ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?
ಬೆಂಗಳೂರು, ಅಕ್ಟೋಬರ್. 21: ತೊಗರಿ ಬೇಳೆ ಕೆಜಿಗೆ 210 ರು. ಉದ್ದಿನ ಬೇಳೆ 200 ರು. ಕಿರಾಣಿ ಅಂಗಡಿಗೆ ತೆರಳಿದ ಗಂಡ ಹೆಂಡತಿ ಒಂದು ಕೆಜಿ ಬೇಳೆ ತರಲು ಹೇಳಿದ್ದರೆ ಅರ್ಧ ಕೆಜೆ ಮಾತ್ರ ತರಲು ಸಾಧ್ಯ. ಕೆಜಿ ಬೇಳೆ ಕೊಂಡರೆ ತರಕಾರಿಗೆ ಹಣ ಹೊಂದಿಸಲು ಸಾಲ ಮಾಡಬೇಕಾಗುತ್ತದೆ!
ಹೌದು.. ತರಕಾರಿ ಖರೀದಿಗೆ ಸಾಲವೇ? ಎಂದು ನಗಬೇಡಿ. ವಾಸ್ತವದ ಸ್ಥಿತಿ ಹಾಗೆ ಇದೆ. ನಿಮ್ಮಲ್ಲಿ ತೊಗರಿ ಬೇಳೆ ಹಾಕದೇ ಖಡಕ್ ಸಾಂಬಾರ್ ಮಾಡುವ ವಿಧಾನವಿದ್ದರೆ ನಮಗೆ ತಿಳಿಸಿ ಕೊಡಿ ಎಂದು ಕೇಳುವಂತಾಗಿದೆ. ಹಬ್ಬದ ಸಂಭ್ರಮ ಎಂದು ಬಂಧು ಬಳಗದವರು ಮನೆಗೆ ಧಾವಿಸಿದರೆ ಅಡುಗೆ ಮನೆಯಲ್ಲಿ ನೀವೆ ನಿಂತು ಮೇಲ್ವಿಚಾರಣೆ ಮಾಡಬೇಕು.
ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸಿದ್ದ ಈರುಳ್ಳಿ ಇಳಿಕೆಯ ಹಾದಿಗೆ ಮರಳಿದ್ದರೆ , ಪ್ರತಿದಿನ ಏರುತ್ತಿರುವ ಬೆಳೆ ಕಾಳುಗಳ ಬೆಲೆ ಭಯವನ್ನೇ ಹುಟ್ಟಿಸುತ್ತಿದೆ. ಕೇಂದ್ರ ಸರ್ಕಾರ ದರ ಇಳಿಕೆಗೆ ಸಾಹಸ ಮಾಡುತ್ತಿದ್ದರೂ ಯಾವ ಪರಿಣಾಮ ಸಾಧ್ಯವಾಗುತ್ತಿಲ್ಲ.[ಡಿಸೆಂಬರ್ ಗಾದರೂ ದರ ಇಳಿಯುವುದೇ?]
ಹಾಗಾದರೆ ನಿಜಕ್ಕೂ ತೊಗರಿ ದರ ಈ ಪರಿ ಏರಲು ಕಾರಣವೇನು? ನಿಜಕ್ಕೂ ಮಾರುಕಟ್ಟೆಯಲ್ಲಿ ಅಭಾವವಿದೆಯೇ? ಅಥವಾ ಇದು ಮಧ್ಯವರ್ತಿ ಮತ್ತು ವ್ಯಾಪಾರಿಗಳ ಕುತಂತ್ರವೇ? ರೈತರಿಗೆ ಲಾಭವಾಗಿದೆಯಾ? ಬೆಳೆಯೇ ನಬಂದಿಲ್ಲವೇ? ಇಳುವರಿ ಕುಂಠಿತವೇ? ಈ ಬಗೆಯ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕಲೇಬೇಕು.

ಕೈ ಕೊಟ್ಟ ಮಳೆರಾಯ
ಮುಂಗಾರು ಕೈಕೊಟ್ಟ ಪರಿಣಾಮ ತೊಗರಿ ಬೆಳೆಯುವ ರಾಜ್ಯದ ಕಲಬುರಗಿ, ಕೊಪ್ಪಳದಲ್ಲಿ ನಿರೀಕ್ಷಿತ ಬೆಳೆ ಬಂದಿಲ್ಲ. ಪರಿಣಾಮ ಮಾರುಕಟ್ಟೆಗೆ ಆಗಮಿಸಬೇಕಿದ್ದ ತೊಗರಿ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದ್ದು ದರ ಏರಿಕೆಗೆ ಪ್ರಮುಖ ಕಾರಣ.

ದೊಡ್ಡ ರೈತರ ಬಳಿ ಸಂಗ್ರಹವಿದೆ
ಬೆಲೆ ಇನ್ನು ಹೆಚ್ಚುತ್ತದೆ ಎಂಬ ನಿರೀಕ್ಷೆಯಲ್ಲಿರುವ ದೊಡ್ಡ ರೈತರು ತಮ್ಮ ಬಳಿಯ ತೊಗರಿಯನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಇದನ್ನು ಅವರು ಸದ್ಯಕ್ಕೆ ಮಾರಾಟ ಮಾಡುವಂತೆ ಕಾಣುತ್ತಿಲ್ಲ.

ಇತರೆ ಧಾನ್ಯಗಳು ಕೈ ಕೊಟ್ಟವು
ಹೆಸರು, ಉದ್ದು, ಅಲಸಂದಿ ಸರಿಯಾದ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದ್ದರೆ ತೊಗರಿ ದರ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ಈ ಧಾನ್ಯಗಳ ಉತ್ಪಾದನೆಯೂ ಕುಂಠಿತಗೊಂಡಿದೆ.

