ಬಿಜೆಪಿ ತೊರೆದ ಜಿ.ಎನ್.ನಂಜುಂಡಸ್ವಾಮಿ: ಬಿಜೆಪಿ ವಿರುದ್ಧ ನಾಲ್ವರು ಮಾಜಿ ಶಾಸಕರ ತಂತ್ರ!
ಇತ್ತೀಚೆಗೆ ಬಿಜೆಪಿ ನಡೆದುಕೊಳ್ಳುವ ರೀತಿಯಿಂದ ಬೇಸತ್ತು ಪಕ್ಷಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದು ಮಂಗಳವಾರ ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ ಎಂದು ಕೊಳ್ಳೇಗಾಲದ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ತಿಳಿಸ
ಚಾಮರಾಜನಗರ, ಮಾರ್ಚ್ 6: ಕೊಳ್ಳೇಗಾಲದ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಪ್ರಭಾವಿ ರಾಜಕಾರಣಿಯಾದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದೇನೆಂದು ಬಹಿರಂಗವಾಗಿ ಘೋಷಿಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷ ಕಷ್ಟ ಕಾಲದಲ್ಲಿದ್ದಾಗ ಪಕ್ಷ ಸಂಘಟಿಸಿ, ಸೋಲುತ್ತೇವೆ ಎಂದು ಗೊತ್ತಿದ್ದರೂ, ಶಕ್ತಿ ಮೀರಿ ಹೋರಾಡಿ ಚುನಾವಣೆಯಲ್ಲಿ ನಿಂತಿದ್ದೇನೆ. ಆದರೆ ಇತ್ತೀಚೆಗೆ ಬಿಜೆಪಿ ನಡೆದುಕೊಳ್ಳುವ ರೀತಿಯಿಂದ ಬೇಸತ್ತು ಪಕ್ಷಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದು ಮಂಗಳವಾರ ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಹಿಂದಿನ ರಾತ್ರಿ ಕರೆ ಮಾಡಿ ತಿಳಿಸುತ್ತಾರೆ. ಯಾವುದಕ್ಕೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಇದರಿಂದಾಗಿ ನನಗೆ, ನನ್ನ ವಿಶ್ವಾಸಿಗಳಿಗೆ ತೀರಾ ಘಾಸಿ ಉಂಟಾಗಿದೆ. ಮುಜುಗರ ಅನುಭವಿಸಿದ್ದೇವೆ. ಹಿಂದಿನಿಂದಲೂ ರಾಷ್ಟ್ರೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿರುವುದರಿಂದ ಬೆಂಬಲಿಗರ ಅಭಿಪ್ರಾಯದಂತೆ ಮಂಗಳವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಮರಳಿ ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ ಎಂದು ತಿಳಿಸಿದರು.
ಶಾಸಕ ಮಹೇಶ್ ವಿರುದ್ಧ ನಾಲ್ವರು ಮಾಜಿ ಶಾಸಕರ ತಂತ್ರ
ಕೊಳ್ಳೇಗಾಲ ಕ್ಷೇತ್ರದ ಶಾಸಕ ಮಹೇಶ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಬಹುತೇಕ ಪಕ್ಕಾ ಆಗಿದ್ದು, ಮತ್ತೊಂದು ಕಡೆ ಕಾಂಗ್ರೆಸ್‌ನಲ್ಲಿ ಮೂವರು ಮಾಜಿ ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವ ಮಾಜಿ ಶಾಸಕರು ಒಂದಾದರೇ ಸ್ಪರ್ಧೆ ಬಿರುಸಾಗಲಿದೆ ಎನ್ನುವ ಚರ್ಚೆ ಸದ್ಯ ಶುರುವಾಗಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ಡಿ.ಕೆ ಶಿವಕುಮಾರ್ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಅದರಂತೆ, ಬಿಜೆಪಿ ಕಾರ್ಯಕ್ರಮಗಳಿಗೆ ಜಿಎನ್ಎನ್ ಗೈರಾಗಿ ಅಂತರ ಕಾಯ್ದುಕೊಂಡಿದ್ದು ಸ್ಪಷ್ಟವಾಗಿತ್ತು. ಈಗ ಅವರೇ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ತೊರೆದಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಈಗಾಗಲೇ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದು ಎಲ್ಲರೂ ಮಾಜಿ ಶಾಸಕರುಗಳಾಗಿದ್ದಾರೆ. ಇವರ ಸಾಲಿಗೆ ಜಿಎನ್ ಕೂಡ ಸೇರಿಕೊಂಡರೆ ಶಾಸಕ ಮಹೇಶ್ ಮಣಿಸಲು ನಾಲ್ವರು ಮಾಜಿ ಶಾಕಸರು ಸೇರಿಕೊಂಡಂತಾಗಲಿದ್ದು, ಚುನಾವಣಾ ಕಣ ರಣರಂಗವಾಗಲಿದೆ.
ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಬಾಲರಾಜು ಕ್ಷೇತ್ರದಲ್ಲಿ ಸುತ್ತಾಡಿ ಪಕ್ಷ ಸಂಘಟಿಸುವ ಜೊತೆಗೆ ತಮ್ಮ ಮತ ಬ್ಯಾಂಕ್ ನ್ನು ಹೆಚ್ಚಿಸಿಕೊಂಡಿದ್ದಾರೆ. ಶಾಸಕ ಮಹೇಶ್ ಬಿಜೆಪಿಗೆ ಸೇರ್ಪಡೆಯಾಗುವ ಮುನ್ನ ಜಿಎನ್ ಕೂಡ ಪಕ್ಷ ಸಂಘಟಿಸಿ ತಮ್ಮ ಮತ ಬ್ಯಾಂಕ್‌ನ್ನು ಭದ್ರಪಡಿಸಿಕೊಂಡಿದ್ದರು. ಈಗ ನಾಲ್ವರು ಮಾಜಿ ಶಾಸಕರು ಒಂದಾಗಿ ಮತ ಭದ್ರವಾದರೆ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.
ಇನ್ನು ಪೊಲೀಸ್ ಹುದ್ದೆಗೆ ರಾಜೀನಾಮೆ ಕೊಟ್ಟು ಜೆಡಿಎಸ್ ಸೇರ್ಪಡೆಗೊಂಡಿರುವ, ಕೊಳ್ಳೇಗಾಲದ ಜೆಡಿಎಸ್‌ನ ಸಂಭಾವ್ಯ ಅಭ್ಯರ್ಥಿ ಬಿ.ಪುಟ್ಟಸ್ವಾಮಿ ಎಲ್ಲಾ ಪಕ್ಷಗಳಿಂದ ಮತ ಪಡೆಯುವ ಸಾಧ್ಯತೆಯಿದ್ದು, ಬಿಜೆಪಿಯ ಮತ ವಿಭನೆಯಾಗಲಿ ಎನ್ನುವುದು ಅವರ ಕಾರ್ಯಕರ್ತರ ಪ್ರಚಾರವನ್ನು ಗಮನಿಸಿದಾಗ ತಿಳಿಯುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ನಾಲ್ವರು ಮಾಜಿ ಶಾಸಕರು ಒಂದೆಡೆ, ಮಾಜಿ ಪೊಲೀಸ್ ಮತ್ತೊಂದು ಕಡೆ ತಕ್ಕಮಟ್ಟಿಗಿನ ಮತಬ್ಯಾಂಕ್ ಹೊಂದಿರುವ ಬಿಎಸ್‌ಪಿ ಇನ್ನೊಂದೆಡೆ ಇರುವುದು ಚಾಮರಾಜನಗರದಲ್ಲಿ ಬಿಜೆಪಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ಅಷ್ಟು ಸುಲಭವಾಗಿಲ್ಲ ಎನ್ನುವುದು ರಾಜಕೀಯ ವಲಯದ ಅಭಿಪ್ರಾಯವಾಗಿದೆ.












Click it and Unblock the Notifications