Cauvery dispute: ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಗಳು
ಚಾಮರಾಜನಗರ, ಸೆಪ್ಟೆಂಬರ್, 03: ರಾಜ್ಯದಲ್ಲಿ ಮಳೆಯಿಲ್ಲದೆ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲ್ಲಿದ್ದು, ಇದರಿಂದ ಜಲಾಶಯಗಳ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಇಂತಹ ಸಮಯದಲ್ಲೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದು, ಇದನ್ನು ಖಂಡಿಸಿ ರಾಜ್ಯಾದ್ಯಂತ ರೈತರು ಕಿಡಿಕಾರುತ್ತಲೇ ಇದ್ದಾರೆ. ಹಾಗೆಯೇ ಇಂದು ಕೂಡ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು ತಲೆ ಮೇಲೆ ಕಲ್ಲು ಹೊತ್ತು ಕಾವೇರಿ ನ್ಯಾಯ ಮಂಡಳಿ ವಿರುದ್ದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕನ್ನಡಿಗರ ತಲೆ ಮೇಲೆ ಚಪ್ಪಡಿ ಹಾಕಿವೆ ಎಂದು ಆರೋಪ ಮಾಡಿದರು.

ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಭುವನೇಶ್ವರಿ ವೃತ್ತದವರೆಗೂ ನಡೆಯಿತು. ಭುವನೇಶ್ವರಿ ವೃತ್ತದ ಬಳಿ ಜಮಾಯಿಷಿ ಕನ್ನಡಪರ ಸಂಘಟನೆಗಳ ಮುಖಂಡು ಶಾಸಕರು, ಸಂಸದರ ವಿರುದ್ದ ಘೋಷಣೆ ಕೂಗಿದರು. ಅಲ್ಲದೆ ಕೂಡಲೇ ಕಾವೇರಿ ನ್ಯಾಯಾಧಿಕರಣಕ್ಕೆ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ವಿರುದ್ಧ ಜೆಡಿಎಸ್ ಸಮರ
ಕಾವೇರಿ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದ ಜೆಡಿಎಸ್ ಶನಿವಾರ (ಸೆ.2)ದಿಂದ ಹೋರಾಟದ ಅಖಾಡಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದೆ. ನೂರಾರು ರೈತರನ್ನು ಜೊತೆಗೂಡಿಸಿಕೊಂಡು ಬೃಹತ್ ಪ್ರತಿಭಟನೆ ನಡೆಸುವುದರೊಂದಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ನಾಯಕರು ರಣಕಹಳೆ ಮೊಳಗಿಸಿದರು.
ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಸುರೇಶ್‌ಗೌಡ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿಬಂದಿತು.
ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರೆಲ್ಲರೂ ಒಟ್ಟಾಗಿ ಹೋರಾಟಕ್ಕಿಳಿದಿದ್ದರು. ಮೈಸೂರಿನಿಂದ ಶಾಸಕ ಜಿ.ಟಿ.ದೇವೇಗೌಡ ಕೂಡ ಆಗಮಿಸಿದ್ದರು. ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಜೆಡಿಎಸ್ ಬಾವುಟಗಳನ್ನು ಹಿಡಿದು ಕಾರ್ಯಕರ್ತರು ದೇವೇಗೌಡ, ಕುಮಾರಸ್ವಾಮಿ ಪರ ಜೈಕಾರ ಕೂಗಿದರು. "ನಮ್ಮ ನೀರು-ನಮ್ಮ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಮೇಕೆದಾಟು ಪಾದಯಾತ್ರೆ ನಡೆಸಿದ ಕಾಂಗ್ರೆಸ್ಸಿಗರಿಗೆ ಮರ್ಯಾದೆಯೇ ಇಲ್ಲ. ನಮ್ಮ ನೀರನ್ನೆಲ್ಲಾ ತಮಿಳುನಾಡಿಗೆ ಹರಿಸಿ ರೈತರು-ಜನರ ಹಿತ ಕಾಪಾಡದೆ ಮೌನ ವಹಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜಪ ಮಾಡುತ್ತಿರುವ ಇವರಿಗೆ ನೀರನ್ನು ಉಳಿಸಿಕೊಳ್ಳುವ ಆಲೋಚನೆಯೇ ಇಲ್ಲ" ಎಂದು ಜೆಡಿಎಸ್ ನಾಯಕರು ಟೀಕಿಸಿದರು.
