Male Mahadeshwara Hill: ನವೆಂಬರ್ 10ರಿಂದ ದೀಪಾವಳಿ ಜಾತ್ರೆ, ಮಲೆ ಮಾದಪ್ಪನ ಬೆಟ್ಟಕ್ಕೆ ಹರಿದುಬಂತು ಭಕ್ತಸಾಗರ
ಚಾಮರಾಜನಗರ, ನವೆಂಬರ್, 09: ಪ್ರಮುಖ ಯಾತ್ರಸ್ಥಳವಾದ ಚಾಮರಾಜನಗರದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರದಿಂದ ದೀಪಾವಳಿ ಜಾತ್ರೆ ಆರಂಭಗೊಳ್ಳಲಿದ್ದು, ಈ ಹಿನ್ನೆಲೆ ಇಂದಿನಿಂದಲೇ ಸಹಸ್ರಾರು ಮಂದಿ ಪಾದಯಾತ್ರೆ ಮೂಲಕ ಬೆಟ್ಟಕ್ಕೆ ತೆರಳುತ್ತಿದ್ದಾರೆ.
ಚಾಮರಾಜನಗರ, ನಂಜನಗೂಡು, ಮಂಡ್ಯ ಸೇರಿದಂತೆ ಹತ್ತಾರು ಜಿಲ್ಲೆಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ನೂರಾರು ಕಿಲೋ ಮೀಟರ್ ಪಾದಯಾತ್ರೆ ಮೂಲಕ ಭಕ್ತರು ಬರುತ್ತಿದ್ದಾರೆ. ಈಗಾಗಲೇ ಬೆಟ್ಟದಲ್ಲಿ ಭಕ್ತ ಸಾಗರವೇ ಸೇರಿದೆ. ಶುಕ್ರವಾರದಿಂದ ದೀಪಾವಳಿ ಜಾತ್ರೆ ಆರಂಭವಾಗಲಿದ್ದು, 14ರ ಮಂಗಳವಾರದಂದು ಬೆಳಗ್ಗೆ 8:50ಕ್ಕೆ ರಥೋತ್ಸವ ನಡೆಯಲಿದೆ.

ಇನ್ನು, ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಹನೂರಿನಲ್ಲಿ ಮಹಿಳಾ ಭಕ್ತರು ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಾ ತೆರಳುವ ಮೂಲಕ ಗಮನ ಸೆಳೆದಿದ್ದಾರೆ. ನಡೆದು ಹೋಗುವುದೇ ಕಷ್ಟ ಎಂಬ ಸ್ಥಿತಿಯಲ್ಲಿ ಮಹಿಳಾ ಭಕ್ತರು ಕುಣಿದು ಕುಪ್ಪಳಿಸಿ ಮಹದೇಶ್ವರನಿಗೆ ಘೋಷಣೆ ಕೂಗುತ್ತಾ ತೆರಳುವ ಮೂಲಕ ಭಕ್ತಿ ಪರಾಕಷ್ಟೆ ಮೆರೆದಿದ್ದಾರೆ.
ಹರಿದುಬರುತ್ತಲೇ ಇದೆ ಪ್ರವಾಸಿಗರ ದಂಡು
ಮೈಸೂರು ದಸರಾ ಕಳೆದರೂ ಅದರ ಸಂಭ್ರಮ ಇನ್ನೂ ಮುಂದುವರೆದಿದ್ದು, ಪ್ರತಿದಿನವೂ ಜನಜಾತ್ರೆ ಮುಂದುವರೆದಿದೆ.ಸಂಜೆಯಾಗುತ್ತಿದ್ದಂತೆಯೇ ನಗರದಲ್ಲಿ ಜನಜಂಗುಳಿ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗುತ್ತಿರುವುದು ಕಂಡುಬಂದಿದೆ.
ದಸರಾ ನಂತರವೂ ಪ್ರವಾಸಿಗರು ಮೈಸೂರಿನತ್ತ ಆಗಮಿಸುತ್ತಿರುವುದರಿಂದ ಮೈಸೂರಿನ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಹಗಲು ರಾತ್ರಿ ಎನ್ನದೆ ಜನ ನಗರದಲ್ಲಿ ಕಾಣಿಸುತ್ತಿದ್ದಾರೆ. ಅದರಲ್ಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅರಮನೆಗೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ. ಇನ್ನು ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ನಗರದ ಹಲವು ಪ್ರವಾಸಿ ತಾಣಗಳಲ್ಲಿ ವಾರಾಂತ್ಯವಾಗಿರುವುದರಿಂದ ಪ್ರವಾಸಿಗರ ದಂಡು ನೆರೆದಿದೆ.
ದಸರಾ ಸಮಯದಲ್ಲಿ ದೀಪಾಲಂಕಾರವನ್ನು ನೋಡಲಾಗದವರು ಈಗ ಆಗಮಿಸುತ್ತಿದ್ದಾರೆ. ಇದರಿಂದ ಮೃಗಾಯಲ, ಅರಮನೆಯ ಟಿಕೆಟ್ ಕೌಂಟರ್‌ಗಳ ಬಳಿ ಪ್ರವಾಸಿಗರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬಂದಿದ್ದು, ಸಂಜೆ 5 ಗಂಟೆಯ ನಂತರ ವಸ್ತುಪ್ರದರ್ಶನದತ್ತ ಮುಖ ಮಾಡುವುದರಿಂದ ಆವರಣ ಜನರಿಂದ ತುಂಬಿ ತುಳುಕುತ್ತಿದೆ.
ದಸರಾ ನಂತರವೂ ಅರಮನೆ ಸುತ್ತಮುತ್ತಲ ಮಾರ್ಗದಲ್ಲಿ ನೂರಾರು ವಾಹನಗಳು ಓಡಾಡುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ವಸ್ತು ಪ್ರದರ್ಶನದ ಬಳಿ ಸಾಲು ಸಾಲು ವಾಹನಗಳು ಬರುತ್ತಿದ್ದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ಹೀಗಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಿ ವಾಹನಗಳ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲವೊಂದು ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮತ್ತು ವಾಹನ ವ್ಯವಸ್ಥೆಯಲ್ಲಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ.
ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ (ಗನ್ ಹೌಸ್)-ಕುಸ್ತಿ ಅಖಾಡ ಜಂಕ್ಷನ್-ಬಿ.ಎನ್.ರಸ್ತೆ-ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)- ಆಲ್ಬರ್ಟ್ ವಿಕ್ಟರ್ ರಸ್ತೆ, ಚಾಮರಾಜ ಒಡೆಯರ್ ವೃತ್ತ (ಓಲ್ಡ್ ಸ್ಟಾಚ್ಯು ವೃತ್ತ)-ಕೆ.ಆರ್.ವೃತ್ತ ನ್ಯೂ ಸಯ್ಯಾಜಿರಾವ್ ರಸ್ತೆ ಕಾರ್ಪೋರೇಷನ್ ವೃತ್ತ- ಬಸವೇಶ್ವರ ವೃತ್ತ- ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ (ಗನ್ ಹೌಸ್), (ಪುರಂದರ ರಸ್ತೆಯನ್ನು ಒಳಗೊಂಡಂತೆ) ಈ ರಸ್ತೆಗಳಲ್ಲಿ ಅರಮನೆಯನ್ನು ಮಧ್ಯ ಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸಲು ಅವಕಾಶ ನೀಡಲಾಗಿದೆ. ಈ ರಸ್ತೆಗಳಲ್ಲಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿನಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಕೆ.ಆರ್.ವೃತ್ತ-ನ್ಯೂ ಸಯ್ಯಾಜಿರಾವ್ ರಸ್ತೆ- ಬಾಬಾ ಜಂಕ್ಷನ್ -ಆಯುರ್ವೇದಿಕ್ ವೃತ್ತ- ಇರ್ವಿ ನ್ ರಸ್ತೆ, ನೆಹರು ವೃತ್ತ ಅಶೋಕ ರಸ್ತೆ - ಮಹಾವೀರ ವೃತ್ತ (ದೊಡ್ಡ ಗಡಿಯಾರ)ಚಾಮರಾಜ ಒಡೆಯರ್ ವೃತ್ತ (ಓಲ್ಡ್ ಸ್ಟಾಚ್ಯು ವೃತ್ತ)- ಕೆ.ಆರ್.ವೃತ್ತ ಈ ರಸ್ತೆಗಳ ಮಧ್ಯ ಇರುವ ಪ್ರದೇಶವನ್ನು ಮಧ್ಯ ಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಾಹನಗಳು ಸಂಚರಿಸಲು ಅವಕಾಶ ನೀಡಲಾಗಿದೆ. ಗಡಿಯಾರದ ಮುಳ್ಳು ಸುತ್ತುವ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸದಂತೆ ನಿರ್ಬಂಧ ಹೇರಲಾಗಿತ್ತು.
ಅಶೋಕ ರಸ್ತೆಯಲ್ಲಿ ದಾವೂದ್‌ಖಾನ್ ರಸ್ತೆ ಜಂಕ್ಷನ್ (ಗಾಂಧಿ ಮೆಡಿಕಲ್ಸ್)ನಿಂದ ನೆಹರು ಸರ್ಕಲ್‌ವರೆಗೆ ದಕ್ಷಿಣಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅಶೋಕ ರಸ್ತೆಯಲ್ಲಿ ನೆಹರು ಸರ್ಕಲ್‌ನಿಂದ ದಾವೂದ್‌ಖಾನ್ ರಸ್ತೆ ಜಂಕ್ಷನ್‌ವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ನಿಂದ ಬನುಮಯ್ಯ ಚೌಕದವರೆಗೆ ಚಾಮರಾಜ ಜೋಡಿ ರಸ್ತೆಯಿಂದ ಬನುಮಯ್ಯ ಚೌಕದವರೆಗೆ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬನುಮಯ್ಯ ಚೌಕದಿಂದ ಚಾಮರಾಜ ಜೋಡಿ ರಸ್ತೆವರೆಗೆ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಎನ್.ಮಾಧವರಾವ್ ವೃತ್ತ (ಅಗ್ರಹಾರ ವೃತ್ತ)ದಿಂದ ಉತ್ತರಕ್ಕೆ ತ್ಯಾಗರಾಜ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆಯವರೆಗೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಚಾಮರಾಜ ಜೋಡಿ ರಸ್ತೆಯಿಂದ ತ್ಯಾಗರಾಜ ರಸ್ತೆಯಲ್ಲಿ ಎನ್.ಮಾಧವರಾವ್ ವೃತ್ತ (ಅಗ್ರಹಾರ ವೃತ್ತ)ದವರೆಗೆ ದಕ್ಷಿಣಕ್ಕೆ ಮತ್ತು ಸರ್ಕಸ್ ಮೈದಾನದ ಜಂಕ್ಷನ್‌ನಿಂದ ಪೂರ್ವದಿಂದ ಪಶ್ಚಿಮಕ್ಕೆ ಜಯಚಾಮರಾಜ ಒಡೆಯರ್ ವೃತ್ತದ (ಹಾರ್ಡಿಂಜ್ ವೃತ್ತ) ವರೆಗೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿಲಾಗಿತ್ತು.
ಎಸ್.ಅಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಪೂರ್ವಕ್ಕೆ ಸರ್ಕಸ್ ಮೈದಾನದವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಚಂದ್ರಗುಪ್ತ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್‌ನಿಂದ ಅಶೋಕ ರಸ್ತೆ ಜಂಕ್ಷನ್‌ವರೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದ್ದು, ನವೆಂಬರ್ 4ರವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ತಾತ್ಕಲಿಕವಾಗಿ ರದ್ದುಗೊಳಿಸಿ, ಅಶೋಕ ರಸ್ತೆಯಿಂದ ಬಿ.ಎನ್.ರಸ್ತೆ ಜಂಕ್ಷನ್‌ವರೆಗೆ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು.
ಮೃಗಾಲಯ ರಸ್ತೆಯಲ್ಲಿ ಎಸ್.ಲಿಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಎಫ್.ಕೆ.ಇರಾನಿ ವೃತ್ತದವರೆಗೆ (ಮಿರ್ಜಾ ವೃತ್ತ) ಎಸ್.ಅಂಗಣ್ಣ ವೃತ್ತದಿಂದ (ಚಿರಾಗ್ ಜಂಕ್ಷನ್) ಎಫ್.ಕೆ.ಇರಾನಿ ವೃತ್ತದವರೆಗೆ (ಮಿರ್ಜಾ ವೃತ್ತ) ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿರುತ್ತದೆ. ಎಫ್.ಕೆ.ಇರಾನಿ ವೃತ್ತದಿಂದ (ಮಿರ್ಜಾ ವೃತ್ತ)ಎಸ್.ಅಂಗಣ್ಣ ವೃತ್ತದವರೆಗೆ (ಚಿರಾಗ್ ಜಂಕ್ಷನ್) ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.












Click it and Unblock the Notifications