5,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರು... Stock Market
ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ದೊಡ್ಡ ನಡುಕ ಉಂಟಾಗಿದೆ, ಇದರ ಪರಿಣಾಮ ಭಾರತ ಕೂಡ ಎದುರಿಸುವಂತೆ ಆಗಿದೆ. ಅದರಲ್ಲೂ ಭಾರತೀಯ ಷೇರುಪೇಟೆ ಇಂದು ದೊಡ್ಡ ನಷ್ಟ ಅನುಭವಿಸಿ, ಹೂಡಿಕೆದಾರರಿಗೆ ಆಘಾತ ತಂದಿದೆ. ಅಮೆರಿಕ ಅಧ್ಯಕ್ಷರ ತೆರಿಗೆ ನೀತಿ ಪರಿಣಾಮ ಇದೀಗ ಷೇರುಪೇಟೆ ಸಂಕಷ್ಟಕ್ಕೆ ಸಿಲುಕಿದ್ದು, ಇಂದು ಒಂದೇ ದಿನ 5,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಷೇರು ಮಾರುಕಟ್ಟೆ ಹೂಡಿಕೆದಾರರು ಚಿಂತೆಯಲ್ಲಿ ಮುಳುಗಿದ್ದಾರೆ. ಹಾಗಾದರೆ, ಯಾವೆಲ್ಲಾ ಷೇರುಗಳ ಮೌಲ್ಯ ಕುಸಿತ ಕಂಡಿದೆ? ಈವರೆಗೂ ಎಷ್ಟು ಅಂಕ ಕುಸಿತ ಕಂಡಿದೆ ಷೇರುಪೇಟೆ? ಬನ್ನಿ ತಿಳಿಯೋಣ.
ಭಾರತೀಯ ಷೇರುಪೇಟೆ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ವಿಶ್ವಾಸ ಗಳಿಸಿದ್ದು, ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ಆದರೆ ಇದೀಗ ಅಮೆರಿಕ ತೆರಿಗೆ ನೀತಿಯ ಪರಿಣಾಮ ಭಾರತದ ಹಲವು ವಲಯಗಳಲ್ಲಿ ದೊಡ್ಡ ತಲ್ಲಣ ಉಂಟಾಗಿದೆ. ಇದರ ಜೊತೆಗೆ ಎಐ ಕಾರಣಕ್ಕೆ ಐಟಿ ವಲಯ ಅಲ್ಲಾಡಿ ಹೋಗಿದ್ದು, ಐಟಿ ಷೇರುಗಳನ್ನ ಮಾರಾಟ ಮಾಡುವ ಪ್ರಕ್ರಿಯೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಸೆನ್ಸೆಕ್ಸ್ ಗರಿಷ್ಠ 1,300 ಅಂಕ ಕುಸಿತ
ಒಂದು ಕಡೆ ಈಗ ಐಟಿ ವಲಯದಲ್ಲಿ ಕೂಡ ಇಂದು ಕುಸಿತ ಎದುರಾಗಿದ್ದು, ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದ ಸಾಧ್ಯತೆಗಳೂ ಭಾರತೀಯ ಷೇರುಪೇಟೆ ಪ್ರಮುಖ ಸೂಚ್ಯಂಕದ ಮೇಲೆ ಪರಿಣಾಮ ಬೀರಿದೆ. ಎಲ್ಲಾ ಪರಿಣಾಮಗಳಿಂದ ಈಗ ಸೆನ್ಸೆಕ್ಸ್ ಗರಿಷ್ಠ 1,300 ಅಂಕಗಳ ತನಕ ಭಾರಿ ಕುಸಿತ ಕಂಡಿದೆ, ಹಾಗೇ ನಿಫ್ಟಿ-50 ಸುಮಾರು 350ಕ್ಕೂ ಹೆಚ್ಚು ಅಂಕ ಕಳೆದುಕೊಂಡು ಪರದಾಡಿದೆ. ಈ ಮೂಲಕ ಇಂದು ಬೆಳಗ್ಗೆಯಿಂದಲೇ ಭಾರತೀಯ ಷೇರುಪೇಟೆ ಕರಡಿ ಕುಣಿತಕ್ಕೆ ತತ್ತರಿಸಿದೆ.
ಕೊನೆಯಲ್ಲಿ ಚೇತರಿಕೆ ಕಂಡ ಮಾರುಕಟ್ಟೆ
ಅಂತಿಮವಾಗಿ ಕೊಂಚ ಚೇತರಿಕೆ ಕಂಡ ಷೇರುಪೇಟೆ, ಒಂದು ಹಂತದಲ್ಲಿ ವಹಿವಾಟು ಮುಗಿಸಿದೆ. ಈ ಪೈಕಿ ಸೆನ್ಸೆಕ್ಸ್ ಅಂತಿಮವಾಗಿ 974 ಅಂಕಗಳನ್ನು ಕಳೆದುಕೊಂಡು 82,319 ಅಂಕದಲ್ಲಿ ವಹಿವಾಟನ್ನು ಮುಗಿಸಿದೆ. ಹಾಗೇ ನಿಫ್ಟಿ-50 ಒಟ್ಟು 253 ಅಂಕಗಳನ್ನು ಕಳೆದುಕೊಂಡು 25,459 ಅಂಕಗಳಿಗೆ ತನ್ನ ವಹಿವಾಟು ಮುಗಿಸಿದೆ. ಬ್ಯಾಂಕಿಂಗ್ ವಲಯವೂ ಸೇರಿದಂತೆ, ಆಟೋಮೊಬೈಲ್ ಹಾಗೂ ಮೀಡಿಯಾದ ಷೇರುಗಳು ಕೂಡ ಕುಸಿತ ಕಂಡಿವೆ. ಇದರ ಜೊತೆಗೆ ಐಟಿ ವಲಯದಲ್ಲಿ ಅತಿಹೆಚ್ಚು ನಷ್ಟವಾಗಿದ್ದು, ಈ ಮೂಲಕ ಲಕ್ಷಾಂತರ ಕೋಟಿ ಬಂಡವಾಳವು ಕರಗಿ ಹೋಗಿದೆ. ಇರಾನ್ ಹಾಗೂ ಅಮೆರಿಕ ನಡುವೆ ಪದೇ ಪದೇ ಕಿರಿಕ್ ಆಗುತ್ತಿರುವುದು ಟೆನ್ಷನ್ ಹೆಚ್ಚು ಮಾಡುತ್ತಿದೆ.












Click it and Unblock the Notifications