ಇಂಗ್ಲೆಂಡ್ 300 ವರ್ಷಗಳಲ್ಲೇ ಕಾಣದ ಭೀಕರ ಆರ್ಥಿಕ ಹಿಂಜರಿತ ಎದುರಿಸಲಿದೆ!
ಲಂಡನ್, ನವೆಂಬರ್ 27: ಈ ವರ್ಷ ಕೋವಿಡ್-19 ಬಿಕ್ಕಟ್ಟಿನ ಪರಿಣಾಮದಿಂದಾಗಿ ಇಂಗ್ಲೆಂಡ್ ಆರ್ಥಿಕತೆಯು ಶೇಕಡಾ 11.3ರಷ್ಟು ಕುಗ್ಗುವ ಮುನ್ಸೂಚನೆ ಸಿಕ್ಕಿದ್ದು, ದೇಶದಲ್ಲಿ 300ಕ್ಕೂ ಹೆಚ್ಚು ವರ್ಷಗಳಲ್ಲಿ ಉಂಟಾದ ಭೀಕರ ಆರ್ಥಿಕ ಹಿಂಜರಿತವಾಗಿದೆ ಎಂದು ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಬುಧವಾರ ಹೇಳಿದ್ದಾರೆ.
2022 ರ ಅಂತ್ಯದವರೆಗೆ ಆರ್ಥಿಕತೆಯು ತನ್ನ ಪೂರ್ವ ಕೊರೊನಾವೈರಸ್ ಮಟ್ಟಕ್ಕೆ ಮರಳುತ್ತದೆ ಎಂದು ಆಫೀಸ್ ಆಫ್ ರೆಸ್ಪಾನ್ಸಿಬಿಲಿಟಿ (ಒಬಿಆರ್) ನಿರೀಕ್ಷಿಸಿರಲಿಲ್ಲ ಎಂದು ಸಚಿವರು, ಬ್ರಿಟನ್ ಶಾಸಕರಿಗೆ ತಿಳಿಸಿದರು.
ಇದರ ಜೊತೆಗೆ ಸಾಂಕ್ರಾಮಿಕ ರೋಗದಿಂದಾಗಿರುವ ಹಣಕಾಸಿನ ಹಾನಿ 'ಶಾಶ್ವತವಾಗಬಹುದು' ಎಂದು ಸುನಕ್ ಹೇಳಿದ್ದಾರೆ. 2021 ರ ಎರಡನೇ ತ್ರೈಮಾಸಿಕದಲ್ಲಿ ನಿರುದ್ಯೋಗವು ಶೇ. 7.5 ರಷ್ಟು ಅಥವಾ 2.6 ಮಿಲಿಯನ್ ಜನರಿಗೆ ಏರಿಕೆಯಾಗಲಿದೆ ಎಂದು ಒಬಿಆರ್ ಅಂಕಿಅಂಶಗಳನ್ನು ಉಲ್ಲೇಖಿಸಿದ್ದಾರೆ.

ಕೊರೊನಾವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಮೊದಲ ಆರ್ಥಿಕ ಖರ್ಚಿನ ವಿಮರ್ಶೆಯನ್ನು ಪ್ರಕಟಿಸಿದ ಸುನಕ್, 'ಆರ್ಥಿಕ ತುರ್ತುಸ್ಥಿತಿ ಈಗಷ್ಟೇ ಪ್ರಾರಂಭವಾಗಿದೆ' ಎಂದು ಎಚ್ಚರಿಸಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಪರಿಹಾರಕ್ಕಾಗಿ ಬ್ರಿಟನ್ ಸರ್ಕಾರ 280 ಬಿಲಿಯನ್ ಪೌಂಡ್‌ಗಳನ್ನು (ಸುಮಾರು 374.1 ಬಿಲಿಯನ್ ಯುಎಸ್ ಡಾಲರ್) ಖರ್ಚು ಮಾಡಿದೆ ಮತ್ತು ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಮುಂದಿನ ವರ್ಷ ಇನ್ನೂ 55 ಬಿಲಿಯನ್ ಪೌಂಡ್‌ಗಳನ್ನು (ಸುಮಾರು 73.5 ಬಿಲಿಯನ್ ಡಾಲರ್) ಖರ್ಚು ಮಾಡಲು ಉದ್ದೇಶಿಸಿದೆ ಎಂದು ತಿಳಿಸಿದರು.












Click it and Unblock the Notifications