ಚಿನ್ನ, ಬೆಳ್ಳಿ ಆಭರಣವನ್ನು ಗುಲಾಬಿ ಪೇಪರ್‌ನಲ್ಲಿಯೇ ಸುತ್ತಿ ಕೊಡುತ್ತಿದ್ದದ್ದು ಯಾಕೆ ? ಏನಾಗಿತ್ತು ವ್ಯಾಪಾರಿಗಳ ಉದ್ದೇಶ
ಸಾಂಪ್ರದಾಯಿಕ ಆಭರಣ ಅಂಗಡಿಯಿಂದ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿ ಮಾಡಿದರೆ ಅಲ್ಲಿ ಆಭರಣವನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತಿ ಕೊಡುವುದನ್ನು ನೀವು ನೋಡಿರಬಹುದು. ಆಧುನಿಕ ಶೋ ರೂಂಗಳು ಈಗ ಬ್ರಾಂಡೆಡ್ ವೆಲ್ವೆಟ್ ಕೇಸ್‌ಗಳು ಮತ್ತು ಡಿಸೈನರ್ ಪ್ಯಾಕೇಜಿಂಗ್‌ನಲ್ಲಿ ಆಭರಣಗಳನ್ನು ಕೊಡ್ತಾರೆ. ಆದ್ರೆ, ಹಿಂದೆ ಈ ಗುಲಾಬಿ ಬಣ್ಣದ ಪೇಪರ್‌ನಲ್ಲಿ ಬಂಗಾರ ಅಥವಾ ಬೆಳ್ಳಿಯನ್ನು ಸುತ್ತಿ ಕೊಡುವುದು ಸಾಮಾನ್ಯವಾಗಿತ್ತು. ಈಗ ಇಲ್ಲಿರುವ ಪ್ರಶ್ನೆ ಅಂದ್ರೆ ಯಾಕೆ ಒಡವೆಗಳನ್ನು ಗುಲಾಬಿ ಬಣ್ಣದ ಪೇಪರ್‌ನಲ್ಲಿಯೇ ಸುತ್ತಿ ಕೊಡ್ತಾ ಇದ್ರು ಅನ್ನೋದು.
ಆಭರಣ ವ್ಯಾಪಾರಿಗಳ ಪ್ರಕಾರ, ಈ ಪದ್ಧತಿ ಕೇವಲ ಸೌಂದರ್ಯ ಅಥವಾ ಭಾವನಾತ್ಮಕವಾಗಿರಲಿಲ್ಲ, ಬದಲಾಗಿ ಸಂರಕ್ಷಣೆಯಲ್ಲಿ ಬೇರೂರಿರುವ ಪ್ರಾಯೋಗಿಕ ಉದ್ದೇಶವನ್ನು ಹೊಂದಿತ್ತು.

ದೇಶಾದ್ಯಂತ ಹಬ್ಬಿದ್ದ ಸಂಪ್ರದಾಯ
ಐಷಾರಾಮಿ ಪ್ಯಾಕೇಜಿಂಗ್ ಮತ್ತು ಕಸ್ಟಮೈಸ್ ಮಾಡಿದ ಬಾಕ್ಸ್‌ಗಳು ಬರುವ ಮೊದಲು, ದೇಶಾದ್ಯಂತ ಆಭರಣ ವ್ಯಾಪಾರಿಗಳು ಒಡವೆಗಳನ್ನು ಸುತ್ತಿ ಕೊಡುವುದಕ್ಕೆ ಗುಲಾಬಿ ಬಣ್ಣದ ಪೇಪರ್ ಅನ್ನೇ ಬಳಸ್ತಾ ಇದ್ರು. ಬೆಲೆಬಾಳುವ ಆಭರಣಗಳನ್ನು ಬೇರೆ ವಸ್ತುಗಳಿಂದ ಬೇರೆ ಇಟ್ಟು ಅವುಗಳನ್ನು ವಿಶೇಷವೆಂದು ಗುರುತಿಸುವುದು ಇದರ ಉದ್ದೇಶವಾಗಿತ್ತು. ಹೀಗೆ ಕಾಲ ಕಳೆದ ಹಾಗೆ ಈ ಪಿಂಕ್ ಪೇಪರ್ ವಿಶೇಷತೆ ಮತ್ತು ಕಾಳಜಿ ಜೊತೆ ಸಂಬಂಧ ಹೊಂದಿತ್ತು. ಈ ಪೇಪರ್ ಒಳಗೆ ಅಮೂಲ್ಯವಾದ ವಸ್ತು ಇದೆ ಎನ್ನುವುದನ್ನು ಇದು ಸಾರಿ ಹೇಳ್ತಾ ಇತ್ತು.
