ಚಾಮರಾಜನಗರ: ವಾಲ್ಮೀಕಿ ಜಯಂತಿ ವೇಳೆ ಹೃದಯಾಘಾತ, ವಿಚಾರಣಾಧೀನ ಖೈದಿ ಸಾವು
ಚಾಮರಾಜನಗರ, ಅಕ್ಟೋಬರ್ 29: ವಿಚಾರಣಾಧೀನ ಖೈದಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಉಪಕಾರಗೃಹದಲ್ಲಿ ನಡೆದಿದೆ. ಕೇರಳ ಮೂಲದ ಜಯಪ್ರಕಾಶ್ ಅಲಿಯಾಸ್ ಪ್ರಕಾಶ್(32) ಮೃತ ವಿಚಾರಣಾಧೀನ ಖೈದಿ.
ಇತ್ತೀಚೆಗೆ ಕಾರು ಅಡ್ಡಗಟ್ಟಿ 45 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣದಲ್ಲಿ ಜಯಪ್ರಕಾಶ್ ಅಲಿಯಾಸ್ ಪ್ರಕಾಶ್ ಎಂಬಾತನನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದರು. ಚಾಮರಾಜನಗರ ಉಪಕಾರಗೃಹದಲ್ಲಿ ಜಯಪ್ರಕಾಶ್ ವಾಲ್ಮೀಕಿ ಜಯಂತಿಯ ಪ್ರಾರ್ಥನೆ ವೇಳೆ ಏಕಾಏಕಿ ಕುಸಿದುಬಿದ್ದಿದ್ದಾನೆ.

ಕೂಡಲೇ ಉಪಕಾರಗೃಹ ಸಿಬ್ಬಂದಿ ಜಯಪ್ರಕಾಶ್fನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆಯೇ ಜಯಪ್ರಕಾಶ್ ಮೃತಪಟ್ಟಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೇಗೂರಿನ ದರೋಡೆ ಪ್ರಕರಣ ಬೇಧಿಸಿ 10 ಮಂದಿ ಬಂಧನ: ಚಾಮರಾಜನಗರದ ಎಸ್ಪಿ ಮಾಹಿತಿ ಊಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ ಗೇಟ್ ಬಳಿ ಮಧ್ಯರಾತ್ರಿ ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸಿದ್ದು 10 ಮಂದಿ ಬಂಧಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಈ ಸಂಬಂಧ ಪತ್ರಿಕಾ ಪ್ರಕಟಣೆ ಮೂಲಕ ಎಸ್ಪಿ ಮಾಹಿತಿ ನೀಡಿದ್ದು, ಈಚರ್ ವಾಹನ, ಕಾರುಗಳನ್ನು ಬಳಸಿಕೊಂಡು ಉದ್ಯಮಿ ಕಾರು ಅಡ್ಡಗಟ್ಟಿ 40 ಲಕ್ಷ ರೂಪಾಯಿ ನಗದು, ಮೊಬೈಲ್ ಹಾಗೂ ಆ್ಯಪಲ್ ವಾಚ್‌ಅನ್ನು ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಗುಂಡ್ಲುಪೇಟೆ ವೃತ್ತ ನಿರಿಕ್ಷಕರ ನೇತೃತ್ವದಲ್ಲಿ ಚಾಮರಾಜನಗರ ಪೂರ್ವ ಠಾಣೆ ಪಿಐ, ಬೇಗೂರು ಹಾಗೂ ತೆರಕಣಾಂಬಿ ಠಾಣೆಯ ಪಿಎಸ್ಐ ಅವರನ್ನೊಳಗೊಂಡ ತಂಡ ಪ್ರಕರಣ ಬೇಧಿಸಿ 10 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ದರೋಡೆ ಮಾಡಿದ್ದ ಹಣದಲ್ಲಿ 20.91 ಲಕ್ಷ ನಗದು, 1 ಕಾರು, ಆ್ಯಪಲ್ ವಾಚ್ , ಕೃತ್ಯಕ್ಕೆ ಬಳಸಿದ್ದ 3 ಕಾರು ವಶಪಡಿಸಿಕೊಳ್ಳಲಾಗಿದೆ, ಪ್ರಮುಖ ಆರೋಪಿಗಳು ಪತ್ತೆಯಾಗಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ 29 ರ ರಾತ್ರಿ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ ಗೇಟ್ ಬಳಿ ಕೇರಳ ಮೂಲದ ಉದ್ಯಮಿ ರಹೀಂ ಎಂಬವರು 40 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗ 10ಕ್ಕೂ ಹೆಚ್ಚು ಜನರ ಗುಂಪು ದರೋಡೆ ಮಾಡಿದ್ದರು. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.












Click it and Unblock the Notifications