ಚಾಮರಾಜನಗರ ರೈಲ್ವೇ ಸಂಪರ್ಕ ಯೋಜನೆಗೆ ಭರ್ತಿ ನೂರು ವರ್ಷ
ಚಾಮರಾಜನಗರ, ಜುಲೈ 1: ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆ ಎಂದೇ ಖ್ಯಾತಿಯಾಗಿರುವ ಚಾಮರಾಜನಗರ ಜಿಲ್ಲೆಯ ರೈಲ್ವೇ ಸಂಪರ್ಕ ಯೋಜನೆಗೆ ಜುಲೈ 1ರಂದು ಶತಮಾನೋತ್ಸವದ ಸಂಭ್ರಮ.
ರಾಜ್ಯದ ದಕ್ಷಿಣದ ಗಡಿ ಜಿಲ್ಲಾ ಕೇಂದ್ರವಾದ ಚಾಮರಾಜನಗರವನ್ನು ಸಂಪರ್ಕಿಸುವ ರೈಲು ಮಾರ್ಗ ಯೋಜನೆಯನ್ನು ಇಂದಿಗೆ ಸರಿಯಾಗಿ 100 ವರ್ಷದ ಹಿಂದೆ (1921ರ ಜುಲೈ 1ರಂದು) ಹಾಕಿಕೊಳ್ಳಲಾಗಿತ್ತು. ನಂಜನಗೂಡಿನಿಂದ ಚಾಮರಾಜನಗರಕ್ಕೆ ರೈಲು ಮಾರ್ಗ ವಿಸ್ತರಣೆ ಯೋಜನೆ ಹಾಕಿಕೊಂಡ ಐದು ವರ್ಷದ ನಂತರ 1926ರ ಆಗಸ್ಟ್ 27ರಂದು ಮೊದಲ ಉಗಿಬಂಡಿ ನಗರಕ್ಕೆ ಬಂದು ಇತಿಹಾಸ ದಾಖಲಿಸಿದೆ.
ಜಿಲ್ಲೆಯ ರೈಲ್ವೇ ಇತಿಹಾಸವನ್ನು ಅತ್ಯಂತ ಚೆನ್ನಾಗಿ ಬಲ್ಲ ಹಿರಿಯ ನಾಗರಿಕ ಪಿ.ಸಿ. ಹುಚ್ಚೇಗೌಡ ಅವರು ಮಾತನಾಡಿ, "ಮೈಸೂರಿನಿಂದ ನಂಜನಗೂಡಿನವರೆಗೆ 1891ರ ಡಿ.1ರಂದು ಮೀಟರ್ ಗೇಜ್ ರೈಲು ಸಂಚಾರ ಆರಂಭವಾಯಿತು. ಮೈಸೂರಿನ ರಾಜಮನೆತನದವರಿಗೆ ನಂಜನಗೂಡಿಗೆ ಬರಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ, ಈ ಮಾರ್ಗ ನಿರ್ಮಾಣಕ್ಕಾಗಿ ರಾಜಮನೆತನದವರೇ ಹಣ ಹೂಡಿಕೆ ಮಾಡಿದ್ದರು,'' ಎಂದು ತಿಳಿಸಿದರು.

ಮಾರ್ಗ ನಿರ್ಮಾಣಕ್ಕೆ ಐದು ವರ್ಷ
"1920ರ ಸಮಯದಲ್ಲಿ ಕ್ಷಾಮ ಇತ್ತು. ಈ ಸಂದರ್ಭದಲ್ಲಿ ಜನರ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಂಜನಗೂಡಿನಿಂದ ಚಾಮರಾಜನಗರಕ್ಕೆ ರೈಲು ಮಾರ್ಗ ವಿಸ್ತರಣೆಗೆ ಯೋಜನೆ ರೂಪಿಸಲಾಗಿತ್ತು. 22 ಮೈಲಿ ಉದ್ದದ ಮಾರ್ಗ ನಿರ್ಮಾಣ ಯೋಜನೆಯನ್ನು 14 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಮಾರ್ಗ ನಿರ್ಮಾಣಕ್ಕೆ ಐದು ವರ್ಷ ಬೇಕಾಯಿತು,'' ಎಂದು 87 ವರ್ಷದ ಗೌಡ ತಿಳಿಸಿದರು.

