ಬಂಡೀಪುರದ ಪ್ರಿನ್ಸ್ ಹುಲಿ ಇನ್ನು ನೆನಪು ಮಾತ್ರ!
ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರವಾಸಿಗರ ಪಾಲಿನ ಪ್ರಮುಖ ಆಕರ್ಷಣೆಯಾಗಿದ್ದ ಪ್ರಿನ್ಸ್ ಹುಲಿ ಈಚೆಗೆ ಸಾವನ್ನಪ್ಪಿದೆ.
ಚಾಮರಾಜನಗರ, ಏಪ್ರಿಲ್ 5: ಬಂಡೀಪುರ ಅಭಯಾರಣ್ಯದಲ್ಲಿ ಪ್ರವಾಸಿಗರ ಮನ ಸೆಳೆಯುತ್ತಿದ್ದ ಬ್ರ್ಯಾಂಡ್ ಅಂಬಾಸಡರ್ (ರಾಯಭಾರಿ) ಪ್ರಿನ್ಸ್ ಹುಲಿ ಸಾವನ್ನಪ್ಪಿರುವುದು ಪ್ರವಾಸಿಗರಿಗೆ ಬೇಸರ ತಂದಿದೆ.
ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಬೀಟ್ ಬಳಿ ಪ್ರಿನ್ಸ್ ಕಳೇಬರ ದೊರೆತಿದೆ. ಪ್ರಿನ್ಸ್ ಬಂಡೀಪುರ ಅರಣ್ಯದಲ್ಲಿ ಓಡಾಡುತ್ತಾ ಬರುವ ಪ್ರವಾಸಿಗರ ಗಮನಸೆಳೆಯುತ್ತಿತ್ತು. ಕಳೆದೊಂದು ದಶಕದಿಂದ ಬಂಡೀಪುರ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆದಿತ್ತು. ಇದರಿಂದ ಅರಣ್ಯ ಇಲಾಖೆಗೆ ಸಫಾರಿ ಮೂಲಕ ಸುಮಾರು 50 ಕೋಟಿ ಆದಾಯ ಬಂದಿದೆ ಎಂದು ಹೇಳಲಾಗುತ್ತಿದೆ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]

ಬಂಡೀಪುರ ಸಫಾರಿಗೆ ಪ್ರಿನ್ಸ್ ಹುಲಿ ನೋಡಲೆಂದೇ ಪ್ರವಾಸಿಗರು ಬರುತ್ತಿದ್ದರು. ಅಷ್ಟೇ ಅಲ್ಲ, ಅದು ಕಾಣದಿದ್ದಾಗ ನಿರಾಸೆಯಿಂದ ಹಿಂತಿರುಗುತ್ತಿದ್ದರು. ಸಫಾರಿಗೆ ತೆರಳುತ್ತಿದ್ದ ಪ್ರವಾಸಿಗರನ್ನು ನೋಡಿ, ಅವರ ಫೋಟೋಗಳಿಗೆ ವಿವಿಧ ಪೋಸ್ ಗಳನ್ನು ನೀಡುತ್ತಿತ್ತು. ಪ್ರವಾಸಿಗರ ಜತೆ ಅವಿನಾಭಾವ ಸಂಬಂಧ ಹೊಂದಿತ್ತಲ್ಲದೆ, ಎಲ್ಲರ ಗಮನ ಸೆಳೆದು ಸಫಾರಿಗೆ ತೆರಳುವವರಿಗೆ ಹೊಸ ಅನುಭವ ನೀಡುತ್ತಿತ್ತು.
ಬಂಡೀಪುರ ಅರಣ್ಯದಲ್ಲಿ ಹೆಚ್ಚಿನ ಪ್ರದೇಶದಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿದ್ದ ಈ ಹುಲಿ ಏಳೆಂಟು ಅಡಿ ಉದ್ದ ಮತ್ತು ಭಾರೀ ಗಾತ್ರ ಹೊಂದಿತ್ತು. ಇತ್ತೀಚೆಗೆ ಅದು ಸ್ವಲ್ಪ ಕುಗ್ಗಿದಂತೆ ಕಂಡು ಬರುತ್ತಿತ್ತು. ಇದರೊಂದಿಗೆ ಇತರೆ ಹುಲಿಗಳು ಕಾದಾಟ ನಡೆಸುತ್ತಿದ್ದವು. ಅಲ್ಲದೆ ಅದರ ಸ್ಥಾನವನ್ನು ಆಕ್ರಮಿಸುವ ಮಟ್ಟಿಗೆ ಬೆಳೆದಿದ್ದವು. ಕೆಲ ಸಮಯಗಳ ಹಿಂದೆ ಕಾದಾಟದಲ್ಲಿ ಬಲ ಕಾಲಿಗೆ ಪೆಟ್ಟಾಗಿತ್ತಲ್ಲದೆ, ಎರಡು ಹಲ್ಲು ಕಳೆದುಕೊಂಡಿತ್ತು. ಇದೀಗ ಪ್ರಿನ್ಸ್ ಸಾವನ್ನಪ್ಪಿರುವುದು ಅರಣ್ಯ ಇಲಾಖೆ ಮತ್ತು ಪ್ರವಾಸಿಗರಿಗೆ ಬೇಸರ ತಂದಿದೆ.












Click it and Unblock the Notifications