ಇಂದಿಗೂ ಸಹ, ಕೆಲವು ಸಣ್ಣ ಆಭರಣ ವ್ಯಾಪಾರಿಗಳು ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ದೊಡ್ಡ ನಗರಗಳಲ್ಲಿರುವ ಅಂಗಡಿಗಳಲ್ಲಿ ಈ ಪದ್ದತಿ ಕಡಿಮೆಯಾಗಿದೆ.
ಗುಲಾಬಿ ಪೇಪರ್ ಬಳಕೆಯ ಹಿಂದಿನ ಉದ್ದೇಶ
ಇದು ಕೇವಲ ಸಾಂಸ್ಕೃತಿಕ ಅಥವಾ ಭಾವನಾತ್ಮಕ ಅಭ್ಯಾಸ ಎನ್ನುವುದು ಹಲವರ ಅನಿಸಿಕೆ. ಆದರೆ, ಇದರಲ್ಲಿ ವೈಜ್ಞಾನಿಕ ದೃಷ್ಟಿಕೋನವೂ ಅಡಗಿದೆ ಎನ್ನುತ್ತಾರೆ ಆಭರಣ ವ್ಯಾಪಾರಿಗಳು. ಚಿನ್ನ ಮತ್ತು ಬೆಳ್ಳಿ ಆಭರಣಗಳು ದುಬಾರಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನು ಒಮ್ಮೆ ಖರೀದಿ ಮಾಡಿದ ನಂತರ ಅದರ ಹೊಳಪು ಸ್ವಾಭಾವಿಕವಾಗಿಯೇ ಹಲವು ವರ್ಷಗಳವರೆಗೆ ಇರಬೇಕು ಎನ್ನುವುದು ಅನೇಕರ ಬಯಕೆಯಾಗಿರುತ್ತದೆ. ಗುಲಾಬಿ ಕಾಗದದಲ್ಲಿ ಆಭರಣಗಳನ್ನು ಸುತ್ತುವುದರಿಂದ ಅದರ ಹೊಳಪನ್ನು ಕಾಪಾಡಿಕೊಳ್ಳಲು ಮತ್ತು ಮಸುಕಾಗದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ.
ಪಿಂಕ್ ಪೇಪರ್ ಪ್ರಯೋಜನ
ಇಲ್ಲಿ ಗುಲಾಬಿ ಬಣ್ಣದ ಪೇಪರ್ ಅನ್ನು ಹಾಗೆಯೇ ಸುಮ್ಮನೆ ಆಯ್ಕೆ ಮಾಡಿಕೊಂಡದ್ದಲ್ಲ. ಗುಲಾಬಿ ಕಾಗದವು ಸಾಮಾನ್ಯವಾಗಿ ಸೌಮ್ಯವಾದ ರಕ್ಷಣಾತ್ಮಕ ಲೇಪನದೊಂದಿಗೆ ಬರುತ್ತಿತ್ತು. ಅದು ತೇವಾಂಶ ಮತ್ತು ಗಾಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿತು. ಬಂಗಾರ ಅಥವಾ ಬೆಳ್ಳಿಯ ಹೊಳಪಿನ ಮೇಲೆ ಪರಿಣಾಮ ಬೀರುವ ಎರಡು ಪ್ರಮುಖ ಅಂಶಗಳು ತೇವಾಂಶ ಮತ್ತು ಗಾಳಿ. ಬೇರೆ ಬಣ್ಣದ ಕಾಗದಗಳು ಪಿಂಕ್ ಕಾಗದ ನೀಡುವ ಪ್ರಯೋಜನ ನೀಡುತ್ತಿರಲಿಲ್ಲ. ಹಾಗಾಗಿ ಎಲ್ಲಾ ವ್ಯಾಪಾರಿಗಳು ಗುಲಾಬಿ ಬಣ್ಣದ ಕಾಗದವನ್ನೇ ಬಳಸುವುದಕ್ಕೆ ಶುರು ಮಾಡಿದರು.
ಈ ಪೇಪರ್ ಆಭರಣದ ಹೊಳಪನ್ನು ಸಂರಕ್ಷಿಸುವುದರ ಜೊತೆಗೆ, ಕಾಗದವು ಹಲವಾರು ರಕ್ಷಣಾತ್ಮಕ ಕಾರ್ಯಗಳನ್ನು ನಿರ್ವಹಿಸಿದೆ. ಈ ಕಾಗದ ತೇವಾಂಶ ಮತ್ತು ಧೂಳಿನ ವಿರುದ್ಧ ಬಫರ್ ಆಗಿ ಕೆಲಸ ಮಾಡುತ್ತದೆ. ಇವೆರಡೂ ಕ್ರಮೇಣ ಲೋಹಗಳ ಮೇಲ್ಮೈ ಮೇಲೆ ಪರಿಣಾಮ ಬೀರುತ್ತವೆ. ಇದು ಒಡವೆಗಳ ಮೇಲೆ ಗೀರು ಬೀಳದಂತೆ ತಡೆಯುತ್ತದೆ.
ಶುದ್ಧ ಚಿನ್ನವು ತುಕ್ಕು ಹಿಡಿಯುವುದಿಲ್ಲ ನಿಜ. ಆದರೆ, ಎಲ್ಲಾ ಆಭರಣಗಳನ್ನು 24 ಕ್ಯಾರೆಟ್ ಚಿನ್ನದಿಂದ ಮಾಡಿರುವುದಿಲ್ಲ. ಆಭರಣಗಳ ಬಾಳಿಕೆ ಹೆಚ್ಚಿಸಲು, ಸಾಮಾನ್ಯವಾಗಿ ಚಿನ್ನವನ್ನು ತಾಮ್ರ ಅಥವಾ ಬೆಳ್ಳಿಯಂತಹ ಲೋಹಗಳೊಂದಿಗೆ ಬೆರೆಸುತ್ತಾರೆ. ಈ ಮಿಶ್ರಲೋಹಗಳು ಗಾಳಿಯಲ್ಲಿ ತೇವಾಂಶ ಮತ್ತು ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಬಹುದು. ಹೀಗಾಗಿ ಕಾಲ ಕಳೆದಂತೆ ಬಂಗಾರದ ಬಣ್ಣ ಮಾಸಬಹುದು. ಗುಲಾಬಿ ಕಾಗದವು ಈ ಪ್ರಕ್ರಿಯೆಯನ್ನು ನಿಧಾನಗೊಳಿಸಿತು.
ಈಗ ಪಿಂಕ್ ಪೇಪರ್ ಮರೆಯಾಗಿದ್ದೇಕೆ?
ಇತ್ತೀಚಿನ ದಿನಗಳಲ್ಲಿ ಪ್ಯಾಕೇಜಿಂಗ್ ಆಭರಣಗಳ ಸಂರಕ್ಷಣೆಗಿಂತ ಹೆಚ್ಚಾಗಿ ಬ್ರ್ಯಾಂಡಿಂಗ್ ಮತ್ತು ಗ್ರಾಹಕರ ಅನುಭವದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ. ವೆಲ್ವೆಟ್-ಲೈನ್ಡ್ ಬಾಕ್ಸ್‌ಗಳು, ಟ್ಯಾಂಪರ್‌ಪ್ರೂಫ್ ಸೀಲ್‌ಗಳು ಮತ್ತು ಆ್ಯಂಟಿ-ಟಾರ್ನಿಶ್ ಪೌಚ್‌ಗಳು ಈಗ ಅದೇ ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ.


Click it and Unblock the Notifications