ತಮಿಳುನಾಡು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ನೀರು ಬಿಡುಗಡೆ ಆದೇಶ ಹೊರಬೀಳುವವರೆಗೆ ನಿದ್ರಾವಸ್ಥೆಯಲ್ಲಿರುವ ಸರ್ಕಾರ, ಆನಂತರ ಪ್ರಾಧಿಕಾರ ಎಲ್ಲಿದೆ ಎಂದು ಹುಡುಕಾಡುತ್ತದೆ. ಪ್ರಾಧಿಕಾರ 15 ಸಾವಿರ ಕ್ಯುಸೆಕ್ ನೀರು ಹರಿಸುವ ಆದೇಶ ನೀಡಿದ ಕೂಡಲೇ ನಮ್ಮ ರೈತರ ಹಿತವನ್ನು ಕಡೆಗಣಿಸಿ ನೀರು ಹರಿಸಲು ರೆಡಿಯಾಗುತ್ತದೆ. ಇಂತಹ ಜನವಿರೋಧಿ, ರೈತವಿರೋಧಿ ಸರ್ಕಾರಕ್ಕೆ ಆಡಳಿತ ನಡೆಸುವ ಅರ್ಹತೆಯೂ ಇಲ್ಲ, ಯೋಗ್ಯತೆಯೂ ಇಲ್ಲ ಎಂದು ಕಿಡಿಕಾರಿದರು.
ಹವಾಮಾನ ಇಲಾಖೆ ಮುನ್ಸೂಚನೆ
ಹವಾಮಾನ ಇಲಾಖೆ ಈ ಬಾರಿ ಮಳೆ ವಾಡಿಕೆಗಿಂತ ಕಡಿಮೆಯಾಗಲಿದೆ. ಮಳೆ ಅಭಾವ ಸೃಷ್ಟಿಯಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದರೂ ತಮಿಳುನಾಡಿಗಿಂತ ಮೊದಲೇ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಿ ಮಳೆ ಕೊರತೆಯಾಗುವ ಸಾಧ್ಯತೆಗಳಿರುವುದರಿಂದ ನಿಗದಿತ ಪ್ರಮಾಣದಷ್ಟು ನೀರು ಬಿಡಲು ಸಾಧ್ಯವಿಲ್ಲ. ನಮ್ಮಲ್ಲೇ ಬೆಳೆಗಳು ಒಣಗುತ್ತಿವೆ. ನಮಗೂ ನೀರಿನ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡುವ ಮುಂಜಾಗ್ರತೆಯನ್ನೇ ವಹಿಸಲಿಲ್ಲ. ಇಂತಹವರು ಅಧಿಕಾರದಲ್ಲಿದ್ದೂ ಏನು ಪ್ರಯೋಜನ ಎಂದು ಜೆಡಿಎಸ್ ನಾಯಕರು ಪ್ರಶ್ನಿಸಿದರು.
ಈ ಕೂಡಲೇ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲುಗಡೆ ಮಾಡಬೇಕು. ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸುವ ಎದೆಗಾರಿಕೆ ಪ್ರದರ್ಶಿಸಿ. ನಾವು ನಿಮ್ಮ ಜೊತೆಗಿದ್ದೇವೆ. ಏನೇ ಸಂಕಷ್ಟ ಎದುರಾದರೂ ಒಟ್ಟಿಗೆ ಎದುರಿಸೋಣ. ತಕ್ಷಣವೇ ನೀರು ನಿಲ್ಲಿಸುವಂತೆ ಆಗ್ರಹಪಡಿಸಿದರು ಎಂದು ಜೆಡಿಎಸ್ ನಾಯಕರು ಒತ್ತಾಯಿಸಿದರು.
ಮಾಜಿ ಸಚಿವರಾದ ಜಿ.ಟಿ. ದೇವೇಗೌಡ, ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಶಾಸಕ ಎಚ್.ಟಿ. ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಾ. ಕೆ. ಅನ್ನದಾನಿ, ಕೆ. ಸುರೇಶ್‌ಗೌಡ, ಕೆ.ಟಿ. ಶ್ರೀಕಂಠೇಗೌಡ, ಜಾ.ದಳ ಜಿಲ್ಲಾಧ್ಯಕ್ಷ ಡಿ. ರಮೇಶ್, ಮಂಡ್ಯ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಉಪಾಧ್ಯಕ್ಷ ರಘುನಂದನ್, ಮುಖಂಡರಾದ ರವಿ, ತುಳಸೀಧರ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications