ಕಾರ್ಮಿಕ ಕಾಯ್ದೆ ತಿದ್ದುಪಡಿ: ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ
ನವದೆಹಲಿ, ಜು. 21 : ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಪಡೆದ ನಂತರವೇ ಕಾರ್ಮಿಕ ಕಾಯ್ದೆಗಳಲ್ಲಿ ಮಾರ್ಪಾಡು ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನವದೆಹಲಿಯಲ್ಲಿ ನಡೆದ 46ನೇ ಭಾರತೀಯ ಕಾರ್ಮಿಕ ಸಮಾವೇಶದಲ್ಲಿ ಮಾತನಾಡಿ ಅನಗತ್ಯ ಹಾಗೂ ಹಳೆಯ ಕಾಯ್ದೆಗಳನ್ನು ಕೈಬಿಡುವುದು ಒಳ್ಳೆಯದು. ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ, ಒಮ್ಮತಕ್ಕೆ ನಿರ್ಧಾರ ತೆಗೆದುಕೊಳ್ಳಲು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.[ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ವಿಮೆ]

ತಮ್ಮ ಅಭಿಪ್ರಾಯ ಪಡೆಯದೇ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಉದ್ಯೋಗ ತರಬೇತಿ (ಪ್ರಶಿಕ್ಷಣಾರ್ಥಿಗಳ) ಕಾಯ್ದೆ ಜಾರಿ ಮಾಡಿದೆ ಎಂದು ಕಾರ್ಮಿಕ ಸಂಘಟನೆಗಳು ಆಕ್ಷೇಪ ಎತ್ತಿವೆ. ಇದನ್ನು ಮತ್ತೆ ಪರಾಮರ್ಶೆಮಾಡಬೇಕು ಎಂಬುದು ಕಾರ್ಮಿಕ ಸಂಘಟನೆಗಳ ವಾದ. ಇದಕ್ಕೆ ಎನ್ ಡಿಎ ಮೈತ್ರಿ ಪಕ್ಷಗಳೆ ಬೆಂಬಲ ಸೂಚಿಸಿದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕಾರ್ಮಿಕರ ಭವಿಷ್ಯನಿಧಿ (ಪಿಎಫ್) ಸಾಲದ ಮೇಲೆ ತೆರಿಗೆ ವಿಧಿಸಿರುವುದು, ಕನಿಷ್ಠ ವೇತನ ಜಾರಿ ಕುರಿತಾಗಿ ಅಧಿಕಾರಿಗಳ ಪರಿಶೀಲನೆ ರದ್ದುಗೊಳಿಸಿ , ಕಾರ್ಖಾನೆಗಳ ಸ್ವಯಂ ಪರಿಶೀಲನೆಗೆ ಅವಕಾಶ ಕಲ್ಪಿಸಿರುವುದನ್ನು ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ.[ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?]
ಜುಲೈ 21 ರಿಂದ ಮಳೆಗಾಲದ ಸಂಸತ್ ಅಧಿವೇಶನ ಆರಂಭವಾಗಲಿದ್ದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಿದ್ಧತೆ ಮಾಡಿಕೊಂಡಿದ್ದು ಕಾರ್ಮಿಕ ಕಾಯ್ದೆಯಲ್ಲಿ ಆಗಿರುವ ಬದಲಾವಣೆಗಳನ್ನು ಚರ್ಚೆ ಮಾಡಿ ಅಂತಿಮ ರೂಪುರೇಷೆ ತಯಾರು ಮಾಡಲಾಗುವುದು.












Click it and Unblock the Notifications