ನೂತನ ಗ್ರಾಮ ಪಂಚಾಯತಿ ಸದಸ್ಯೆಯ ಪತಿ ಆತ್ಮಹತ್ಯೆ
ಚಾಮರಾಜನಗರ, ಡಿಸೆಂಬರ್ 16: ರಾಜ್ಯದೆಲ್ಲೆಡೆ ಗ್ರಾಮ ಪಂಚಾಯತಿ ಚುನಾವಣೆಯ ಪ್ರಚಾರದ ಕಾವು ಏರುತ್ತಿದೆ. ಆದರೆ ಗ್ರಾ.ಪಂ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಮಹಿಳೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಕೂಡ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡರಾಯಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವವರನ್ನು ನಿಂಗರಾಜು (27) ಎಂದು ಗುರುತಿಸಲಾಗಿದ್ದು, ನಿಂಗರಾಜುವಿನ ಪತ್ನಿ ಗಗನಾ ಎಂಬುವವರು ಎರಡು ದಿನಗಳ ಹಿಂದೆಯಷ್ಟೇ ಗ್ರಾಮದ ಎರಡನೇ ವಾರ್ಡಿನಿಂದ ಕೂಡ್ಲೂರು ಗ್ರಾಮ ಪಂಚಾಯತ್‌ಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ಆದರೆ ಪತಿ ನಿಂಗರಾಜು ಮಂಗಳವಾರ ರಾತ್ರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಅವಿರೋಧ ಆಯ್ಕೆಯಿಂದ ಸಂತಸದಿಂದ ಇರಬೇಕಾಗಿದ್ದ ಪತಿಯೇ ದುಡುಕಿನ ನಿರ್ಧಾರ ಕೈಗೊಂಡು ಜೀವವನ್ನೆ ಕೊನೆಗಾಣಿಸಿಕೊಂಡಿರುವುದು ಇಡೀ ಕುಟುಂಬವನ್ನು ದುಃಖದ ಮಡಿಲಿಗೆ ನೂಕಿದೆ.

ನಿಂಗರಾಜು ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತರ ಪತ್ನಿ ಗಗನಾ ನೀಡಿರುವ ದೂರಿನ ಮೇರೆಗೆ ಚಾಮರಾಜನಗರ ಪೂರ್ವ ಠಾಣೆ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಸ್ಥಳ ಮಹಜರು ಮಾಡಿದ್ದಾರೆ.












Click it and Unblock the Notifications