ಬಂಡೀಪುರದಲ್ಲಿ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ, ಓರ್ವ ಸಾವು
ಚಾಮರಾಜನಗರ, ನವೆಂಬರ್, 05: ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದು ಓರ್ವ ಬೇಟೆಗಾರ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಚೆಕ್ ಪೋಸ್ಟ್ ಸಮೀಪ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಯುವಕ ಮೃತಪಟ್ಟಿರುವ ದುರ್ದೈವಿ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಮದ್ದೂರು ಅರಣ್ಯ ವಲಯದಲ್ಲಿ ಬೇಟೆಗೆ ಬಂದಿದ್ದ ವೇಳೆ ಗಸ್ತಿನ ಸಿಬ್ಬಂದಿ ಹಾಗೂ 8-10 ಮಂದಿ ಇದ್ದ ಬೇಟೆಗಾರರ ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದೆ. ನಾಡಬಂದೂಕುಗಳಿಂದ ಕಳ್ಳಬೇಟೆಗೆ ಬಂದು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ತಿಳಿಸಿದ್ದಾರೆ.

ಕಡವೆ, ಕಾಡುಹಂದಿಗಳನ್ನು ಬೇಟೆಯಾಡಲು 8-10 ಮಂದಿ ಬಂದಿದ್ದರು ಎನ್ನಲಾಗಿ ಎನ್ನಲಾಗಿದ್ದು, ಈ ಪೈಕಿ ಗುಂಡಿನ ದಾಳಿಯಿಂದ ಓರ್ವ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕಾಡಾನೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಕುರುಬರಹುಂಡಿಯ ಆಲದ ಮರದ ಹಳ್ಳ ಅರಣ್ಯ ಪ್ರದೇಶದಲ್ಲಿ 35 ವರ್ಷದ ಗಂಡು ಕಾಡಾನೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕಾಡಾನೆಯು ಮತ್ತೊಂದು ಕಾಡಾನೆಯ ಜೊತೆ ಕಾದಾಟ ನಡೆಸಿ ಮೃತಪಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದರು.
ಕಾಡಾನೆಯ ಕಣ್ಣಿನ ಕೆಳಭಾಗದಲ್ಲಿ ಎದುರಾಳಿ ಕಾಡಾನೆಯ ದಂತ ಚುಚ್ಚಿರುವುದು ಕಂಡು ಬಂದಿದ್ದು, ರಕ್ತಸ್ರಾವ ಹಾಗೂ ನಿತ್ರಾಣದಿಂದ ಮೃತಪಟ್ಟಿದೆ. ಎದುರಾಳಿ ಕಾಡಾನೆಯ ದಂತ ಚುಚ್ಚಿ ದಂತವು ಮೃತ ಕಾಡಾನೆಯ ಮೇಲ್ದವಡೆಯವರೆಗೆ 30 ಸೆ.ಮೀ ಆಳದವರೆಗೆ ಹೊಳಹೊಕ್ಕಿದ್ದು, ದವಡೆಯ ಒಳಗೆ ದಂತವು ಮುರಿದಿರುವುದರಿಂದ ಕಾಡಾನೆಯು ಸಾವನ್ನಪ್ಪಿದೆ ಎಂದು ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‍ಕುಮಾರ್ ಮಾಹಿತಿ ನೀಡಿದ್ದರು.
ಎದುರಾಳಿ ಆನೆಯ ಮುರಿದ ದಂತದ ಭಾಗ ಹಾಗೂ ಮೃತ ಕಾಡಾನೆಯ ಎರಡು ದಂತಗಳನ್ನು ಇಲಾಖೆಯು ವಶಪಡಿಸಿಕೊಂಡು ಮೃತ ಕಾಡಾನೆಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರವನ್ನು ನಿಯಮಾನುಸಾರ ಅರಣ್ಯ ಪ್ರದೇಶದಲ್ಲೇ ಬಿಡಲಾಗಿತ್ತು.
ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್, ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಓಂಕಾರ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ಇಲಾಖಾ ಪಶುವೈದ್ಯಾಧಿಕಾರಿ ಡಾ.ಮಿರ್ಜಾ ವಾಸಿಂ, ಗಸ್ತು ವನಪಾಲಕ ಸಂತೋಷ್ ಸೇರಿದಂತೆ ಅರಣ್ಯ ವೀಕ್ಷಕ ಹಾಗೂ ಇಲಾಖಾ ಸಿಬ್ಬಂದಿ ವರ್ಗದವರು ಹಾಜರಿದ್ದರು.












Click it and Unblock the Notifications