ನಿಸರ್ಗ ಚೆಲುವಿನಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಬಂಡೀಪುರ!
ಚಾಮರಾಜನಗರ, ಜುಲೈ 03 : ಬಿರು ಬೇಸಿಗೆಯಿಂದ ಬಣ ಬಣ ಎನ್ನುತ್ತಿದ್ದ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಇದೀಗ ಕೊಂಚ ಮುಂಗಾರು ಮೆಳೆ ಆಗಮನದಿಂದ ನಿಸರ್ಗ ಚೆಲುವಿನಿಂದ ಪ್ರವಾಸಿಗರನ್ನು ಸೆಳೆಯತೊಡಗಿದೆ.
ಮಳೆ ಸುರಿದಿದ್ದರಿಂದ ಬಿಸಿಲಿನಿಂದ ಒಣಗಿ ನಿಸ್ತೇಜವಾಗಿದ್ದ ಪ್ರಕೃತಿಯಲ್ಲಿ ಹೊಸ ಪುಳಕ ಆರಂಭವಾಗಿದೆ. ಕಾಡ್ಗಿಚ್ಚಿಗೆ ಸಿಲುಕಿ ಉರಿದು ಹೋದ ಗಿಡ ಮರಗಳಿಗೆ ಮರು ಜೀವ ಬಂದಂತಾಗಿದೆ. ಹುಲ್ಲು, ಕುರುಚಲು ಕಾಡುಗಳು ಚಿಗುರುತ್ತಿವೆ. ಬತ್ತಿ ಹೋದ ಹೊಳೆ, ಕೆರೆಗಳಲ್ಲಿ ನೀರು ಕಾಣಿಸಿಕೊಂಡಿದೆ.

ಅರಣ್ಯಕ್ಕೊಂದು ಸುತ್ತು ಹೊಡೆದರೆ(ಸಫಾರಿ) ವನ್ಯಪ್ರಾಣಿಗಳು ಮತ್ತೆ ಮರಳಿದ್ದು ,ನೆಮ್ಮದಿಯಾಗಿ ಓಡಾಡಿಕೊಂಡಿರುವುದು ಕಾಣಸಿಗುತ್ತಿದೆ. ಛಂಗನೆ ನೆಗೆದು ಓಡುವ ಜಿಂಕೆಗಳು.. ಗಂಭೀರ ಹೆಜ್ಜೆಯಿಟ್ಟು ನಡೆಯುವ ಕಾಡಿನರಾಜ, ಹಿಂಡು ಹಿಂಡಾಗಿ ಸಾಗುವ ಕಾಡಾನೆಗಳು ಕಣ್ಣಿಗೆ ಬೀಳುತ್ತಿವೆ.
ಬೇಸಿಗೆಯಲ್ಲಿ ಸಫಾರಿಗೆ ತೆರಳಿದವರು ಅರಣ್ಯದಲ್ಲಿ ವನ್ಯಪ್ರಾಣಿಗಳನ್ನು ಕಾಣದೆ ನಿರಾಶರಾಗಿ ಹಿಂತಿರುಗುತ್ತಿದ್ದರು. ಆದರೆ, ಇದೀಗ ವಲಸೆಹೋದ ಪ್ರಾಣಿಗಳು ಹಿಂತಿರುಗಿರುವುದರಿಂದ ಅವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.

ಕೇರಳದ ವೈನಾಡು ಪ್ರದೇಶದಲ್ಲಿ ಮುಂಗಾರು ಮಳೆ ಆರಂಭವಾಗಿರುವುದರಿಂದ ಹೊಳೆಯಲ್ಲಿ ನೀರು ಹರಿದು ಬರುತ್ತಿದ್ದು, ಸದ್ಯ ಪ್ರಾಣಿಗಳು ಖುಷಿಯಾಗಿವೆ. ಸಸ್ಯಹಾರಿ ಪ್ರಾಣಿಗಳು ಬೇಸಿಗೆಯಲ್ಲಿ ಹಸಿರು ಮೇವು ಇಲ್ಲದೆ ಕಂಗಾಲಾಗಿ ಕುಗ್ಗಿ ಹೋಗಿದ್ದವು. ಈಗ ಹಸಿರು ಮೇವು ಯಥೇಚ್ಛವಾಗಿ ಸಿಗುತ್ತಿರುವುದರಿಂದ ದಷ್ಠಪುಷ್ಠವಾಗುತ್ತಿವೆ.
ಈಗಾಗಲೇ ಬಂಡೀಪುರದಲ್ಲಿ ಕ್ಯಾಮರಾಗೆ ವನ್ಯಪ್ರಾಣಿಗಳು ಸಿಗುತ್ತಿವೆ ಎಂಬ ಸುದ್ದಿ ಹರಡಿರುವುದರಿಂದ ಪ್ರಾಣಿಪ್ರಿಯರು ಅತ್ತ ತೆರಳಲು ಮುಂದಾಗುತ್ತಿದ್ದಾರೆ. ವೀಕೆಂಡ್ ದಿನಗಳಲ್ಲಿ ಇತ್ತ ಸುಳಿಯುವವರ ಸಂಖ್ಯೆಯೂ ಹೆಚ್ಚಾಗಿದೆ.

ಪ್ರಿನ್ಸ್ ಹುಲಿ ಸಾವಿನ ನಂತರ ಪ್ರವಾಸಿಗರ ಸೆಳೆಯುವವರು ಯಾರು ಎಂಬ ಯೋಚನೆಯೂ ಇತ್ತು. ಆದರೆ, ಇದೀಗ ಮಾದೇಶ ಎಂಬ ಹುಲಿ ಅರಣ್ಯದಲ್ಲಿ ಅಡ್ಡಾಡುತ್ತಾ ವೀಕ್ಷಕರ ಗಮನಸೆಳೆಯುತ್ತಿದೆ.
ಒಟ್ಟಾರೆ ಹೇಳಬೇಕೆಂದರೆ ಬಂಡೀಪುರಕ್ಕೆ ಮತ್ತೆ ಜೀವ ಕಳೆ ಬಂದಿದೆ. ಹೀಗಾಗಿ ಪ್ರವಾಸಿಗರು ಅತ್ತ ಹೆಜ್ಜೆ ಹಾಕುತ್ತಿರುವುದು ಕಾಣಿಸತೊಡಗಿದೆ.












Click it and Unblock the Notifications