ಚಾಮರಾಜನಗರ: ಅಧಿಕೃತ ಘೋಷಣೆಗೂ ಮುನ್ನ ಸಚಿವ ಎಚ್.ಸಿ.ಮಹದೇವಪ್ಪ ಪುತ್ರನ ನಾಮಪತ್ರ ಸಲ್ಲಿಕೆ ದಿನಾಂಕ ಫಿಕ್ಸ್
ಚಾಮರಾಜನಗರ, ಮಾರ್ಚ್, 27: ಕಾಂಗ್ರೆಸ್ ಸಿಇಸಿ ಸಭೆಗೂ ಮುನ್ನವೇ ಸಚಿವ ಎಚ್.ಸಿ.ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಅವರ ನಾಮಪತ್ರ ಸಲ್ಲಿಸುವ ದಿನಾಂಕ ಫಿಕ್ಸ್ ಆಗಿದ್ದು, ಏಪ್ರಿಲ್ 3ರಂದು ಸುನೀಲ್ ಬೋಸ್ ನಾಮಪತ್ರ ಸಲ್ಲಿಸಲಿದ್ದಾರೆ. ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರವಾಸಪಟ್ಟಿ ಹೊರಡಿಸಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವರ ಅನುಮತಿಯೊಂದಿಗೆ ಪ್ರವಾಸಪಟ್ಟಿ ಹೊರಡಿಸಿದ್ದು, ಸುನೀಲ್ ಬೋಸ್ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಹೆಸರಿಸಲಾಗಿದೆ. ಇಂದು ಸಂಜೆ ದೆಹಲಿಯಲ್ಲಿ ಕಾಂಗ್ರೆಸ್ ಸಿಇಸಿ ಸಭೆ ನಡೆಯಲಿದ್ದು, ಬಳಿಕ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಲಾಗುವುದು ಎಂದು ತಿಳಿದುಬಂದಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಮೈಸೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 1 ಹಾಗೂ 2ರಂದು ಕಾರ್ಯಕರ್ತರ ಸಭೆ ನಡೆಸಲಿದ್ದು, ಏಪ್ರಿಲ್ 3ರ ಬೆಳಗ್ಗೆ 11ಕ್ಕೆ ಸುನಿಲ್ ಬೋಸ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪ್ರವಾಸ ಪಟ್ಟಿಯಲ್ಲಿ ತಿಳಿಸಲಾಗಿದೆ. ತೀವ್ರ ಕಗ್ಗಂಟಾಗಿ ಉಳಿದಿದ್ದ ಕಾಂಗ್ರೆಸ್‌ನ ಟಿಕೆಟ್ ಕೊನೆಗೂ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಮಹಾದೇವಪ್ಪ ಯಶಸು ಕಂಡಿದ್ದಾರೆ. ಇನ್ನು, ಚಾಮರಾಜನಗರದ ಕೈ ಶಾಸಕರು ಈಗಾಗಲೇ ಮುಖಂಡರ ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರ ರೂಪಿಸಿದ್ದಾರೆ.
ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕಂಗಟ್ಟಾಗಿ ಪರಿಣಿಸಿದ್ದ ಕ್ಷೇತ್ರಕ್ಕೆ ಕೊನೆಗೂ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ರಾಜ್ಯ ಮಾಜಿ ಸಚಿವ ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಿಸಲಾಗಿದೆ. ಹಾಗಾದರೆ ಇವರ ರಾಜಕೀಯ ಹಿನ್ನೆಲೆಯನ್ನು ಇಲ್ಲಿ ತಿಳಿಯಿರಿ.
ರಾಜಕೀಯ ಹಿನ್ನೆಲೆ: ತೀವ್ರ ಕುತೂಹಲ ಮೂಡಿಸಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಗೋವಿಂದ ಕಾರಜೋಳಗೆ ಬಿಜೆಪಿ ಟಿಕೆಟ್ ಅಂತಿಮವಾಗಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ನಡುವೆ ಬಿಗ್ ಪೈಟ್ ಶುರುವಾಗಲಿದೆ. ಕಾಂಗ್ರೆಸ್ ಅಭ್ಯರ್ಥಿ ಒಮ್ಮೆ ಜಿಲ್ಲೆಯಿಂದ ಸಂಸದರಾಗಿ ಆಯ್ಕೆಯಾಗಿ, ಎರಡನೇ ಅವಧಿಗೆ ಸೋಲು ಕಂಡಿದ್ದರು. ಇದೀಗ ಮೂರನೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇತ್ತ ಬಿಜೆಪಿ ಅಭ್ಯರ್ಥಿ ರಾಜ್ಯ ರಾಜಕೀಯದಲ್ಲಿ ಹಿರಿಯರಾಗಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಮೊದಲ ಬಾರಿಗೆ ಸಂಸತ್ ಅಖಾಡಕ್ಕೆ ಇಳಿದಿದ್ದಾರೆ. ಹಾಗಾದರೆ ಗೋವಿಂದ ಕಾರಜೋಳ ಅವರ ರಾಜಕೀಯ ಹಿನ್ನೆಲೆ ಗಮನಿಸುವುದಾದರೆ, ಗೋವಿಂದ ಕಾರಜೋಳ ಅವರು 1951, ಜನವರಿ 25ರಂದು ಜನಿಸಿದರು. (73ವರ್ಷ) ಅವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ದಲಿತ ಎಡಗೈ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಇವರ ಪೂರ್ಣ ಹೆಸರು ಗೋವಿಂದ ಮುಕ್ತಪ್ಪ ಕಾರಜೋಳ.
ಇವರು ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯದಲ್ಲಿ ಅನುಭವ ಹೊಂದಿದ್ದು, ಹಿರಿಯ ರಾಜಕಾರಣಿ ಆಗಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ, ಲೋಕೋಪಯೋಗಿ, ಸಮಾಜ ಕಲ್ಯಾಣ, ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯ ಘಟಕದ ಕೋರ್ ಕಮಿಟಿ ಸದಸ್ಯರಾಗಿರುವ ಕಾರಜೋಳ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ.
ಮೊದಲ ಬಾರಿಗೆ 1994ರಲ್ಲಿ ಜನತಾದಳ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಪದಾರ್ಪಣೆ ಮಾಡುವ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. 1999ರ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 52,658 ಮತ ಪಡೆದು ಸೋಲು ಕಂಡಿದ್ದರು. 2004ರಲ್ಲಿ ಬಿಜೆಪಿ ಸೇರ್ಪಡೆಯಾದರು. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆಗ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
2006 ಮತ್ತು 2007ರಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾಗಿ ಆಡಳಿತ ನಡೆಸಿದ್ದಾರೆ. 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಣ್ಣ ಕೈಗಾರಿಕೆ ಸಚಿವರಾಗಿದ್ದರು. 2018ರಲ್ಲಿ 64,727 ಮತ ಪಡೆಯುವ ಮೂಲಕ ಮತ್ತೆ ಶಾಸಕರಾದರು. 2019ರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉಪಮುಖ್ಯಮಂತ್ರಿ ಆಗಿದ್ದರು. ನಂತರ 2023ರಲ್ಲಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿಯೊಂದಿಗೆ 27 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದರು. ಜೆಡಿಎಸ್ ಪಕ್ಷಕ್ಕೆ ಮೂರು ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿದ್ದರು. ಆದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಯಲ್ಲಿ ಪರ-ವಿರೋಧ ಕೇಳಿ ಬಂದಿತ್ತು . ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ಗೆ ತಲೆ ನೋವಾಗಿ ಪರಿಣಮಿಸಿತ್ತು.












Click it and Unblock the Notifications