ಆಧಾರ್ ಬಳಸಿ ಇ-ಪ್ಯಾನ್ ಕಾರ್ಡನ್ನು ತ್ವರಿತವಾಗಿ ಪಡೆಯುವುದು ಹೇಗೆ?
ನವದೆಹಲಿ, ಮೇ 30: ಬ್ಯಾಂಕ್ ಆಧಾರಿತ ವಿವಿಧ ವ್ಯವಹಾರಗಳಿಗೆ ಬಳಕೆ ಮಾಡುವ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡನ್ನು ಆನ್ಲೈನ್ ಮೂಲಕ ವಿತರಿಸುವ ಯೋಜನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
Recommended Video
2020-21ರ ಬಜೆಟ್ನಲ್ಲಿ ಘೋಷಿಸಿದಂತೆ ಆಧಾರ್ ಕಾರ್ಡ್ ದಾಖಲೆ ಮೇಲೆ ತಕ್ಷಣವೇ ಇ-ಪ್ಯಾನ್ ಕಾರ್ಡನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು ಎಂದು ಕಂದಾಯ ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
ಇ-ಪ್ಯಾನ್ ಕಾರ್ಡ್ ಪಡೆಯಲು ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಅಗತ್ಯ ಇಲ್ಲ. ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸಿ ಇ-ಪ್ಯಾನ್ ಕಾರ್ಡ್ ಪಡೆಯುವ ಯೋಜನೆ ಕಳೆದ ಫೆಬ್ರವರಿ ತಿಂಗಳಿನಲ್ಲೇ ಪ್ರಾಯೋಗಿಕವಾಗಿ ಆರಂಭವಾಗಿತ್ತು. ಬೀಟಾ ಆವೃತ್ತಿಯ ಪ್ರಯೋಗದ ನಂತರ ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, 10 ನಿಮಿಷದಲ್ಲೇ ಇ ಪ್ಯಾನ್ ಪಡೆಯಬಹುದು.

ಇ-ಪ್ಯಾನ್ ಕಾರ್ಡ ಪಡೆಯುವ ವಿಧಾನ
* ಆದಾಯ ತೆರಿಗೆ ಇಲಾಖೆ(Income Tax)ಯ ಅಧಿಕೃತ ವೆಬ್ಸೈಟ್ನಲ್ಲಿ12 ಅಂಕಿಗಳ ಆಧಾರ್ ಸಂಖ್ಯೆ ನಮೂದಿಸಿ.
* ಆಧಾರ್ಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಒಮ್ಮೆ ಮಾತ್ರ ಬಳಸುವ ಪಾಸ್ವರ್ಡ್ (ಒಟಿಪಿ) ಬರುತ್ತದೆ.
* ಆಧಾರ್ ದಾಖಲೆ ಪರಿಶೀಲನೆ ಮಾಡಲು ಒಟಿಪಿ ಬಳಸಲಾಗುತ್ತದೆ. 15 ಅಂಕಿಗಳ ಸ್ವೀಕೃತಿ ಅಂಕಿಗಳನ್ನುನಮೂದಿಸಿದ ಬಳಿಕ ಇ-ಪ್ಯಾನ್ ಡೌನ್ ಲೋಡ್ ಗೆ ಲಭ್ಯವಾಗಲಿದೆ. ತಕ್ಷಣವೇ ಡೌನ್ ಲೋಡ್ ಮಾಡಿಕೊಳ್ಳಬಹುದು.
* ಇದರ ಜೊತೆಗೆ ಆಧಾರ್- ಪ್ಯಾನ್ ಜೊತೆ ನಮೂದಿಸಿರುವ ಅಧಿಕೃತ ಇಮೇಲ್ ಖಾತೆಗೆ ಖೂಡಾ ಇ-ಪ್ಯಾನ್ ಡೌನ್ ಲೋಡ್ ಮಾಡಲು ಸಂದೇಶ ಬರುತ್ತದೆ.

ಇ ಪ್ಯಾನ್ ಪಡೆಯುವ ವಿಧಾನ ಕಾಗದ ರಹಿತ
ಕೇಂದ್ರ ನೇರ ತೆರಿಗೆ ಬೋರ್ಡ್ (ಸಿಬಿಡಿಟಿ) ಪ್ರಕಟಣೆಯಂತೆ ಇ ಪ್ಯಾನ್ ಪಡೆಯುವ ವಿಧಾನ ಕಾಗದ ರಹಿತವಾಗಿದೆ ಹಾಗೂ ಇದು ಸಂಪೂರ್ಣ ಉಚಿತವಾಗಿದೆ. ಪ್ಯಾನ್ ಹಾಗೂ ಆಧಾರ್ ಜೋಡಣೆಗೆ ಜೂನ್ 30, 2020 ಕೊನೆ ದಿನಾಂಕವಾಗಿದೆ.

ಎಷ್ಟು ಇ ಪ್ಯಾನ್ ವಿತರಣೆಯಾಗಿದೆ
ಫೆಬ್ರವರಿ ತಿಂಗಳಿನಿಂದ ಮೇ 25ರ ತನಕ ಸುಮಾರು 6,77,680 Insta Pan ಅಥವಾ ಇ ಪ್ಯಾನ್ ಗಳನ್ನು ವಿತರಿಸಲಾಗಿದೆ. ಒಟ್ಟಾರೆ, 50.52 ಕೋಟಿ ಪ್ಯಾನ್ ಗಳನ್ನು ತೆರಿಗೆದಾರರಿಗೆ ನೀಡಲಾಗಿದೆ. ಈ ಪೈಕಿ 49.39 ವೈಯಕ್ತಿಕ ನಂಬರ್ ಗಳಾಗಿವೆ, 32.17 ಕೋಟಿಗೂ ಅಧಿಕ ನಂಬರ್ ಆಧಾರ್ ಜೊತೆ ಜೋಡಣೆಯಾಗಿವೆ.

ಆದಾಯ ತೆರಿಗೆ ಕಾಯ್ದೆ ಏನು ಹೇಳುತ್ತದೆ
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139 ಎಎ(2) ಪ್ರಕಾರ ಎಲ್ಲಾ ಪ್ಯಾನ್ ಕಾರ್ಡ್ ಬಳಕೆದಾರರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಬೇಕು ಎಂದು 2017ರ ಜುಲೈ 1ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 272 ಬಿ ಅಡಿಯಲ್ಲಿ ನಿಗದಿತ ಗಡುವು ಮುಗಿದ ನಂತರ ಪಾನ್ ಜೊತೆ ಆಧಾರ್ ಲಿಂಕ್ ಆಗಿಲ್ಲವೆಂದರೆ ಅಂಥ ಪಾನ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುವುದು, ಯಾವುದೇ ವ್ಯವಹಾರಕ್ಕೂ ಬಳಸಲು ಸಾಧ್ಯವಾಗುವುದಿಲ್ಲ. ಇ ಪ್ಯಾನ್ ವಿತರಣೆ ಬಗ್ಗೆ 2020ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು.












Click it and Unblock the Notifications