ಒಂಟಿ ಮಹಿಳೆ ಮನೆ ಟಾರ್ಗೆಟ್:₹15 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು
ಚಾಮರಾಜನಗರ, ಫೆಬ್ರವರಿ 1: ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಮನೆಗಳ್ಳರ ಹಾವಳಿ ಹೆಚ್ಚಾಗಿದ್ದು, ಜನನಿಬಿಡ ಬಡಾವಣೆಯಲ್ಲಿ ಮನೆಗೆ ಕನ್ನ ಹಾಕಿರುವ ಘಟನೆ ಚಾಮರಾಜನಗರದ ರಾಘವೇಂದ್ರ ಬಡಾವಣೆಯಲ್ಲಿ ಬುಧವಾರ ನಡೆದಿದೆ.
ರಾಘವೇಂದ್ರ ಚಿತ್ರಮಂದಿರದ ಮುಂದೆ ಇರುವ ಶೋಭಾ ಎನ್ನುವವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಮುಂದಿನ ಬಾಗಿಲು ಒಡೆದು ಒಳಹೊಕ್ಕ ಖದೀಮರು ಮಗಳ ಮದುವೆಗೆಂದು ಮಾಡಿಸಿಟ್ಟಿದ್ದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿ ಕ್ಷಣಾರ್ಧದಲ್ಲಿ ಮನೆಯ ಹಿಂದಿನ ಬಾಗಿಲಿನಿಂದ ಪರಾರಿ ಆಗಿದ್ದಾರೆ.
ಶೋಭಾ ಅವರ ಪತಿ ಇತ್ತೀಚೆಗೆ ನಿಧನ ಹೊಂದಿದ್ದು ಏಕಾಂಗಿಯಾಗಿ ವಾಸಿಸುತ್ತಿದ್ದರು. ಮಗಳ ಮದುವೆಗೆಂದು ಮಾಡಿಸಿದ್ದ 3 ನೆಕ್ಲೇಸ್, 2 ಜೊತೆ ಬಳೆ, 2 ಸರ, 30 ಜೊತೆ ಓಲೆ, 10 ಉಂಗುರು, ಮುಕ್ಕಾಲು ಕೆಜಿಯಷ್ಟು ಬೆಳ್ಳಿ ಸಾಮಾನುಗಳು ಸೇರಿ ಒಟ್ಟು ₹15 ಲಕ್ಷಕ್ಕೂ ಅಧಿಕ ಚಿನ್ನಾಭರಣವನ್ನು ಮನೆಯ ಬೀರುವಿನಲ್ಲಿಟ್ಟಿದ್ದರು. ಶೋಭಾ ಹಬ್ಬ ಎಂದು ಆಲೂರಿಗೆ ತೆರಳಿದ್ದ ವೇಳೆ ಖದೀಮರು ಹೊಂಚು ಹಾಕಿ ಚಿನ್ನಾಭರಣವನ್ನು ದೋಚಿದ್ದಾರೆ.

ಅಕ್ಕಪಕ್ಕದಲ್ಲಿ ಮನೆಗಳು, ಎದುರಿಗೆ ಥಿಯೇಟರ್, ಮುಖ್ಯರಸ್ತೆ ಇದ್ದರೂ ಕಳ್ಳರು ಚಾಣಾಕ್ಷತನದಿಂದ ಶೋಭಾ ಅವರ ಮನೆಗೆ ಕನ್ನ ಹಾಕಿದ್ದಾರೆ.
ಕೇವಲ 1 ಸ್ಕ್ರೂ ಡ್ರೈವರ್ ಸಹಾಯದಿಂದ ಬಾಗಿಲನ್ನು ಮೀಟಿರುವ ಕಳ್ಳರು, ಚಿನ್ನ ಕದ್ದು ಸ್ಕ್ರೂ ಡ್ರೈವರ್‌ಅನ್ನು ಮನೆಯಲ್ಲೇ ಎಸೆದು ಹೋಗಿದ್ದಾರೆ. ಅದೇ ಮಾರ್ಗವಾಗಿ ಬಂದ ಪರಿಚಿತರೊಬ್ಬರು ಬಾಗಿಲು ಹಾಕದೇ ಊರಿಗೆ ಹೋಗಿದ್ದೀರಲ್ಲಾ..? ಎಂದು ಶೋಭಾ ಅವರಿಗೆ ಕರೆ ಮಾಡಿ ವಿಚಾರಿಸಿದ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಚಾಮರಾಜನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ. ಸದ್ಯ ಘಟನಾ ಸ್ಥಳಕ್ಕೆ ಎಎಸ್‌ಪಿ ಉದೀಶ್, ಡಿವೈಎಸ್‌ಪಿ ಪ್ರಿಯದರ್ಶಿನಿ, ಶ್ವಾನ ತಂಡ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications