ಸಿಮ್ಸ್ ಡೀನ್ ವಿರುದ್ಧ ಅಂಬೇಡ್ಕರ್ ನಿಂದನೆ ಆರೋಪ: ತನಿಖೆಗೆ ಸಮಿತಿ ರಚಿಸಿದ ಸರ್ಕಾರ
ಚಾಮರಾಜನಗರ, ಮೇ 25: ಬಾಕಿ ವೇತನ ಕೇಳಲು ಹೋದ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಸಂಜೀವ್ ವಿರುಧ್ಧ ಶಾಸಕ ಪುಟ್ಟರಂಗಶೆಟ್ಟಿ ಸಿಎಂಗೆ ಪತ್ರ ಬರೆದಿದ್ದಾರೆ.
ರಾಷ್ಟ ನಾಯಕರನ್ನು ಅವಹೇಳನ ಮಾಡಿ ಜನರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಈಗಾಗಲೇ ಸಂಜೀವ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪವೂ ಕೇಳಿಬಂದಿದೆ. ಸರ್ಕಾರಕ್ಕೆ ಮುಜುಗುರ ಉಂಟಾಗುವ ಸನ್ನಿವೇಶ ಸೃಷ್ಟಿಸಿದ್ದು ಕೂಡಲೇ ಅವರನ್ನು ಸಿಮ್ಸ್ ಡೀನ್ ಹುದ್ದೆಯಿಂದ ಬಿಡುಗಡೆ ಮಾಡಬೇಕೆಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಶಾಸಕರು ಪತ್ರ ಬರೆಯುತ್ತಿದ್ದಂತೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಸೂಕ್ತ ತನಿಖೆಯ ದ್ವಿಸದಸ್ಯ ತಂಡ ರಚಿಸಿ ಕೂಡಲೇ ವರದಿ ಕೊಡುವಂತೆ ಸೂಚನೆ ಕೊಟ್ಟಿದ್ದಾರೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ರವಿ ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಆಡಳಿತಾಧಿಕಾರಿ ಕೆ.ಎ.ಉಮಾ ಅವರ ಸಮಿತಿ ರಚನೆ ಮಾಡಲಾಗಿದ್ದು, ಕೂಡಲೇ ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ಚಾಮರಾಜನಗರ ಡಿಸಿ ಹಾಗೂ ಎಸ್ಪಿ ಅವರೊಂದಿಗೆ ತೆರಳಿ ಪ್ರಕರಣದ ಪರಿಶೀಲನೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ನವೀನ್ ರಾಜ್ ಆದೇಶಿಸಿದ್ದಾರೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮೇಲಿನ ಆರೋಪ ಏನು..?
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿಂದಿಸಿದ್ದಾರೆಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಸಂಜೀವ್ ಕುಮಾರ್‌ಗೆ ಮುತ್ತಿಗೆ ಹಾಕಿದ ಬಿಎಸ್‌ಪಿ ಹಾಗೂ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಮುಖಕ್ಕೆ ಮಸಿ ಬಳಿದು ಕಾರನ್ನು ಜಖಂಗೊಳಿಸಿ ಆಕ್ರೋಶ ಹೊರಹಾಕಿದ್ದರು.
ಅಲ್ಲದೇ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಟೈರ್ ಸುಟ್ಟು ರಸ್ತೆ ತಡೆ ನಡೆಸಿ ಡೀನ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಿಡಿಕಾರಿದ್ದರು.
ಹಲವು ತಿಂಗಳುಗಳಿಂದ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ವೇತನ ಆಗಿಲ್ಲ. ಇದನ್ನು ಕೇಳಲು ಡೀನ್ ಕೊಠಡಿಗೆ ತೆರಳಿದ್ದ ವೇಳೆ ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications