ಕಾಂಗ್ರೆಸ್ ಮಾದಿಗರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ-ಸಂಸದರ ಗಂಭೀರ ಆರೋಪ
ಹಿರಿಯೂರು, ಆಗಸ್ಟ್, 25: ರಾಜ್ಯದಲ್ಲಿ ಮುಡಾ ಹಗರಣ ಪ್ರಕರಣ ಸದ್ದು ಮಾಡುತ್ತಿದ್ದು, ಸಿಎಂ ಸಿದ್ದಾರಾಮಯ್ಯನ ವಿರುದ್ಧ ವಿಪಕ್ಷ ನಾಯಕರು ಆಕ್ರೊಶ ಹೊರಹಾಕುತ್ತಲೇ ಇದ್ದಾರೆ. ಮತ್ತೊಂದೆಡೆ ರಾಜಕೀಯ ಕೆಸೆರೆರಚಾಟಗಳು ಕೂಡ ನಡೆಯುತ್ತಿವೆ. ಇನ್ನು ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾದಿಗರನ್ನು ವೋಟಿಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪ ಮಾಡಿದರು.
ನಗರದ ನೆಹರೂ ಮೈದಾನದ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಮಾದಿಗ ಸಮಾಜದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಮಾದಿಗ ಜನಾಂಗವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಸ್ವಾತಂತ್ರ್ಯ ನಂತರದ ಅವರ ಆಡಳಿತದಲ್ಲಿ ಮೀಸಲಾತಿಗೆ ಹಲವಾರು ಜಾತಿಗಳನ್ನು ಸೇರ್ಪಡೆ ಮಾಡಿದರು. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸಿಗಬೇಕು. 30 ವರ್ಷದಿಂದ ಈ ಹೋರಾಟ ನಡೆದಿದ್ದು, ಹಲವಾರು ಮಾದಿಗ ಮುಖಂಡರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ಒಳ ಮೀಸಲಾತಿ ಕೊಡಲು ನಾವು ಬದ್ದ, ನಿಮ್ಮ ಹೋರಾಟದ ಜೊತೆಗೆ ನಾನಿದ್ದೇನೆ ಎಂದು ಪ್ರಧಾನಿ ಮೋದಿಯವರು ಭರವಸೆ ನೀಡಿದ್ದರು. ಅದರಂತೆಯೇ ಈಗ ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಅನುಷ್ಠಾನಗೊಳಿಸದೇ ಮೀನಾಮೇಷ ಎಣಿಸುತ್ತಿದೆ. ಎಲ್ಲಿಯವರೆಗೆ ನೀವು ಸ್ವಾಭಿಮಾನದಿಂದ ಬದುಕುವುದಿಲ್ಲವೋ ಅಲ್ಲಿಯವರೆಗೆ ನ್ಯಾಯ ಸಿಗಲಾರದು ಎಂದು ಹೇಳಿದರು.
ನಮ್ಮ ಆಡಳಿತದಲ್ಲಿ ಕಾಂಗ್ರೆಸ್ ವಿರೋಧ ಮಾಡಿದರು ಸಹ ಶೇಕಡ 17ರಷ್ಟು ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೆವು. ಸಂವಿಧಾನ ಬದಲು ಮಾಡುವವರು ನಾವಲ್ಲ. ನಾವು ಸಂವಿಧಾನಕ್ಕೆ ನ್ಯಾಯ ಒದಗಿಸುವವರು. ಸುಮ್ಮನೆ ಕೂರುವ ಕಾಲವಿದಲ್ಲ. ಸಾವಿರ ಸಾವಿರ ಸಂಖ್ಯೆಯಲ್ಲಿ ತಹಶೀಲ್ದಾರ್, ಡಿಸಿ ಕಚೇರಿಗಳ ಮುಂಭಾಗ ಒಳ ಮೀಸಲಿನ ಅನುಷ್ಠಾನಕ್ಕೆ ಧರಣಿ ನಡೆಸಿ. ಎಲ್ಲಾ ಜನಾಂಗದ ಜನರ ವಿಶ್ವಾಸ ಗಳಿಸಿಕೊಳ್ಳಿ. ಯಾರೊಂದಿಗೂ ಜಗಳ ಬೇಡ. ಸರ್ವ ಸಮುದಾಯದವರು ಗೌರವ ಕೊಡುವ ರೀತಿ ಬದುಕಬೇಕೆಂದರು.
ಆದಿ ಜಾಂಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿನ ಹಲವು ಯೋಜನೆಗಳ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಂಸದರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸುತ್ತಿರುವುದು ಅಭಿನಂದನಾರ್ಹ. ಸುಪ್ರೀಂ ಕೋರ್ಟ್‌ನ ಆದೇಶದಂತೆ ರಾಜ್ಯ ಸರ್ಕಾರ ಪರಮಾಧಿಕಾರ ಬಳಸಿ ಒಳ ಮೀಸಲಾತಿಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದರು.
ರಾಜ್ಯ ಸರ್ಕಾರ ನಿಧಾನಗತಿಯ ತೀರ್ಮಾನ ಮಾಡಿದರೆ ಮಾದಿಗರಿಗೆ ಮಾಡಿದ ಅನ್ಯಾಯ ಎಂದು ತೀರ್ಮಾನ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರ ಮಾದಿಗರ ಮೀಸಲಾತಿಯ ಬಗ್ಗೆ ಸ್ಪಷ್ಟಪಡಿಸಬೇಕು. ಅವರ ನಡೆ ತೀರ್ಮಾನಗಳನ್ನು ಗಮನಿಸಿ ಮುಂದಿನ ದಿನಗಳಲ್ಲಿ ಮೀಸಲಾತಿ ಅನುಷ್ಠಾನಗೊಳ್ಳುವವರೆಗೆ ಹೋರಾಟ ನಡೆಸುತ್ತೇವೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ, ಚಿತ್ರದುರ್ಗ ಜಿಲ್ಲೆಯು ಹಿಂದುಳಿದ ಜಿಲ್ಲೆಯಾಗಿದ್ದು, ಸಂಸದರು ಪ್ರಧಾನಿ ಮೋದಿಯವರ ಆಡಳಿತದ ಅವಧಿಯಲ್ಲಿ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ಧಿ ಪಥದಲ್ಲಿ ನಡೆಸುತ್ತಾರೆ ಎಂಬ ವಿಶ್ವಾಸ ನಮ್ಮೆಲ್ಲರಲ್ಲಿದೆ. ಅತ್ಯಂತ ಸುಸಂಸ್ಕೃತ ವ್ಯಕ್ತಿಯಾದ ನಮ್ಮ ಸಂಸದರನ್ನು ಡಿ.ಮಂಜುನಾಥ್ ಅವರ ಪ್ರತಿರೂಪ ಎಂದರೆ ತಪ್ಪಾಗಲಾರದು ಎಂದರು.
ತಾಲ್ಲೂಕಿನಲ್ಲಿ ಮತ್ತು ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಸಾವಿರಾರು ಯುವಕರಿಗೆ ಉದ್ಯೋಗ ಒದಗಿಸಿಕೊಡಬೇಕಿದೆ. ಕೇಂದ್ರ ಕೈಗಾರಿಕಾ ಸಚಿವರು ನಮ್ಮವರೇ ಇದ್ದು, ಜಿಲ್ಲೆಗೆ ಹೆಚ್ಚಿನ ಕೈಗಾರಿಕೆಗಳನ್ನು ತರುವುದರ ಮೂಲಕ ನೂರಾರು ಕಿ.ಮೀ. ದೂರದಿಂದ ಬಂದು ಚಿತ್ರದುರ್ಗದಲ್ಲಿ ಗೆದ್ದಿರುವ ಸಂಸದರು ಜಿಲ್ಲೆಯಲ್ಲಿ ತಮ್ಮ ಅಭಿವೃದ್ಧಿಯ ಹೆಜ್ಜೆ ಗುರುತುಗಳನ್ನು ಉಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎನ್.ಆರ್.ಲಕ್ಷ್ಮಿಕಾಂತ್, ವಿಶ್ವನಾಥ್, ಎಂ.ಜಗದೀಶ್, ದ್ಯಾಮೇಗೌಡ, ಬಸವರಾಜ ನಾಯಕ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ, ವಕೀಲ ರಂಗಸ್ವಾಮಿ, ಜಲ್ದಪ್ಪ, ಸ್ವಾಮೀಜಿ ದಾಸ್, ಕೆ.ಪಿ.ಶ್ರೀನಿವಾಸ್, ಹೆಗ್ಗೆರೆ ಮಂಜುನಾಥ್, ಕೆ.ಆರ್.ಹಳ್ಳಿ ರಘುನಾಥ್, ಶಿವಣ್ಣ ಶ್ರವಣಗೆರೆ, ರಾಜಪ್ಪ ಮಸ್ಕಲ್, ರವಿಶಂಕರ್, ಮಹೇಶ್, ಮಾರುತೇಶ್, ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications