Cauvery dispute: ಚಾಮರಾಜನಗರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರಿಂದ ಉರುಳು ಸೇವೆ
ಚಾಮರಾಜನಗರ, ಸೆಪ್ಟೆಂಬರ್, 23: ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ಖಂಡಿಸಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಉರುಳುಸೇವೆ ನಡೆಸಿ ಆಕ್ರೋಶ ಹೊರಹಾಕಿದರು.
ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಚಾ.ರಂ.ಶ್ರೀನಿವಾಸಗೌಡ, ಶಾ.ಮುರುಳಿ ಹಾಗೂ ಇನ್ನಿತರರು ಅರೆ ಬೆತ್ತಲೆಯಾಗಿ ರಸ್ತೆಯಲ್ಲಿ ಉರುಳು ಸೇವೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಕಾವೇರಿ ನ್ಯಾಯಾಧೀಕರಣ ತಮಿಳುನಾಡಿನ ಪರವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ರಾಜ್ಯ ಸರ್ಕಾರ ರೈತರ ಹಿತವನ್ನು ಬಲಿ ಕೊಡುತ್ತಿದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸದೇ ರಾಜ್ಯದ ಜನರನ್ನು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದರು.
ಇನ್ನು, ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳು ಸೇವೆ ಮಾಡಿದ್ದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಮಂಡ್ಯ ಬಂದ್‌ಗೆ ಸಂಪೂರ್ಣ ಬೆಂಬಲ
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂಬ ಸುಪ್ರೀಂ ಕೋರ್ಟ್‌ನ ಆದೇಶದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದು, ವ್ಯಾಪಾರ ವಹಿವಾಟು ಸ್ಥಗಿತ ಗೊಂಡಿದೆ. ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳ ಬಾಗಿಲು ಮುಚ್ಚಿ ಬಂದ್ ಬೆಂಬಲಿಸಿದರು. ಬೆಳಗ್ಗೆ ತೆರೆದಿದ್ದ ಹೋಟೆಲ್‌ಗಳು ಬಂದ್ ಕಾವೇರುತ್ತಿದ್ದಂತೆ ಬಾಗಿಲು ಮುಚ್ಚಿದವು. ಚಲನಚಿತ್ರ ಮಂದಿರಗಳು ಬೆಳಗಿನ ಮತ್ತು ಮಧ್ಯಾಹ್ನದ ಚಿತ್ರ ಪ್ರದರ್ಶನವನ್ನು ರದ್ದು ಮಾಡಿದ್ದವು. ಸರ್ಕಾರಿ ಮತ್ತು ಖಾಸಗಿ ಬಸ್, ಟೆಂಪೋ ಸೇರಿ ಖಾಸಗಿ ವಾಹನ ಸಂಚಾರ ಸ್ಥಗಿತವಾಗಿತ್ತು.
ವಾಹನ ಸಂಚಾರ ಸ್ಥಗಿತವಾಗಿದ್ದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆಟೋ ಸಂಚಾರ ವಿರಳವಾಗಿತ್ತು, ಕೆಲವು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ತೆರೆದಿದ್ದ ಕಾಲೇಜುಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು. ಹೀಗೆ ಬಂದ್ ಹಿನ್ನೆಲೆಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಬೈಕ್ ಜಾಥಾ ಮೂಲಕ ಮಂಡ್ಯ ನಗರ ಸುತ್ತಿದ ಪ್ರತಿಭಟನಾಕಾರರು ಕೆಲವು ಪ್ರದೇಶಗಳಲ್ಲಿ ತೆರೆದಿದ್ದ ಅಂಗಡಿಗಳ ಬಾಗಿಲು ಮುಚ್ಚಿಸಿದರು. ಪ್ರಮುಖ ಪ್ರದೇಶವಾದ ಪೇಟೆ ಬೀದಿ, ಬೆಂಗಳೂರು -ಮೈಸೂರು ಹೆದ್ದಾರಿ, ವಿ.ವಿ ರಸ್ತೆ, ಗುತ್ತಲು ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಆರ್.ಪಿ ರಸ್ತೆ, ವಿನೋಬಾ ರಸ್ತೆ, ಕೆ.ಆರ್ ರಸ್ತೆ, ವಿವೇಕಾನಂದ ರಸ್ತೆಗಳಲ್ಲಿ ಬಂದ್ ವಾತಾವರಣ ಕಂಡುಬಂದಿತು.












Click it and Unblock the Notifications