ಚಾಮರಾಜನಗರ: ಸೆಗಣಿ ಎರಚಿಕೊಂಡು ದೀಪಾವಳಿ ಆಚರಣೆ

By: ಬಿ.ಎಂ.ಲವಕುಮಾರ್
Subscribe to Oneindia Kannada

ಚಾಮರಾಜನಗರ, ಅಕ್ಟೋಬರ್, 30: ಎಲ್ಲೆಡೆ ದೀಪಾವಳಿ ಹಬ್ಬವನ್ನು ದೀಪಹಚ್ಚಿ, ಪಟಾಕಿ ಸಿಡಿಸಿ, ಸವಿಬೋಜನವನ್ನುಂಡು ಸಂತಸ ಸಡಗರದಿಂದ ಆಚರಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಂದು ಭಿನ್ನ ಆಚರಣೆ ಇದೆ ಅದೇನು ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ.

ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದಲ್ಲಿರುವ ಚಾಮರಾಜನಗರ ಗಡಿಭಾಗದ ತಮಿಳುನಾಡು ಬಳಿಯ ತಾಳವಾಡಿ ಫಿರ್ಕಾ ವ್ಯಾಪ್ತಿಯ ಗುಮಟಾಪುರ ಗ್ರಾಮದಲ್ಲಿ ಜನ ಸೆಗಣಿಯಿಂದ ಬಡಿದಾಡಿಕೊಂಡು ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

Deepavali celebrate by Splashing dung in Chamarajanagar

ಇದು ಅಚ್ಚರಿಯಾದರೂ ಸತ್ಯ. ಹಬ್ಬ ಹರಿದಿನಗಳು ಮತ್ತು ಆಚರಣೆಗಳು ಒಂದು ಊರಿನಿಂದ ಮತ್ತೊಂದು ಊರಿಗೆ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ದೀಪಾವಳಿ ಹಬ್ಬದ ಆಚರಣೆಯೂ ಹಾಗೆಯೇ ಒಂದೊಂದು ಊರಿನಲ್ಲಿ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ.

ಇವರೆಲ್ಲರ ನಡುವೆ ಗುಮಟಾಪುರದ ಜನ ಸೆಗಣಿಯಲ್ಲಿ ಬಡಿದಾಡಿ, ಚಾಡಿಕೋರನ ಪ್ರತಿಕೃತಿಯನ್ನು ಬೆಂಕಿಯಿಂದ ದಹಿಸಿ ದೀಪಾವಳಿಯನ್ನು ಬೀಳ್ಕೊಡುತ್ತಾರೆ.

ಪ್ರತಿವರ್ಷವೂ ಬಲಿಪಾಡ್ಯಮಿಯ ಮಾರನೆಯ ದಿನ ಈ ಹಬ್ಬವನ್ನು ಗ್ರಾಮಸ್ಥರು ಆಚರಿಸುತ್ತಾರೆ. ಇದನ್ನು ಸ್ಥಳೀಯರು ಗೋರೆಹಬ್ಬ ಎಂದು ಕರೆಯುತ್ತಾರೆ.

ಗೋರೆಹಬ್ಬದ ವಿಶೇಷತೆ ಏನೆ ಇದ್ದರೂ ಮೇಲ್ನೋಟಕ್ಕೆ ಸೆಗಣಿಯಲ್ಲಿ ಬಡಿದಾಡುವುದು ಮಾತ್ರ ಕಂಡು ಬರುತ್ತದೆಯಲ್ಲದೆ ಎಲ್ಲರ ಗಮನಸೆಳೆಯುತ್ತದೆ.

Deepavali celebrate by Splashing dung in Chamarajanagar

ಇಷ್ಟಕ್ಕೂ ಈ ಹಬ್ಬ ಇಲ್ಲಿ ಹೇಗೆ ಆಚರಣೆಗೆ ಬಂತು ಎಂಬುವುದನ್ನು ಹುಡುಕುತ್ತಾ ಹೋದರೆ ಇಲ್ಲಿನ ಹಿರಿಯರು ಒಂದಷ್ಟು ಇತಿಹಾಸವನ್ನು ಮೆಲುಕು ಹಾಕುತ್ತಾರೆ. ಜತೆಗೆ ಹಬ್ಬ ಆಚರಣೆಯ ಒಂದಷ್ಟು ಮಾಹಿತಿಯನ್ನು ನಮ್ಮ ಮುಂದೆ ಇಡುತ್ತಾರೆ.

ಆ ಹಿರಿಯರು ಹೇಳುವ ಪ್ರಕಾರ ಹಿಂದಿನ ಕಾಲದಲ್ಲಿ ಗುಮಟಾಪುರ ಗ್ರಾಮದ ಗೌಡನ ಮನೆಗೆ ವ್ಯಕ್ತಿಯೊಬ್ಬ ಕೆಲಸಕ್ಕೆ ಸೇರಿದ್ದನು. ಈತ ಇದ್ದಕ್ಕಿದ್ದಂತೆ ಮರಣ ಹೊಂದಿದನು. ಆತ ಬಳಸುತ್ತಿದ್ದ ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗಿತ್ತು.

ಇದಾದ ಕೆಲ ದಿನಗಳ ನಂತರ ಗೌಡನ ಎತ್ತಿನ ಗಾಡಿ ಜೋಳಿಗೆ ಎಸೆಯಲಾಗಿದ್ದ ತಿಪ್ಪೆಯಲ್ಲಿ ಹಾದು ಹೋಗುವಾಗ ಎತ್ತಿನ ಗಾಡಿಯ ಚಕ್ರಕ್ಕೆ ಆ ಜೋಳಿಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ಈ ವೇಳೆ ಸಮೀಪದಲ್ಲಿಯೇ ಇದ್ದ ಶಿವಲಿಂಗದಿಂದ ರಕ್ತ ಬರುತ್ತದೆ.

ಅದೇ ದಿನ ರಾತ್ರಿ ಗೌಡರ ಕನಸಿನಲ್ಲಿ ದೇವರು ಕಾಣಿಸಿಕೊಂಡು ಈ ದೋಷ ನಿವಾರಣೆಗಾಗಿ ಗ್ರಾಮದಲ್ಲಿ ಗುಡಿಯೊಂದನ್ನು ನಿರ್ಮಿಸಬೇಕು. ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಆಚರಿಸಬೇಕು ಎಂದು ಹೇಳಿತಂತೆ. ಹೀಗಾಗಿ ತಿಪ್ಪೆ ಸ್ಥಳದಲ್ಲಿ ಬೀರಪ್ಪನ ಗುಡಿ ಕಟ್ಟಿ ಸಗಣಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆಯಂತೆ.

ಇನ್ನು ಈ ಹಬ್ಬದಲ್ಲಿ ಮತ್ತೊಂದು ವಿಶೇಷತೆಯನ್ನು ಕಾಣಬಹುದು. ಹಬ್ಬದ ದಿನದಂದು ಗ್ರಾಮದ ಯುವಕನೊಬ್ಬನನ್ನು ಕತ್ತೆ ಮೇಲೆ ಕೂರಿಸಿಕೊಂಡು ಗ್ರಾಮದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಕತ್ತೆ ಮೇಲೆ ಕುಳಿತ ಈತನನ್ನು ಚಾಡಿಕೋರ ಎಂದು ಕರೆಯಲಾಗುತ್ತದೆ.

ಮೆರವಣಿಗೆ ವೇಳೆ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತದೆ. ಇದಕ್ಕೂ ಮುನ್ನ ಗೋವುಗಳು ಹಾಕಿದ ಸಗಣಿಯನ್ನು ಗ್ರಾಮದ ದೇವಸ್ಥಾನದ ಬಳಿ ತಂದು ಗುಡ್ಡೆಹಾಕಲಾಗುತ್ತದೆ. ಮತ್ತೊಂದೆಡೆ ಮಕ್ಕಳು ಮನೆ, ಮನೆಗೆ ತೆರಳಿ ಎಣ್ಣೆಯನ್ನು ಬೇಡಿ ತರುತ್ತಾರೆ. ಆ ಎಣ್ಣೆಯಿಂದ ಪೂಜೆ ಸಲ್ಲಿಸಿ, ಬಳಿಕ ಕಾರಪ್ಪ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.

ಇದೇ ವೇಳೆಗೆ ಯುವಕನಿಗೆ ಹುಲ್ಲಿನ ಮೀಸೆ, ಗಡ್ಡ ಮಾಡಿ ಕಟ್ಟಿ ಬಳಿಕ ಆತನನ್ನು ಕತ್ತೆಯೊಂದರಲ್ಲಿ ಕೂರಿಸಿ ಗ್ರಾಮದ ಕೆರೆಯಿಂದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಮಾಡಿ ಬೀರೇಶ್ವರನ ದೇವಸ್ಥಾನದವರೆಗೂ ಕರೆತರಲಾಗುತ್ತದೆ. ಈ ವೇಳೆ ಕತ್ತೆ ಮೇಲೆ ಕುಳಿತಿದ್ದವನಿಗೆ ಜನ ಅಶ್ಲೀಲ ಪದಗಳಿಂದ ನಿಂದಿಸುತ್ತಾ ಬರುತ್ತಾರೆ.

ಮೆರವಣಿಗೆ ಬಂದು ಬೀರೇಶ್ವರನ ದೇವಸ್ಥಾನ ತಲುಪಿದ ನಂತರ ಆತನ ಹುಲ್ಲಿನ ಮೀಸೆ ಹಾಗೂ ಗಡ್ಡ ತೆಗೆದು ಸಗಣಿ ರಾಶಿಯಲ್ಲಿ ಇರಿಸಿ ಬೀರೇಶ್ವರನಿಗೆ ಪೂಜೆ ಸಲ್ಲಿಸಿ ಸೆಗಣಿ ಎರಚಾಟಕ್ಕೆ ಚಾಲನೆ ನೀಡಲಾಗುತ್ತದೆ.

ಸೆಗಣಿ ಎರಚಾಡಲೆಂದೇ ಗ್ರಾಮದ ಯುವಕರು ಸಗಣಿಯನ್ನು ಉಂಡೆ ಮಾಡಿಕೊಂಡು ತಯಾರಾಗಿ ನಿಲ್ಲುತ್ತಾರೆ. ಪೂಜೆ ಮುಗಿಯುತ್ತಿದ್ದಂತೆಯೇ ಸೆಗಣಿ ಎರಚಾಟ ಆರಂಭವಾಗುತ್ತದೆ. ಒಬ್ಬರಿಗೊಬ್ಬರು ಸೆಗಣಿಯಲ್ಲಿ ಹೊಡೆದಾಡಿ, ಬಡಿದಾಡಿ, ಉರುಳಾಡಿ ಸಂತೋಷ ಪಡುತ್ತಾರೆ.

ಇಡೀ ಗ್ರಾಮದ ಜನ ಸೆಗಣಿಯಲ್ಲಿ ಮುಳುಗಿ ಏಳುತ್ತಾರೆ. ಕೆಲವು ಸಮಯಗಳವರೆಗೆ ನಡೆಯುವ ಈ ಸೆಗಣಿ ಎರಚಾಟಕ್ಕೆ ಇತಿಶ್ರೀ ಹಾಡಲಾಗುತ್ತದೆ.

ಆ ನಂತರ ಚಾಡಿಕೋರ ಗುಡ್ಡದಲ್ಲಿ ಹಿಡಿಕಟ್ಟೆಗಳಿಂದ ಚಾಡಿಕೋರನ ಪ್ರತಿಕೃತಿ ನಿರ್ಮಿಸಿ ಸುಡುತ್ತಾರೆ. ಅಲ್ಲಿಗೆ ಹಬ್ಬ ಮುಗಿಯುತ್ತದೆ. ಸೆಗಣಿಯಲ್ಲಿ ಉರುಳಾಡಿದವರು ಕೆರೆ, ಬಾವಿಗಳಿಗೆ ತೆರಳಿ ಸ್ನಾನ ಮಾಡಿ ಮೈಕೈ ಶುಚಿಗೊಳಿಸಿಕೊಂಡು ಶುಭ್ರರಾಗುತ್ತಾರೆ. ಅಲ್ಲಿಗೆ ಗೋರೆಹಬ್ಬಕ್ಕೆ ತೆರೆ ಬೀಳುತ್ತದೆ.

ಒಂದಷ್ಟು ವಿಶಿಷ್ಟ ಮತ್ತು ವಿಭಿನ್ನವಾಗಿರುವ ಈ ಹಬ್ಬ ಗ್ರಾಮದಲ್ಲಿ ಭಾವೈಕ್ಯತೆಯನ್ನು ಸಾರುತ್ತದೆ. ಅಷ್ಟೇ ಅಲ್ಲ ಸೆಗಣಿಯಲ್ಲಿ ಔಷಧೀಯ ಗುಣಗಳಿರುವುದರಿಂದ ಆರೋಗ್ಯದ ದೃಷ್ಠಿಯಿಂದಲೂ ಉತ್ತಮವಾಗಿದೆ. ಹೀಗಾಗಿಯೇ ಹಿಂದಿನ ಕಾಲದವರು ವಿಶಿಷ್ಟವಾದ ಈ ಗೋರೆಹಬ್ಬವನ್ನು ಜಾರಿಗೆ ತಂದಿರಬಹುದೇನೋ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Deepavali celebrate by Splashing dung in Chamarajanagar Gamatapura village which is in Karnataka Tamilnadu border
Please Wait while comments are loading...