ಮೈಸೂರು ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್
"1927ರ ಆಗಸ್ಟ್ 27ರಂದು ನಂಜನಗೂಡಿನಿಂದ ಮೊದಲ ರೈಲು ಚಾಮರಾಜನಗರಕ್ಕೆ ತಲುಪಿತು. ಅಂದಿನ ಮೈಸೂರು ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅದೇ ರೈಲಿನಲ್ಲಿ ನಗರಕ್ಕೆ ಬಂದಿದ್ದರು. ಚಾಮರಾಜನಗರದ ಮೂಲಕ ತಮಿಳುನಾಡಿನ ಸತ್ಯಮಂಗಲ, ಧಾರಾಪುರ, ಮಧುರೈ ಮೂಲಕ ಕೊಲಂಬೊವರೆಗೆ ರೈಲು ಮಾರ್ಗ ನಿರ್ಮಿಸುವ ಪ್ರಸ್ತಾಪ ಆಗಲೇ ಇತ್ತು. ಇದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಮಹಾರಾಜರು, 30 ವರ್ಷಗಳಾದರೂ ಅದು ಕಾರ್ಯರೂಪಕ್ಕೆ ಬಾರದೆ, ಚಾಮರಾಜನಗರದವರೆಗೆ ಆಯಿತು ಎಂದು ಬೇಸರ ವ್ಯಕ್ತಪಡಿಸಿದ್ದರು. ನಮ್ಮ ಮನೆಯಲ್ಲಿ ಕೆಲಸಕ್ಕೆ ಇದ್ದವರೊಬ್ಬರು ತಮ್ಮ ಮಗನೊಂದಿಗೆ ಮೊದಲ ದಿನ ರೈಲು ಸಂಚಾರ ಕಂಡಿದ್ದರು. ಆಗಾಗ ಅವರು ಇದನ್ನು ನನಗೆ ಹೇಳುತ್ತಿದ್ದರು,'' ಎಂದು ಹುಚ್ಚೇಗೌಡ ವಿವರಿಸಿದರು.

ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ
ಚಾಮರಾಜನಗರದ ಮೂಲಕ ತಮಿಳುನಾಡಿನ ಮೆಟ್ಟುಪಾಳ್ಯಂಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆಯು ದಶಕಗಳಿಂದಲೂ ಜಿಲ್ಲೆಯ ಜನತೆಯ ಬೇಡಿಕೆ ಆಗಿದೆ. ಆದರೆ ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಮೆಟ್ಟುಪಾಳ್ಯಂ ರೈಲ್ವೆ ಮಾರ್ಗ ಯೋಜನೆಗೆ ಸಮೀಕ್ಷೆ ನಡೆಸಿದ ತಂಡದಲ್ಲಿ ಹುಚ್ಚೇಗೌಡ ಕೂಡ ಪಾಲ್ಗೊಂಡಿದ್ದರು.
Recommended Video

ಕೊಡಗು ರೈಲ್ವೇ ಸಂಪರ್ಕ ಹೊಂದಿಲ್ಲದ ಜಿಲ್ಲೆ
"ಯೋಜನೆ ಅನುಷ್ಠಾನದ ಬಗ್ಗೆ ವಿಸ್ತೃತ ವರದಿಯನ್ನೂ ಸಲ್ಲಿಸಲಾಗಿತ್ತು. ಮೆಟ್ಟುಪಾಳ್ಯಂನಿಂದ ಕೊಯಮತ್ತೂರಿಗೆ ರೈಲು ಸಂಪರ್ಕ ಇದೆ. ನಗರದಿಂದ ಮೆಟ್ಟುಪಾಳ್ಯಂವರೆಗೆ ಸಂಪರ್ಕ ಕಲ್ಪಿಸಿದ್ದರೆ, ಜನರಿಗೆ ಅನುಕೂಲವಾಗುತ್ತಿತ್ತು. ಸರಕು ಸಾಗಣೆ ಲಾರಿ ಮಾಲೀಕರ ಲಾಬಿ ಯೋಜನೆಗೆ ಅಡ್ಡಗಾಲು ಹಾಕಿತು'' ಎಂದು ಹುಚ್ಚೇಗೌಡ ಆರೋಪಿಸುತ್ತಾರೆ.
ರಾಜ್ಯದಲ್ಲಿ ಇಂದಿಗೂ ರೈಲ್ವೇ ಸಂಪರ್ಕ ಹೊಂದಿಲ್ಲದ ಜಿಲ್ಲೆ ಎಂದರೆ ಕೊಡಗು ಜಿಲ್ಲೆ ಆಗಿದ್ದು, ಈಗ ಅಲ್ಲಿಗೂ ರೈಲ್ವೇ ಸಂಪರ್ಕ ಕಲ್ಪಿಸಲು ಸರ್ವೆ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಚಾಮರಾಜನಗರ ಮಾರ್ಗವಾಗಿ ಕೊಯಮತ್ತೂರಿಗೆ ಸಂಪರ್ಕ ಕಲ್ಪಿಸಿದರೆ ಕೊಡಗಿನ ಜನತೆಗೂ ಅನುಕೂಲವಿದೆ.












Click it and Unblock the Notifications