Byadgi Elections: ಕಾಂಗ್ರೆಸ್ ಅಭ್ಯರ್ಥಿಗೆ ಪೈಪೋಟಿ ನೀಡುವರಾರು?
ಬ್ಯಾಡಗಿ, ಮಾರ್ಚ್ 25: ಹಾವೇರಿ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ ಬ್ಯಾಡಗಿ. ಹೆಸರೇ ತಿಳಿಸುವಂತೆ ಬ್ಯಾಡಗಿ ಮೆಣಸಿನಕಾಯಿಯನ್ನು ಹೆಚ್ಚಾಗಿ ಬೆಳೆಯುವ ಪ್ರದೇಶ ಇದಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ ರಾಜಕೀಯ ಚಟುವಟಿಕೆ ಇಲ್ಲಿ ಜೋರಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ರಾಜಕೀಯ ಚಿತ್ರಣ ಇಲ್ಲಿದೆ.
ಇಲ್ಲಿ ಗಾಢ ಕೆಂಪು ಬಣ್ಣದ ಮೆಣಸಿನಕಾಯಿ ಬೆಳೆಯುತ್ತಾರೆ. ಹಾಗೆಯೇ ಒಳ್ಳೆಯ ರುಚಿಯೂ ಕೂಡ ಇದೆ. ಬ್ಯಾಡಗಿ ಮೆಣಸಿನಕಾಯಿ ಎಂದರೆ ಪ್ರಪಂಚದಲ್ಲಿ ಎರಡನೇ ಸ್ಥಾನ ಪಡೆದಿದೆ. ಹಾಗೆಯೇ ಸುತ್ತಮುತ್ತ ಹತ್ತಾರು ಹಳ್ಳಿಗಳ ಸಾವಿರಾರು ಜನರಿಗೆ ಜೀವನ ನಡೆಸಲು ಕೆಲಸ ನೀಡಿ ಜನರ ಜೀವನಾಡಿಯಾಗಿದೆ. ಬ್ಯಾಡಗಿ ಜಿಲ್ಲೆಯಲ್ಲಿ ಅತಿಹೆಚ್ಚು ಮೆಣಸಿನಕಾಯಿಯನ್ನು ಬೆಳೆಯುತ್ತಾರೆ.

ಇಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆ ವಿಜ್ರುಂಭಣೆಯಿಂದ ಜರುಗುತ್ತದೆ. ಹಾಗೂ ಶ್ರೀ ದಾನಮ್ಮದೇವಿ ಜಾತ್ರೆಯೂ ವಿಜ್ರೃಂಭಣೆಯಿಂದ ಜರುಗುತ್ತದೆ.ಇಲ್ಲಿಗೆ ಸಮೀಪದಲ್ಲಿ ಪ್ರಸಿದ್ಧ ಕ್ಷೇತ್ರ ಕಾಗಿನೆಲೆ ಇದೆ. ಬೆಂಗಳೂರಿನಿಂದ ಹಾಗೂ ಮೈಸೂರಿನಿಂದ ರೈಲು ವ್ಯವಸ್ಥೆ ಇದೆ, ಬೆಂಗಳೂರು ರೈಲು ನಿಲ್ದಾಣದಿಂದ ರಾತ್ರಿ 10 ಕ್ಕೆ ಮೈಸೂರಿನಿಂದ ರಾತ್ರಿ 10ಕ್ಕೆ ಪ್ಯಾಸೆಂಜರ್ ರೈಲುಗಳಿವೆ. ರಾಣೇಬೆನ್ನೂರ ವರೆಗೆ ಬೇರೆ ರೈಲುಗಳಿಗೆ ಬಂದು ಬಸ್ ಮೂಲಕ ಬ್ಯಾಡಗಿಗೆ ತಲುಪಬಹುದು. ಹಾಗೆಯೇ ಹುಬ್ಬಳ್ಳಿಯಿಂದಲೂ ರೈಲು ವ್ಯವಸ್ಥೆ ಇದೆ. ರಾಜ್ಯದ ಪ್ರಮುಖ ನಗರಗಳಿಂದ ಬಸ್ ವ್ಯವಸ್ಥೆ ಇದೆ, ಬೆಂಗಳೂರು & ಹುಬ್ಬಳ್ಳಿ ಕಡೆಯಿಂದ ಬರುವವರು ಮೋಟೇಬೆನ್ನೂರು ಎಂಬ ಊರಿಗೆ ಬಂದಿಳಿದು ಅಲ್ಲಿಂದ ಬಸ್,ಆಟೋ ಮೂಲಕ ತಲುಪಬಹುದು
ಸದ್ಯ ಬಿಜೆಪಿ ಭದ್ರಕೋಟೆಯಾಗಿರುವ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ ಶಾಸಕರಾಗಿದ್ದಾರೆ. ಬ್ಯಾಡಗಿ ವಿಧಾನಸಭಾ ಕ್ಷೇತ್ರ ರಚನೆಯಾಗಿದ್ದು 1962ರಲ್ಲಿ ಮೊದಲ ಮೂರು ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರವಾಗಿತ್ತು. ಬಳಿಕ 1978ರಿಂದ 2004ರವರೆಗೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಯಿತು. ಬಳಿಕ 2008 ಮತ್ತು 2013ರಲ್ಲಿ ಸಾಮಾನ್ಯವರ್ಗಕ್ಕೆ ಮೀಸಲಾದ ಕ್ಷೇತ್ರವಾಯ್ತು. ಹಾವೇರಿ-ಬ್ಯಾಡಗಿ-ರಾಣೆಬೆನ್ನೂರು ತಾಲೂಕುಗಳ ಆಯ್ದ ಹಳ್ಳಿಗಳನ್ನು ಸೇರಿಸಿ ಬ್ಯಾಡಗಿ ಕ್ಷೇತ್ರ ರಚಿಸಲಾಗಿದೆ.

ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಮೂಲಕ ಮತದಾರರ ಮನ ಗೆದ್ದಿದ್ದ ಮಾಜಿ ಶಾಸಕ ಬಸವರಾಜ ಶಿವಣ್ಣನವರಿಗೆ 2018ರಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ಹಿರಿಯ ಮುಖಂಡ ಹಾಗೂ ಸಚಿವ ಎಚ್.ಕೆ. ಪಾಟೀಲ ಅವರ ಪರಮಾಪ್ತ ಎಸ್.ಆರ್. ಪಾಟೀಲ ತಮಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದು, ಕಳೆದ ಬಾರಿ ಸ್ಪರ್ಧಿಸಿದ್ದರು. ಕ್ಷೇತ್ರಕ್ಕೆ ಹೊಸ ಮುಖ ಎಂಬ ಕಾರಣದಿಂದಲೂ ಕಾಂಗ್ರೆಸ್ ಅಭ್ಯರ್ಥಿ ಸೋತು, ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಗೆಲುವು ಸಾಧಿಸಿದ್ದರು.
ಈ ಬಾರಿ ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮತ್ತೊಮ್ಮೆ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಅವರೊಂದಿಗೆ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಬಸವರಾಜ ಎನ್ ಶಿವಣ್ಣನವರ್‌ಗೆ ಟಿಕೆಟ್ ನೀಡಲಾಗಿದೆ. ಈಗ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಏರ್ಪಡಲಿದೆ. ಕಾಂಗ್ರೆಸ್‌ನಿಂದ ಕುರುಬರ ಕೋಮಿನ ಮಾಜಿ ಶಾಸಕ ಬಸವರಾಜ್ ಶಿವಣ್ಣವರ್ ಹಾಗೂ ಲಿಂಗಾಯತ ಸಮುದಾಯದ ಎಸ್.ಆರ್. ಪಾಟೀಲ್ ಮಧ್ಯೆ ಹಣಾಹಣಿ ನಡೆಯುತ್ತಿತ್ತು. ಕೊನೆಗೆ ಬಸವರಾಜ ಅವರಿಗೆ ಟಿಕೆಟ್ ಸಿಕ್ಕಿದೆ.
Byadgi Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ವಿರೂಪಾಕ್ಷಪ್ಪ ಬಳ್ಳಾರಿ(ಬಿಜೆಪಿ) | 91,721 | ಎಸ್ ಆರ್ ಪಾಟೀಲ- (ಕಾಂಗ್ರೆಸ್) | 70,450 |
| 2013 | ಬಸವರಾಜ್ ನೀಲಪ್ಪ ಶಿವಣ್ಣವರ್(ಕಾಂಗ್ರೆಸ್) | 57,707 | ಶಿವರಾಜ್ ಸಜ್ಜನರ(ಬಿಜೆಪಿ) | 44,348 |
| 2008 | ಪಾಟೀಲ್ ಸುರೇಶಗೌಡರ ಬಸಲಿಂಗಗೌಡರ(ಬಿಜೆಪಿ) | 59,642 | ಬಸವರಾಜ್ ನೀಲಪ್ಪ ಶಿವಣ್ಣವರ್(ಕಾಂಗ್ರೆಸ್) | 48,238 |
ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಕುರುಬ ಜನಾಂಗದ ಪ್ರಾಬಲ್ಯ ಇದೆ. ಬ್ಯಾಡಗಿ ವಿದಾನಸಭಾ ಕ್ಷೇತ್ರಕ್ಕೆ ಹಾವೇರಿ ತಾಲೂಕಿನ ಕೆಲವು ಗ್ರಾಮಗಳು ಹಾಗೂ ರಾಣೆಬೆನ್ನೂರು ತಾಲೂಕಿನ ಕೆಲ ಗ್ರಾಮಗಳು ಸೇರಿಕೊಂಡಿದ್ದು, ಈ ಭಾಗದಲ್ಲಿ ಕುರುಬರ ಮತಗಳೇ ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕವಾಗಬಹುದು. ಸದ್ಯ ಒಟ್ಟೂ 2,05,773 ಮತದಾರರಿದ್ದಾರೆ. ಈ ಪೈಕಿ ಲಿಂಗಾಯತರು 60,000, ಕುರುಬರು 50,000, ದಲಿತರು 35,000 ಹಾಗೂ ಗಂಗಾ ಮತಸ್ಥರು 12,000 ಮತದಾರರಿದ್ದಾರೆ.












Click it and Unblock the Notifications