ಬಂಡೀಪುರದಲ್ಲಿ ಬೇಟೆಗಾರರಿಟ್ಟ ಉರುಳಿಗೆ ನಡೆದಿದೆ ಹುಡುಕಾಟ
ಚಾಮರಾಜನಗರ, ಏಪ್ರಿಲ್ 27: ಬಂಡೀಪುರ ಅರಣ್ಯದಂಚಿನ ಒಂದು ಕಡೆ ಜಾನುವಾರುಗಳನ್ನು ಬೇಟೆಯಾಡುವ ಹುಲಿಯ ಹುಡುಕಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಅರಣ್ಯದಲ್ಲಿ ಉರುಳಿಟ್ಟು ಜಿಂಕೆ ಸೇರಿದಂತೆ ವನ್ಯ ಪ್ರಾಣಿಗಳನ್ನು ಬೇಟೆಯಾಡುವ ಬೇಟೆಗಾರರಿಗಾಗಿ ಶೋಧ ನಡೆಯುತ್ತಿದೆ. ಸದ್ಯ ಅರಣ್ಯದಲ್ಲಿಟ್ಟಿರಬಹುದಾದ ಉರುಳನ್ನು ಹುಡುಕಿ ತೆಗೆಯುವ ಕಾರ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.
ಲಾಕ್ ಡೌನ್ ವೇಳೆ ಕಾಡಂಚಿನ ಮನೆಯಲ್ಲಿದ್ದ ಮಂದಿ ಬೇಟೆಯಾಡುವ ಕೃತ್ಯಕ್ಕೆ ಮುಂದಾಗಿದ್ದಾರೆ. ಜಿಂಕೆ ಸೇರಿದಂತೆ ಪ್ರಾಣಿಗಳು ಓಡಾಡುವ ಸ್ಥಳವನ್ನು ಗುರುತು ಮಾಡಿ ಅಲ್ಲಿ ಉರುಳು ಇಟ್ಟು ಪ್ರಾಣಿಗಳನ್ನು ಕೊಂದು ಮಾಂಸ ಮಾಡಿ ತಿನ್ನಲಾರಂಭಿಸಿದ್ದಾರೆ. ಇಂತಹ ಕಳ್ಳಬೇಟೆಗಾರರನ್ನು ಸದೆಬಡಿಯುವ ಕಾರ್ಯಕ್ಕೆ ಅರಣ್ಯ ಇಲಾಖೆ ಇದೀಗ ಮುಂದಾಗಿದೆ. ಕೇವಲ ಕರ್ನಾಟಕದವರು ಅಲ್ಲದೆ ತಮಿಳುನಾಡು, ಕೇರಳದ ಬೇಟೆಗಾರರು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ.

ಮಾಂಸಕ್ಕಾಗಿ ಕಾಡುಪ್ರಾಣಿಗಳ ಬೇಟೆ
ಸಮಯ ಸಾಧಿಸಿ ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡುವ ಕಳ್ಳಬೇಟೆಗಾರರ ತಂಡ ಪ್ರಾಣಿಗಳನ್ನು ಬೇಟೆಯಾಡಿ ಮಾಂಸದೊಂದಿಗೆ ಹಿಂತಿರುಗುವುದು ಹೊಸತೇನಲ್ಲ. ಕಾಡಿನಲ್ಲಿ ಆಯಕಟ್ಟಿನಲ್ಲಿ ಕುಳಿತು ಪ್ರಾಣಿಗಳು ಬರುವ ಸಂದರ್ಭ ನೋಡಿ ಅದರ ಮೇಲೆ ಗುಂಡು ಹಾರಿಸಿ ಬೇಟೆಯಾಡುವುದು ಒಂದೆಡೆಯಾದರೆ, ಇನ್ನೊಂದೆಡೆ ಪ್ರಾಣಿಗಳು ನೀರು ಕುಡಿಯಲು ಬರುವ ಸ್ಥಳವನ್ನು ಗಮನಿಸಿ ಅವು ಸಾಗುವ ದಾರಿಯಲ್ಲಿ ಉರುಳು ಹಾಕಿಡುತ್ತಾರೆ. ರಭಸದಿಂದ ಬರುವ ಪ್ರಾಣಿಗಳ ಕತ್ತು ಅದರಲ್ಲಿ ಸಿಲುಕಿ ಅವು ಸಾಯುತ್ತವೆ. ನಂತರ ಅವುಗಳನ್ನು ಹೊತ್ತೊಯ್ದು ಮಾಂಸ ಮಾಡಲಾಗುತ್ತದೆ.

