2,00,000 ಕೋಟಿ ರೂಪಾಯಿ ಕಳೆದುಕೊಂಡ ಭಾರತೀಯ ಐಟಿ ವಲಯ, ತಿಳಿಯಬೇಕಾದ ಮಾಹಿತಿ ಇಲ್ಲಿದೆ | Stock Market
ಭಾರತದ ಐಟಿ ವಲಯ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಅಮೆರಿಕ ಕೂಡ ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುವ ಹಂತಕ್ಕೆ ತಲುಪಿದೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರು ಇಡೀ ಭಾರತದ ಐಟಿ ತವರು ಎಂಬ ಕೀರ್ತಿ ಪಡೆದಿದ್ದು, ಸಾವಿರಾರು ಕಂಪನಿಗಳು ಇಲ್ಲಿಂದಲೇ ಕಾರ್ಯನಿರ್ವಹಣೆ ಮಾಡುತ್ತವೆ. ಹೀಗಿದ್ದಾಗ ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟು, ಲಕ್ಷ ಲಕ್ಷ ಕೋಟಿ ರೂಪಾಯಿ ತೆರಿಗೆ ಕೂಡ ಕಟ್ಟುತ್ತಾ ಬಂದಿವೆ ಐಟಿ ಕಂಪನಿಗಳು. ಇಂತಹ ಪರಿಸ್ಥಿತಿಯಲ್ಲಿ ಇಂದು ದಿಢೀರ್ ಆಘಾತ ಎದುರಾಗಿದೆ. ಒಂದೇ ಒಂದು ದಿನದಲ್ಲಿ ಬರೋಬ್ಬರಿ 2,00,000 ಕೋಟಿ ರೂಪಾಯಿ ಕಳೆದುಕೊಂಡಿದೆ ಭಾರತೀಯ ಐಟಿ ವಲಯ.
ಭಾರತೀಯ ಐಟಿ ವಲಯದ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಹಾಗೂ ಎಲ್‌ಟಿಐ ಮೈಂಡ್ ಟ್ರೀ ಸೇರಿದಂತೆ ಬೃಹತ್ ಕಂಪನಿಗಳಿಗೆ ಇಂದು ದೊಡ್ಡ ಹೊಡೆತವೇ ಬಿದ್ದಿದೆ. 2020 ಕೊರೊನಾ ಅಂದ್ರೆ ಕೊವಿಡ್-19 ಸಮಯದಲ್ಲಿ ಎದುರಾಗಿದ್ದ ಪರಿಸ್ಥಿತಿಗಿಂತಲೂ ಭಯಾನಕ ಕುಸಿತ ಇಂದು ಒಂದೇ ದಿನ, ಷೇರು ಮಾರುಕಟ್ಟೆಯ ಐಟಿ ವಲಯದಲ್ಲಿ ಉಂಟಾಗಿದೆ. ಈ ಮೂಲಕ ದೊಡ್ಡ ದೊಡ್ಡ ಐಟಿ ಕಂಪನಿಗಳು ಸೇರಿದಂತೆ ಇಡೀ ಐಟಿ ವಲಯ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

ದಿಢೀರ್ 2,00,000 ಕೋಟಿ ರೂಪಾಯಿ ನಷ್ಟ
ಷೇರು ಮಾರುಕಟ್ಟೆ ನಿನ್ನೆಯಷ್ಟೇ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿತ್ತು, ಭಾರತೀಯ ಷೇರುಪೇಟೆಗೆ ಬಲ ತುಂಬಿದ್ದು ಅಮೆರಿಕ ಮತ್ತು ಭಾರತದ ನಡುವಿನ ಬೃಹತ್ ಆರ್ಥಿಕ ಒಪ್ಪಂದ. ಈ ಒಪ್ಪಂದ ಏರ್ಪಟ್ಟ ನಂತರ ಭಾರಿ ದೊಡ್ಡ ಪ್ರಮಾಣದಲ್ಲಿ ಷೇರುಪೇಟೆ ಏರಿಕೆ ಕಂಡು ದಾಖಲೆಯನ್ನು ಕೂಡ ಬರೆದಿತ್ತು. ಆದರೆ ಇಂದು ಐಟಿ ವಲಯಕ್ಕೆ ದೊಡ್ಡ ಆಘಾತವೇ ಎದುರಾಗಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 2,00,000 ಕೋಟಿ ರೂಪಾಯಿ, ಅಂದ್ರೆ 2 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಹಾಗಾದರೆ ಐಟಿ ವಲಯದಲ್ಲಿ ಈ ಮಹಾನ್ ಕುಸಿತಕ್ಕೆ ಕಾರಣ ಏನು? ಮುಂದೆ ಓದಿ.
