ಚಾಮರಾಜನಗರ: ಶತಮಾನ ಕಂಡ ಸೇತುವೆ ಇದೀಗ ಅಪಾಯದ ಸ್ಥಿತಿಗೆ
ಚಾಮರಾಜನಗರ, ಜುಲೈ 03 : ಕಳೆದೊಂದು ಶತಮಾನಗಳಿಂದ ಗುಂಡ್ಲುಪೇಟೆ ಮತ್ತು ಚಾಮರಾಜನಗರದ ನಡುವೆ ಸಂಪರ್ಕ ಕಲ್ಪಿಸುತ್ತಿರುವ ಸೇತುವೆಯೊಂದು ಇದೀಗ ಅಪಾಯದ ಸ್ಥಿತಿಗೆ ತಲುಪಿದೆ.
ಸ್ವಾತಂತ್ರ್ಯಪೂರ್ವದಲ್ಲಿಯೇ ಸಂಚಾರ ವ್ಯವಸ್ಥೆಗಾಗಿ ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ತೆರಳುವ ರಾಜ್ಯ ಹೆದ್ದಾರಿಯ ದೊಡ್ಡತುಪ್ಪೂರು ಶಿಂಡನಪುರ ನಡುವೆ ಸಿಗುವ ಹಳ್ಳಕ್ಕೆ ಸೇತುವೆಯನ್ನು ನಿರ್ಮಿಸಲಾಗಿತ್ತು.

ಈ ಸೇತುವೆ ನಿರ್ಮಾಣವಾದ ಬಳಿಕ ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳು, ಭಾರೀ ವಾಹನಗಳು ತೆರಳುತ್ತಿದ್ದು, ಸಾಗಾಣಿಕೆ ಮತ್ತು ಸಂಚಾರಕ್ಕೆ ಮುಖ್ಯ ಹೆದ್ದಾರಿಯಾಗಿ ಮಾರ್ಪಟ್ಟಿದೆ. ಆದರೆ, ಇದೀಗ ಸೇತುವ ಶಿಥಿಲಾವಸ್ಥೆಗೆ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಕಳೆದೊಂದು ಶತಮಾನದಿಂದಲೂ ಈ ಸೇತುವೆ ಮೇಲೆ ವಾಹನಗಳು ಸಾಗುತ್ತಿದ್ದರೂ ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ. ಅಲ್ಲದೆ ಇತ್ತೀಚೆಗಿನ ದಿನಗಳಲ್ಲಿ ಸೇತುವೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ಕೂ ಮುಂದಾಗುತ್ತಿಲ್ಲ.
ಇತ್ತೀಚೆಗೆ ಇದೇ ಸೇತುವೆ ಮೇಲೆ ಹೆಚ್ಚಿನ ವಾಹನಗಳು ಸಂಚರಿಸುತ್ತಿವೆ ಹೀಗಾಗಿ ಸೇತುವೆ ಮೇಲೆ ಹೆಚ್ಚಿನ ಭಾರ ಬೀಳುತ್ತಿದೆ. ಪರಿಣಾಮ ಸೇತುವೆಯ ಗಾರೆ ಕಿತ್ತು ಇಟ್ಟಿಗೆ ಬೀಳುತ್ತಿದೆ.

ಸೇತುವೆ ಅರ್ಧಭಾಗವನ್ನು ಕಳೆದ ವರ್ಷವೇ ದುರಸ್ತಿಗೊಳಿಸಿದ್ದರೂ ರಸ್ತೆಗೆ ಡಾಂಬರು ಹಾಕದ ಪರಿಣಾಮವಾಗಿ ಸೇತುವೆಯು ಶಿಥಿಲವಾಗಿರುವ ಭಾಗದಲ್ಲಿಯೇ ಎಲ್ಲ ವಾಹನಗಳು ಸಂಚರಿಸುತ್ತಿವೆ. ಇದರಿಂದ ಸೇತುವೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಈ ಬಗ್ಗೆ ಎಚ್ಚೆತ್ತುಕೊಂಡು ಸೇತುವೆ ದುರಸ್ತಿ ಅಥವಾ ನೂತನ ಸೇತುವೆಯ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ. ತಪ್ಪಿದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಇನ್ನು ಭಾರೀ ವಾಹನಗಳು ತೆರಳುವಾಗ ಭಯವಾಗುತ್ತದೆ. ಸ್ವಲ್ಪ ನಿಯಂತ್ರಣ ತಪ್ಪಿದರೂ ಅಪಾಯ ತಪ್ಪಿದಲ್ಲ ಎನ್ನುವ ಆತಂಕವನ್ನು ಶಿಂಡನಪುರ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

ಸೇತುವೆಯ ಕುರಿತಂತೆ ಮಾಹಿತಿ ನೀಡಿರುವ ಲೋಕೋಪಯೋಗಿ ಇಲಾಖೆಯ ಎಇಇ ಕೆ.ಎಸ್.ವಿಜಯಸಾರಥಿ ಅವರು, "ಸೇತುವೆ ಇರುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಿದ್ದು, ಈ ಯೋಜನೆಯಲ್ಲಿ ನೂತನ ಸೇತುವೆ ನಿರ್ಮಾಣ ಮಾಡುವುದಾಗಿ" ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ನೂತನ ಸೇತುವೆ ನಿರ್ಮಾಣವಾದರೆ ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು ನೆಮ್ಮದಿಯಾಗಿ ಸಂಚರಿಸಬಹುದೇನೋ ಕಾದು ನೋಡಬೇಕಾಗಿದೆ.












Click it and Unblock the Notifications