದು ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಚಾಮರಾಜೇಶ್ವರ ದೇವಾಲಯದಿಂದ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದ ತನಕ ಬಾಯಿಗೆ ಬೀಗ ಹಾಕಿಕೊಂಡು ಪ್ರತಿಭಟನೆ ನಡೆಸಿದರು.
ಬಾಯಿಗೆ ಬೀಗ ಹಾಕಿಕೊಂಡ ಪ್ರತಿಭಟನಾಕಾರರು ರಸ್ತೆ ತಡೆದು ಆಕ್ರೋಶ ಹೊರಹಾಕಿದರು. ರೈತರ ಹಿತ ಕಾಯುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ಬಾಯಿಗೆ ಬೀಗ ಹಾಕಿಕೊಂಡಿದೆ, ಮಧ್ಯಸ್ಥಿಕೆ ವಹಿಸಬೇಕಾದ ಕೇಂದ್ರ ಸರ್ಕಾರ ಬಾಯಿಗೆ ಬೀಗ ಹಾಕಿಕೊಂಡಿದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಬಾಯಿಗೆ ಬೀಗ ಹಾಕಿಕೊಂಡಿದೆ ಎಂದು ಧಿಕ್ಕಾರದ ಘೋಷಣೆ ಕೂಗಿದರು.
ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವ ತನಕ ಪ್ರತಿಭಟನೆ ಮುಂದುವರೆಸುತ್ತೇವೆ,ಹೋರಾಟ ಉಗ್ರರೂಪಕ್ಕೆ ಹೋಗಲಿದೆ ಎಂದು ಎಚ್ಚರಿಕೆ ಕೊಟ್ಟರು.












Click it and Unblock the Notifications