ಕೃತಕ ಅಭಾವ
ಇದೇ ಅವಕಾಶ ಬಳಸಿಕೊಂಡಿರುವ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳು ಕೃತಕ ಅಭಾವ ಸೃಷ್ಟಿಗೆ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಉತ್ಪಾದನೆ ಕುಂಠಿತವಾಗಿರುವ ಅಂಶವನ್ನು ದಾಖಲೆಗಳೇ ಹೇಳುತ್ತವೆ.

ದರ ಪಟ್ಟಿ ನೋಡ್ಕಂಡು ಬನ್ನಿ
ತೊಗರಿ ಬೇಳೆ ಮತ್ತು ಉದ್ದಿನ ಬೆಳೆ ದರ ಒಂದನ್ನೊಂದು ಹಿಂದಿಕ್ಕುತ್ತ ಸಾಗುತ್ತಿವೆ. ಸದ್ಯ ತೊಗರಿ ಬೆಳೆ ಕೆಜಿಗೆ 210 ರು. ಉದ್ದಿನ ಬೆಳೆ 160 ರು. ಇದ್ದು ಬಡವರು ಮತ್ತು ಮಧ್ಯಮ ವರ್ಗದವರು ಬೆಳೆ ಸಾರು, ಉದ್ದಿನ ದೋಸೆಗೆ ಗುಡ್ ಬೈ ಹೇಳಿದ್ದಾರೆ

ಡಿಸೆಂಬರ್ ವರೆಗೂ ಇದೆ ಕತೆ
ಹಿಂಗಾರಿನ ಬೆಳೆ ಅದು ನೀರಾವರಿ ಪ್ರದೇಶದಲ್ಲಿ ಚೆನ್ನಾಗಿ ಬಂದರೆ ಡಿಸೆಂಬರ್ ವೇಳೆಗೆ ಬೆಳೆ ಕಾಳುಗಳ ದರ ಇಳಿಕೆ ಸಾಧಿಸಬಹುದು. ಇಲ್ಲವಾದಲ್ಲಿ ಹಬ್ಬಕ್ಕೆ ಹೋಳಿಗೆ ತಿಂದಂತೆಯೇ!

ಕಲಬುರಗಿ ಖಾಲಿ
ಕಳೆದ ಆಗಸ್ಟ್ 22ರಂದು ಕಲಬುರಗಿ ಮಾರುಕಟ್ಟೆಗೆ ಆವಕವಾದ ತೊಗರಿ ಪ್ರಮಾಣ ಕೇವಲ 1716 ಕ್ವಿಂಟಾಲ್. ಬಿತ್ತನೆಯೂ ಕಡಿಮೆಯಾಗಿದೆ. ಮಳೆ ಕೈ ಕೊಟ್ಟಿದ್ದರಿಂದ ತೊಗರಿ ಬಿತ್ತನೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. 3,59,525 ಹೆಕ್ಟೇರ್ನಲ್ಲಿ ತೊಗರಿ ಬಿತ್ತನೆ ಗುರಿ ಹೊಂದಿದ್ದರೂ ಇದುವರೆಗೆ ಆಗಿರುವುದು 2,69,296 ಹೆಕ್ಟೇರ್ನಲ್ಲಿ ಮಾತ್ರ.

ಬಿಸಿಯೂಟಕ್ಕೂ ಕೊಕ್ಕೆ
ದರ ಇದೇ ರೀತಿ ಮುಂದುವರಿದರೆ ಮಕ್ಕಳ ಬಿಸಿಯೂಟದ ಮೇಲೂ ಪರಿಣಾಮ ಬೀರಲಿದೆ. ಸರ್ಕಾರ ವೆಚ್ಚ ಕಡಿತದ ದೃಷ್ಟಿಯಿಂದ ಅನಿವಾರ್ಯವಾಗಿ ಬೇರೆ ಧಾನ್ಯಗಳತ್ತ ಗಮನ ಹರಿಸಬೇಕಾಗುತ್ತದೆ.

ಸಾಮಾಜಿಕ ತಾಣದಲ್ಲೂ ಪ್ರತಿಧ್ವನಿ
ನಾವು ಕಳೆದ ಎರಡು ತಿಂಗಳ ಹಿಂದೆ ಕೆಜಿಗೆ 40 ರು. ನಂತೆ ಮಾರಿದ್ದೇವು. ಆದರೆ ಇಂದು ಅದೇ ತೊಗರಿ ಕೆಜಿಗೆ 210 ಆಗಿದೆ. ಹಾಗಾದರೆ ಬಾಕಿ 170 ರು. ಯಾರ ಜೇಬು ಸೇರಿತು ಎಂದು ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ರೈತರೊಬ್ಬರು ಪ್ರಶ್ನೆ ಮಾಡಿದ್ದಾರೆ.

ತಮಿಳುನಾಡಿಗರಿಗಿಲ್ಲ ತಲೆಬಿಸಿ
ತಮಿಳುನಾಡು ಸರ್ಕಾರ ಜನರಿಗೆ ತೊಗರಿ ಬೆಳೆಯನ್ನು ಕೆಜಿಗೆ 110 ರು. ನಂತೆ ಒದಗಿಸುತ್ತಿದೆ.ಉಳಿದಂತೆ ಸರ್ಕಾರ ನೀಡುತ್ತಿರುವ ಪಡಿತರದಲ್ಲೂ ಯಾವ ಕಡಿತ ಮಾಡಿಲ್ಲ.












Click it and Unblock the Notifications