ಅಮೆರಿಕದ AI ಕಂಪನಿಯ ಅಬ್ಬರ
ಪ್ರಪಂಚ ಈಗ ಆಧುನಿಕ ಕಾಲಘಟ್ಟದಲ್ಲಿ ಇದ್ದು, ಇಲ್ಲಿ ಏನಿದ್ದರೂ ಎಐ ಅಂದ್ರೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕವೇ ನಡೆಯಲು ಸಜ್ಜಾಗುತ್ತಿದೆ. ಈ ಪರಿಸ್ಥಿತಿಯಲ್ಲೇ ಅಮೆರಿಕ ಮೂಲದ ಎಐ ಕಂಪನಿ ಆಂಥ್ರೊಪಿಕ್ ಸಂಚಲನ ಸೃಷ್ಟಿಸುವ ಸುದ್ದಿಯೊಂದನ್ನು ನೀಡಿದೆ. ಆ ಸುದ್ದಿ ಏನೆಂದರೆ, ಆಂಥ್ರೊಪಿಕ್ ಇದೀಗ ಬಿಡುಗಡೆ ಮಾಡಿರುವ ಹೊಸ ಟೂಲ್ ಮೂಲಕ ಆಫಿಸ್ ಅಲ್ಲಿ ಮಾಡುವ ಮನುಷ್ಯರ ಉದ್ಯೋಗವನ್ನು ಬಹುತೇಕ ಕಂಪ್ಯೂಟರ್ ಮಾಡಲಿದೆಯಂತೆ.
ಏನೆಲ್ಲಾ ಕೆಲಸ ಮಾಡಲಿದೆ AI ಟೂಲ್?
ಕಾನೂನು ದಾಖಲೆ ಬರೆಯುವ ವಿಚಾರದಿಂದ ಹಿಡಿದು, ಡೇಟಾ ವಿಶ್ಲೇಷಣೆ, ಮಾರ್ಕೆಟಿಂಗ್ ಅಲ್ಲದೆ ಕಂಪ್ಯೂಟರ್ ಕೋಡಿಂಗ್‌ಗೆ ಕೂಡ ಈ ಟೂಲ್ ಬಳಸಬಹುದಂತೆ. ಈ ಮೂಲಕ ಆಫಿಸ್ ಕೆಲಸಗಳು ಮನುಷ್ಯರು ಇಲ್ಲದೇ ನಡೆಯಲಿದೆ ಎಂಬ ಸುದ್ದಿ ದೊಡ್ಡ ತಲ್ಲಣಕ್ಕೆ ಕಾರಣವಾಗಿ, ಹೂಡಿಕೆದಾರರು ಈಗ ಒಂದಷ್ಟು ಆತಂಕ್ಕೆ ಒಳಗಾಗಿರುವ ರೀತಿ ಕಂಡುಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಕೆಲಸ ನೋಡಿಕೊಳ್ಳುವ ವಿಚಾರದಲ್ಲಿ ಐಟಿ ಮತ್ತು ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳು ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಈಗ ಎಐ ಖರ್ಚು ಇಲ್ಲದೆ ಈ ಕೆಲಸ ಮಾಡಲು ಸಜ್ಜಾಗಿರುವ ಹಿನ್ನೆಲೆ ಷೇರುಪೇಟೆ ಐಟಿ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ.
ಐಟಿ ಕಂಪನಿಗಳ ವಿಚಾರದಲ್ಲಿ ಈ ಸುದ್ದಿ ಬಂದಿದ್ದೇ ತಡ ದೊಡ್ಡ ಆತಂಕ ಸೃಷ್ಟಿಯಾಗಿ, ಭಾರಿ ಪ್ರಮಾಣದಲ್ಲಿ ಐಟಿ ಷೇರುಗಳು ಕುಸಿತ ಕಂಡಿವೆ. ಆದರೆ ಇದರ ಮುಂದಿನ ಪರಿಣಾಮ ಹೇಗಿರಲಿದೆ? ಎಂಬುದನ್ನು ಕಾದು ನೋಡಬೇಕಿದೆ. ಇದೆಲ್ಲಾ ಏನೇ ಇರಲಿ, ಭಾರತೀಯ ಐಟಿ ವಲಯ ಇಂದು ಒಂದೇ ದಿನ 2,00,000 ಕೋಟಿ ರೂಪಾಯಿ ನಷ್ಟ ಅನುಭವಿಸಿರುವುದು ಜಾಗತಿಕ ಮಟ್ಟದಲ್ಲೂ ಭಾರಿ ತಲ್ಲಣಕ್ಕೆ ಕಾರಣವಾಗಿದೆ.












Click it and Unblock the Notifications