ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ: ಚಾಮರಾಜನಗರದಲ್ಲಿ ಸಂಭ್ರಮಾಚರಣೆ
ಚಾಮರಾಜನಗರ, ಅಕ್ಟೋಬರ್, 10: ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿಯ ಶಿಫಾರಸ್ಸಿನಂತೆ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವನ್ನು ಶೇಕಡಾ 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇಕಡಾ 3ರಿಂದ ಶೇಕಡಾ 7ಕ್ಕೆ ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. ಸರ್ಕಾರದ ತೀರ್ಮಾನಕ್ಕೆ ಸಮುದಾಯದ ಮುಖಂಡರು ಹರ್ಷ ವ್ಯಕ್ತಪಡಿಸಿ ಚಾಮರಾಜನಗರದಲ್ಲಿ ಪಟಾಕಿ ಸಿಡಿಸಿದ್ದಾರೆ.
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಎಸ್‌ಸಿ, ಎಸ್ಟಿ ಸಮುದಾಯದ ಮುಖಂಡರು ಮತ್ತು ಯುವಕರು ಪಟಾಕಿ ಸಿಡಿಸಿ ಜಯಘೋಷ ಕೂಗಿ ಸಂತಸ ಹೊರಹಾಕಿದ್ದಾರೆ. ವಾಲ್ಮೀಕಿ ಶ್ರೀಗಳು, ಸಮುದಾಯದ ನಾಯಕರ ಪರ ಘೋಷಣೆಗಳನ್ನು ಕೂಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದರು. ಕಳೆದ 242 ದಿನಗಳಿಂದ ವಾಲ್ಮೀಕಿ ಶ್ರೀಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಕೈಗೊಂಡಿದ್ದರ ಫಲವಾಗಿ ಎಸ್‌ಸಿ ಹಾಗೂ ಎಸ್ಟಿ ಸಮದಾಯದ ಮೀಸಲಾತಿ ಹೆಚ್ಚಳ ಆಗಿದೆ ಎಂದು ಬಿಜೆಪಿ ಮುಖಂಡ ರಾಮಚಂದ್ರು ಹೇಳಿದರು.

ಮೀಸಲಾತಿ ಹೆಚ್ಚಳ; ಸಂಭ್ರಮಾಚರಣೆ
ವಾಲ್ಮೀಕಿ ಶ್ರೀಗಳು, ಜ್ಞಾನಪ್ರಕಾಶ್ ಸ್ವಾಮೀಜಿ, ದಣಿವರಿಯದೇ ಹೋರಾಡಿದ್ದು, ಅವರಿಗೆ ಸಮುದಾಯದ ಪರವಾಗಿ ಧನ್ಯವಾದಗಳು. ಮೀಸಲಾತಿ ಹೆಚ್ಚಿಸಿದ ಬಿಜೆಪಿ ಸರ್ಕಾರಕ್ಕೆ ಮತ್ತು ಸಹಕಾರ ಕೊಟ್ಟ ವಿಪಕ್ಷಗಳಿಗೆ ಅಭಿನಂದಿಸುವುದಾಗಿ ಹೇಳಿದರು. ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ವರದಿಯನ್ನು. ಯಥಾವತ್ತಾಗಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದು, ಪಕ್ಷಾತೀತವಾಗಿ ಇದನ್ನು ಅಭಿನಂದಿಸುತ್ತೇವೆ. ಆದಷ್ಟು ಶೀಘ್ರದಲ್ಲೇ ಇದು ಅನುಷ್ಠಾನಗೊಳ್ಳಲಿ ಎಂದು ಒತ್ತಾಯಿಸಿದರು.












Click it and Unblock the Notifications