ಗುಂಡ್ಲುಪೇಟೆ: ಗ್ರಾ.ಪಂ. ಅಧ್ಯಕ್ಷೆ ಹಾಗೂ ಪತಿ ಮೇಲೆ ಮಾರಣಾಂತಿಕ ಹಲ್ಲೆ
ಗುಂಡ್ಲುಪೇಟೆ, ಅಕ್ಟೋಬರ್ 2: ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸುವ ನೆಪದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಆಕೆಯ ಪತಿ, ಭಾವಮೈದುನನ ಮೇಲೆ ಹಲ್ಲೆ ನಡೆಸಿದ ಘಟನೆ ಹೊರೆಯಾಲ ಗ್ರಾ.ಪಂ. ವ್ಯಾಪ್ತಿಯ ಹೊಸಪುರ ಗ್ರಾಮದಲ್ಲಿ ನಡೆದಿದೆ. ದಾಳಿಗೊಳಗಾದವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸಪುರ ಗ್ರಾಮದ ನಿವಾಸಿ ಗ್ರಾಪಂ ಅಧ್ಯಕ್ಷೆ ಸವಿತಾ, ಆಕೆಯ ಪತಿ ನಾಗರಾಜು ಹಾಗೂ ಮೈದುನ ಮಹದೇವೇಗೌಡ ಅವರು ಪಕ್ಕದ ಮನೆಯವರಿಂದ ಹಲ್ಲೆಗೊಳಗಾಗಿದ್ದಾರೆ. ಹಲ್ಲೆಯಿಂದ ತೀವ್ರ ತಲೆಗೆ ಪೆಟ್ಟುಬಿದ್ದ ಕಾರಣ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಪಂ ಅಧ್ಯಕ್ಷೆ ಸವಿತಾ, ಮೈದುನ ಮಹದೇವೇಗೌಡ ಹಾಗೂ ನೆರೆಮನೆಯ ಶಿವಣ್ಣೇಗೌಡ ಎಂಬುವರಿಗೆ ಹಿಂದಿನಿಂದಲೂ ಭೂಮಿ ಹಾಗೂ ಇತ್ತೀಚೆಗೆ ಶೌಚಾಲಯ ನಿರ್ಮಾಣ ವಿಚಾರದಲ್ಲಿ ಮನಸ್ತಾಪವಿತ್ತು.
ಶನಿವಾರ ಗ್ರಾಮದ ಬಡಾವಣೆಯೊಂದಕ್ಕೆ ನೀರು ಬರದಿರುವುದನ್ನೇ ನೆಪಮಾಡಿಕೊಂಡು ವೈಯುಕ್ತಿಕ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಶಿವಣ್ಣೇಗೌಡ, ಸಿದ್ದರಾಜು ಹಾಗೂ ನಾಗಮ್ಮ ಎಂಬುವರು ಹಲ್ಲೆಗೆ ಮುಂದಾಗಿದ್ದಾರೆ.

ಗ್ರಾಮದಲ್ಲಿಯೇ ಗ್ರಾಪಂ ಅಧ್ಯಕ್ಷೆಯಿದ್ದರೂ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಭಾನುವಾರ ಬೆಳಗ್ಗೆ ಕಾಲುಕೆರೆದು ಜಗಳಕ್ಕೆ ಬಂದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಲು ಬಂದ ಸವಿತಾರ ಪತಿ ನಾಗರಾಜು ಎಂಬುವರ ತಲೆಗೆ ರಾಡ್ ಹಾಗೂ ದೊಣ್ಣೆಯಿಂದ ಹೊಡೆದಿದ್ದಾರೆ. ತಡೆಯಲು ಹೋದ ಸವಿತಾ ಹಾಗೂ ಮೈದುನ ಮಹದೇವೇಗೌಡರ ತಲೆಗಳಿಗೂ ತೀವ್ರವಾದ ಪೆಟ್ಟುಬಿದ್ದಿದೆ.

ಕೂಡಲೇ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಲೆ ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಎಸ್‍ಐ ಕಿರಣ್ ಕುಮಾರ್ ತಿಳಿಸಿದ್ದಾರೆ












Click it and Unblock the Notifications