ಕೇರಳದತ್ತ ಹೊರಟ ಚಾಮರಾಜನಗರ ಕೂಲಿ ಕಾರ್ಮಿಕರು

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ನವೆಂಬರ್, 21: ಕರ್ನಾಟಕದಲ್ಲಿ ಅದರಲ್ಲೂ ಚಾಮರಾಜನಗರ ವ್ಯಾಪ್ತಿಯಲ್ಲಿ ಮಳೆಯಿಲ್ಲದೆ ಭೀಕರ ಬರ ಆವರಿಸಿರುವ ಕಾರಣ ಇಲ್ಲಿನ ಕೂಲಿ ಕಾರ್ಮಿಕರು ಕೆಲಸ ಹುಡುಕಿಕೊಂಡು ಕೇರಳದತ್ತ ಹೊರಟಿದ್ದಾರೆ.

ಕೃಷಿಯನ್ನೇ ನಂಬಿ ಬದುಕುವ ರೈತರು ಕೃಷಿ ಮಾಡಲು ಸಾಧ್ಯವಾಗದ ಕಾರಣದಿಂದ ಜಮೀನನ್ನು ಪಾಳು ಬಿಟ್ಟಿದ್ದಾರೆ. ಪರಿಣಾಮ ಕೂಲಿ ಮಾಡಿ ಬದುಕುತ್ತಿದ್ದ ಕಾರ್ಮಿಕರು ಕೆಲಸವಿಲ್ಲದೆ ಅಲೆಯುವಂತಾಗಿದೆ.

Chamarajanagar labours migrate to kerala

ಸಾಮಾನ್ಯವಾಗಿ ಡಿಸೆಂಬರ್ ನಂತರ ಕೊಡಗಿನತ್ತ ಹೆಚ್ಚಿನವರು ತೆರಳುತ್ತಾರೆ. ಆದರೆ ಚಾಮರಾಜನಗರದ ಗುಂಡ್ಲುಪೇಟೆ ವ್ಯಾಪ್ತಿಯ ಜನರಿಗೆ ಕೇರಳವೇ ಹತ್ತಿರವಾಗಿರುವುದರಿಂದ ಅತ್ತ ಕಡೆ ತಮ್ಮ ಕುಟುಂಬ ಸಹಿತ ಹೊರಡುತ್ತಿರುವುದು ಕಂಡು ಬರುತ್ತಿದೆ.

ಕೇರಳದ ಕೆಲವೆಡೆ ಕಾಫಿ ತೋಟಗಳಿರುವುದರಿಂದ ಅಲ್ಲಿ ಕೂಲಿ ಕಾರ್ಮಿಕರಿಗೆ ಬೇಡಿಕೆಯಿರುವುದರಿಂದ ಕೆಲಸಕ್ಕಾಗಿ ಅಲ್ಲಿಗೆ ಕುಟುಂಬ ಸಹಿತ ಹೊರಡುತ್ತಿದ್ದು, ಕೇರಳದ ಬಸ್‍ಗಳಲ್ಲಿ ಕೂಲಿ ಕಾರ್ಮಿಕರು ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಬರ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ಗುಳೆ ತಡೆಯುವಲ್ಲಿ ವಿಫಲರಾಗಿದ್ದು ಕೃಷಿ ಕೂಲಿ ಕಾರ್ಮಿಕರು ಪ್ರತಿನಿತ್ಯ ಗುಂಡ್ಲುಪೇಟೆಯ ಬಸ್ ನಿಲ್ದಾಣ, ಕೋಡಹಳ್ಳಿ ವೃತ್ತಗಳಲ್ಲಿ ಕೇರಳಕ್ಕೆ ಹೋಗುವ ಬಸ್ಸುಗಳಿಗಾಗಿ ಕಾಯುತ್ತಾ ಕುಳಿತು ಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಗುಂಡ್ಲುಪೇಟೆಯ ಹಂಗಳ, ಬೇಗೂರು ಬನ್ನಿತಾಳಪುರ, ಕೂತನೂರು, ಮಲ್ಲಯ್ಯನಪುರ, ರಾಘವಾಪುರ, ಭೀಮನಬೀಡು, ಬೇರಂಬಾಡಿ, ಕೋಡಹಳ್ಳಿ, ಅಣ್ಣೂರುಕೇರಿ, ತೆರಕಣಾಂಬಿಹುಂಡಿ, ಕಗ್ಗಳ, ಬೆರಟಹಳ್ಳಿ, ಸೋಮನಪುರ, ಪಡಗೂರು, ಕೊಡಸೋಗೆ, ಬೊಮ್ಮಲಾಪುರ, ಬಾಚಹಳ್ಳಿ, ಅಂಕಹಳ್ಳಿ, ಕೆಲಸೂರು ಗ್ರಾಮಗಳಲ್ಲಿ ಕೃಷಿ ಕಾರ್ಮಿಕರಿಗೆ ಜೀವನ ನಿರ್ವಹಣೆಯು ಈ ಬಾರಿ ಬಹಳ ಸವಾಲಾಗಿದೆ.

ರೈತರು ಕಬ್ಬು, ಅರಿಶಿಣ ಹಾಗೂ ತರಕಾರಿ ಬೆಳೆಗಳನ್ನು ಬೆಳೆದರೆ ದಿನವೂ ಕೂಲಿ ಹಾಗೂ ಒಂದೊತ್ತಿನ ಊಟ ಸಿಗುತ್ತಿತ್ತು. ಇದೀಗ ನೀರಿಲ್ಲದೆ ವ್ಯವಸಾಯ ಕುಂಠಿತವಾಗಿದ್ದು ಕಾರ್ಮಿಕರು ಕೆಲಸ ಸಿಗದೆ ಹತಾಶರಾಗಿದ್ದು, ಕೇವಲ ನ್ಯಾಯಬೆಲೆ ಅಂಗಡಿಗಳಲ್ಲಿ ಕೊಡುವ ಅಕ್ಕಿಯನ್ನು ನಂಬಿಕೊಂಡು ಜೀವನ ನಡೆಸುವುದು ಸಾಧ್ಯವಾಗದ ಮಾತಾಗಿದೆ.

ಹೀಗಾಗಿಯೇ ಕೂಲಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಜಿಲ್ಲೆಯಿಂದ ಹೊರ ಹೋಗುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Due to lack of rain drought hits in Chamaraja nagar. effect of this labour people of Chamarajanagar district migrating to Kerala.
Please Wait while comments are loading...