ಲಾಕ್ ಡೌನ್ ಸಮಯದಲ್ಲಿ ಈ ಕೆಲಸ
ಹಾಗೆನೋಡಿದರೆ ಬಂಡೀಪುರದಲ್ಲಿ ಪ್ರಾಣಿಗಳ ಬೇಟೆಯಾಡುವ ಪ್ರಕರಣ ಹೊಸತೇನಲ್ಲ. ಆಗಾಗ್ಗೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಆದರೆ ಲಾಕ್ ಡೌನ್ ಸಮಯವನ್ನು ಕೆಲವರು ಬೇಟೆಯಾಡಲು ಬಳಸಿಕೊಂಡಿರುವುದು ಮಾತ್ರ ಬೇಸರದ ಸಂಗತಿಯಾಗಿದೆ. ಈ ಪೈಕಿ ಕೆಲವರಿಗೆ ಅರಣ್ಯದಲ್ಲಿ ಹಂಗಾಮಿ ನೌಕರರಾಗಿ ಕೆಲಸ ಮಾಡಿರುವ ಅನುಭವ ಇರುವ ಕಾರಣ ಅರಣ್ಯದ ಬಗ್ಗೆ ಮತ್ತು ಸಿಬ್ಬಂದಿಯ ಗಸ್ತಿನ ಬಗ್ಗೆ ಗೊತ್ತಿರುವ ಕಾರಣ ಸಲೀಸಲಾಗಿ ಬೇಟೆಯಾಡುತ್ತಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಕೆಲವು ಬೇಟೆಗಾರರನ್ನು ಹೆಡೆಮುರಿ ಕಟ್ಟಿದ್ದಾರೆ. ಜತೆಗೆ ಗಸ್ತನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ಆದರೆ ಬೇಟೆಗಾರರು ಅರಣ್ಯದಲ್ಲಿ ಉರುಳು ಇಟ್ಟಿರುವ ಶಂಕೆ ಇರುವ ಕಾರಣದಿಂದ ಉರುಳನ್ನು ಹುಡುಕುವ ಕಾರ್ಯಾಚರಣೆ ನಡೆಯುತ್ತಿದೆ.

ಉರುಳು ಪತ್ತೆಗೆ ಇಲಾಖೆ ಹುಡುಕಾಟ
ಸದ್ಯ ಬಂಡೀಪುರದ ಎಲ್ಲ ವಲಯಗಳಲ್ಲಿಯೂ ಉರುಳು ಪತ್ತೆಗೆ ಇಲಾಖೆ ಹುಡುಕಾಟ ನಡೆಸಿದೆ. ಇದಕ್ಕೆ ನೆರೆಯ ತಮಿಳುನಾಡು ಹಾಗೂ ಕೇರಳದ ಅಧಿಕಾರಿಗಳ ನೆರವನ್ನು ಪಡೆಯಲಾಗುತ್ತಿದೆ. ಈಗಾಗಲೇ ಬಂಡೀಪುರದ ಎನ್.ಬೇಗೂರು ಹಾಗೂ ಗುಂಡ್ರೆ ವಲಯಗಳಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬೇಟೆಗಾರರು ಹಾಕಿಟ್ಟಿರಬಹುದಾದ ಉರುಳಿಗೆ ಹುಡಕಾಟ ನಡೆಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ, ಅಂದರೆ ಏ.17ರಂದು ಎಂಟು ಮಂದಿ ಬೇಟೆಗಾರರು ಅರಣ್ಯದಲ್ಲಿ ಬೇಟೆಯಾಡಿ ಮೂರು ಜಿಂಕೆಯನ್ನು ಕೊಂದು ಮಾಂಸ ಮಾಡಿದ್ದರು.

ಇನ್ನಷ್ಟು ಬೇಟೆಗಾರರು ಬಲೆಗೆ ಬೀಳಬೇಕಿದೆ
ಅರಣ್ಯ ಇಲಾಖೆ ಬೇಟೆಗಾರರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಇಂತಹ ಬೇಟೆಗಾರರು ಇನ್ನೆಷ್ಟು ಮಂದಿ ಇದ್ದಾರೋ ಗೊತ್ತಿಲ್ಲ. ವನ್ಯಪ್ರಾಣಿಗಳ ರಕ್ಷಣೆ ಕೇವಲ ಅರಣ್ಯ ಸಿಬ್ಬಂದಿಯದಲ್ಲ. ಪ್ರತಿಯೊಬ್ಬ ಸಾರ್ವಜನಿಕರು ಕರ್ತವ್ಯ ಎಂದು ಭಾವಿಸಿ ಅರಣ್ಯ ಇಲಾಖೆ ಜತೆ ಕೈಜೋಡಿಸಬೇಕಿದೆ. ಅರಣ್ಯ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಬೇಟೆಗಾರರು ಇಟ್ಟಿರಬಹುದಾದ ಉರುಳುಗಳನ್ನು ಹುಡುಕಿ ತೆಗೆಯುವ ಮೂಲಕ ಪ್ರಾಣಿಗಳ ಪ್ರಾಣ ಉಳಿಸುವಂತಾಗಲಿ. ಜತೆಗೆ ಬೇಟೆಗಾರರ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕಿದೆ. ಆಗ ಮಾತ್ರ ಬೇಟೆಗಾರರ ದುಷ್ಕೃತ್ಯ ತಡೆದು ವನ್ಯ ಪ್ರಾಣಿಗಳನ್ನು ರಕ್ಷಿಸಲು ಸಾಧ್ಯವಿದೆ.












Click it and Unblock the Notifications