ಬಂಡೀಪುರದ ಬೆಂಕಿ ನಂದಿಸಲು ಬಂತು 2 ಸೇನಾ ಹೆಲಿಕಾಪ್ಟರ್
ಚಾಮರಾಜನಗರ, ಫೆಬ್ರವರಿ 25: ಬಂಡೀಪುರದ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಂಭವಿಸಿದ ಭಾರೀ ಕಾಡ್ಗಿಚ್ಚಿಗೆ ಸಾವಿರಾರು ಹೆಕ್ಟೇರ್ ಅರಣ್ಯ ನಾಶವಾಗಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸೇನಾ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ.
ಎಚ್ ಡಿ ಕೋಟೆಯ ಬೀರವಾಳಿಯ ನುಗು ಜಲಾಶಯದಿಂದ ನೀರು ಬಳಕೆ ಮಾಡಿಕೊಂಡು ಬೆಂಕಿಯ ಜ್ವಾಲೆಯನ್ನು ತಹಬದಿಗೆ ತರಲು 4 ಸೇನಾ ಹೆಲಿಕಾಪ್ಟರ್ ಇದ್ದು, ಸದ್ಯ 2 ಹೆಲಿಕಾಪ್ಟರ್ ಗಳು ಕಾರ್ಯ ನಿರ್ವಹಿಸುತ್ತಿವೆ.
ಜಲಾಶಯದ ಮೂಲಕ ಹೆಲಿಕಾಪ್ಟರ್ ನಲ್ಲಿ ನೀರು ತಂದು ಹೊತ್ತಿ ಉರಿಯುತ್ತಿರುವ ಜಾಗಕ್ಕೆ ಸಿಂಪಡಿಸುವ ಮೂಲಕ ಅಗ್ನಿಯನ್ನು ನಿಯಂತ್ರಣಕ್ಕೆ ತರಲು ಇದು ಅನುಕೂಲಕರವಾಗಲಿದೆ. ರೆಕ್ಕಿ ತಂತ್ರಜ್ಞಾನವನ್ನು ಬಳಸಿ ಹೆಲಿಕಾಪ್ಟರ್ ಗಳನ್ನು ನುಗು ಜಲಾಶಯದಿಂದ ನೀರನ್ನು ಲಿಫ್ಟ್ ಮಾಡಿ ಬೆಂಕಿ ಹೊತ್ತಿಕೊಂಡಿರುವ ಅರಣ್ಯ ಪ್ರದೇಶಗಳಲ್ಲಿ ನೀರನ್ನು ಸಿಂಪಡಿಸುವ ಕೆಲಸ ಇದಾಗಿದೆ.
ಇತ್ತ ಬೆಂಕಿ ನಂದಿಸುವವರೆಗೆ ಅರಣ್ಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ

ಜಲಾಶಯದಿಂದ ನೀರು ತುಂಬಿಸಿಕೊಳ್ಳುತ್ತಿರುವ ಹೆಲಿಕಾಪ್ಟರ್ಗಳು ಕಾಡ್ಗಿಚ್ಚು ಉಂಟಾಗಿರುವ ಪ್ರದೇಶಕ್ಕೆ ನುಗ್ಗುತ್ತಿವೆ. ಸದ್ಯ ಬೆರಂಬಾಡಿಯ ಕರಡಿ ಕಲ್ಲು ಗುಡ್ಡದಲ್ಲಿ ಬೆಂಕಿ ನಂದಿಸುತ್ತಿವೆ. ಇದರಿಂದ ಕಾಡ್ಗಿಚ್ಚಿನ ಬೆಂಕಿಯನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಕೆಲ ಮಟ್ಟಿಗೆ ತಹಬದಿಗೆ ತರಬಹುದಾಗಿದೆ.
ಇನ್ನು ಬೆಂಕಿ ಜ್ವಾಲೆಯ ಕುರಿತು ಮಾಹಿತಿ ನೀಡಿದ ಮುಖ್ಯ ಅರಣ್ಯಾಧಿಕಾರಿ ಪುನಾಟಿ ಶ್ರೀಧರ್, ನಮ್ಮ ಮೊದಲ ಆದ್ಯತೆ ಬೆಂಕಿ ನಂದಿಸುವುದು ಹಾಗೇ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಿಬ್ಬಂದಿ ಬೇಕಾದ ಅಗ್ನಿಶಾಮಕ ವಸ್ತುಗಳನ್ನ ಬಳಸಿ ಬೆಂಕಿ ನಂದಿಸುತ್ತಿದ್ದಾರೆ.
ಇನ್ನು ಎರಡು-ಮೂರು ದಿನಗಳಿಂದ ಸಫಾರಿ ನಿಲ್ಲಿಸಿದ್ದೇವೆ. ಬೆಂಕಿ ನಂದಿಸಲು ಸಫಾರಿ ವಾಹನಗಳು ನಮ್ಮ ಸಿಬ್ಬಂದಿಗೆ ಬೇಕಾಗಿರುವ ಹಿನ್ನೆಲೆಯಲ್ಲಿ ಸಫಾರಿ ನಿಲ್ಲಿಸಿದ್ದೇವೆ. ಸಫಾರಿ ಅರಣ್ಯ ಭಾಗದಲ್ಲಿ ಯಾವುದೇ ಬೆಂಕಿ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications