ಇನ್ಫೋಸಿಸ್ ನಲ್ಲಿ ಲೈಂಗಿಕ ಕಿರುಕುಳದ ವಾಸನೆ
ಬೆಂಗಳೂರು, ನ.7: ದೇಶದ ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್ ನಲ್ಲಿ ಮತ್ತೊಮ್ಮೆ ಲೈಂಗಿಕ ಕಿರುಕುಳ ನಡೆದಿರುವ ವಾಸನೆ ದಟ್ಟವಾಗಿ ಹೊರ ಬಂದಿದೆ. ಹಿರಿಯ ಅಧಿಕಾರಿಯೊಬ್ಬರು ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡುವ ಸುದ್ದಿ ಬಂದಿದೆ.
ಪ್ರಮುಖ ವಾಣಿಜ್ಯ ಪತ್ರಿಕೆ ವರದಿ ಪ್ರಕಾರ [email protected] ಎಂಬ ಇಮೇಲ್ ಐಡಿಯಿಂದ ಮಾಧ್ಯಮಗಳಿಗೆ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ಹಾಗೂ ಸುದ್ದಿ ಸಿಕ್ಕಿದೆ. ಇ ಮೇಲ್ ಬರೆದವರ ವಿಳಾಸ ಗುರುತು ಪತ್ತೆಯಾಗಿಲ್ಲ. ನಾವು ನೊಂದ ಮಹಿಳೆಯರ ಗುಂಪು ಎಂದಷ್ಟೇ ಹೇಳಿಕೊಂಡಿದ್ದಾರೆ.
ನಾವು ಇದೇ ಸಂಸ್ಥೆಯ secretarial and compliance ತಂಡದಲ್ಲಿದ್ದೇವೆ. ನಾವು ಈಗಾಗಲೇ ಹಿರಿಯ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದೇವೆ. ಮಾಧ್ಯಮಗಳಿಗೆ ಈ ಬಗ್ಗೆ ವಿವರ ನೀಡುವ ಉದ್ದೇಶದಿಂದ ಇಮೇಲ್ ಮಾಡಿದ್ದೇವೆ. ನಮ್ಮ ನೋವಿಗೆ ಪರಿಹಾರ ಸಿಗಬೇಕು ಎಂದು ಕೋರಿದ್ದಾರೆ.

ನಮ್ಮ ಗೋಳಿನ ಕಥೆಯನ್ನು ಇನ್ಫೋಸಿಸ್ ಬೋರ್ಡ್ ಮುಂದೆ ಹೇಳಿಕೊಂಡರೂ ಪ್ರಯೋಜನವಾಗಿಲ್ಲ, ಯಾವುದೇ ಕ್ರಮ ಇದುವರೆವಿಗೂ ತೆಗೆದುಕೊಂಡಿಲ್ಲ. ನಮಗೆ ಮಾಧ್ಯಮಗಳಿಂದ ನ್ಯಾಯ ಸಿಗಬಹುದು ಎಂದು ನಂಬಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಬರೆಯಲಾಗಿದೆ.
ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಇನ್ಫೋಸಿಸ್ ನ ವಕ್ತಾರರು, ಆರೋಪಿತ ಹಿರಿಯ ಅಧಿಕಾರಿ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ. ನಮ್ಮ ಸಂಸ್ಥೆ ಇಂಥ ಪ್ರಕರಣಗಳನ್ನು ಎಂದೂ ಲಘುವಾಗಿ ಪರಿಗಣಿಸಿಲ್ಲ, ಸಮಗ್ರ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಮಾಧ್ಯಮಗಳಿಗೆ ಈ ಇ ಮೇಲ್ ತಲುಪುವುದಕ್ಕೂ ಮುನ್ನವೇ ವಿಶೇಷ ತನಿಖಾ ದಳವನ್ನು ಇನ್ಫೋಸಿಸ್ ರಚಿಸಿದೆ ಎಂಬ ಸುದ್ದಿ ಇದೆ. ಅದರೆ, ಈ ನೊಂದ ಮಹಿಳಾ ಉದ್ಯೋಗಿಗಳ ಗುಂಪಿನಲ್ಲಿ ಯಾರಿದ್ದಾರೆ? ಇವರಿಗೆ ಕಿರುಕುಳ ನೀಡಿ ಆರೋಪಿ ಸ್ಥಾನದಲ್ಲಿರುವ ಹಿರಿಯ ಅಧಿಕಾರಿ ಯಾರು? ಪೊಲೀಸರ ಬಳಿ ವಿಷಯ ತೆಗೆದುಕೊಂಡು ಏಕೆ ಹೋಗಿಲ್ಲ? ಎಂಬೆಲ್ಲ ಪ್ರಶ್ನೆಗಳು ಸಹಜವಾಗಿ ಏಳುತ್ತವೆ. ಉದ್ಯೋಗಿಗಳ ಗೌಪ್ಯತೆ ಕಾಯುವುದು ನಮ್ಮ ಕರ್ತವ್ಯ ಎಂದಿರುವ ಇನ್ಫೋಸಿಸ್ ಈ ಸಮಸ್ಯೆ ಆದಷ್ಟು ಬೇಗ ಪರಿಹರಿಸಲಾಗುವುದು ಎಂದಿದೆ.
2002ರಲ್ಲಿ ಇನ್ಫೋಸಿಸ್ ನ ಹಿರಿಯ ಅಧಿಕಾರಿ ಫಣೀಶ್ ಮೂರ್ತಿ ಅವರು ಲೈಂಗಿಕ ಕಿರುಕುಳ ಆರೋಪ ಹೊತ್ತು ಕಂಪನಿಯನ್ನು ತೊರೆದಿದ್ದನ್ನು ಇಲ್ಲಿ ಸ್ಮರಿಸಬಹುದು.











Click it and Unblock the Notifications