• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಷೇರುಪೇಟೆಯಲ್ಲಿ ದಿನಕ್ಕೆ 10ರಿಂದ 20% ಲಾಭ; ಯಾರು, ಹೇಗೆ ಮಾಡಿದರು?

By ಕೆ.ಜಿ. ಕೃಪಾಲ್
|

"ಷೇರು ಮಾರ್ಕೆಟ್ ನಿಂದ ದೂರ ಇರಿ, ನಿಮ್ಮ ಬಂಡವಾಳ ಉಳಿಸಿಕೊಳ್ಳಿ. ನಗದು ಇಟ್ಟುಕೊಂಡಿದ್ದರೆ ಎಂದಾದರೂ ಒಂದು ದಿನ ಲಾಭ ಮಾಡಬಹುದು". - ಹೀಗೆ ಸಲಹೆ ನೀಡುವ ಹಾಗೂ ಆಲೋಚನೆ ಮಾಡುವ ವರ್ಗ ಒಂದಿದೆ.

"ಈಗಲ್ಲದಿದ್ದರೆ ಇನ್ಯಾವಾಗ? ಇದು Now or Never ಸನ್ನಿವೇಶ. ವರ್ಷಗಳ ಕಾಲ ತೆಗೆದುಕೊಂಡು ಏರಿಕೆಯಾಗುತ್ತಿದ್ದ ಷೇರುಗಳ ಮೌಲ್ಯ ಈಗ ವಾರದಲ್ಲಿ, ಅಷ್ಟೇ ಏಕೆ ಒಂದು ದಿನದಲ್ಲಿ ಆಗುತ್ತಿದೆ. ಈ ಸಮಯ ಬಳಸಿಕೊಂಡು ಹಣ ಮಾಡಿಕೊಳ್ಳಿ" ಎನ್ನುತ್ತಿದೆ ಮತ್ತೊಂದು ವರ್ಗ.

ರಾಷ್ಟ್ರವ್ಯಾಪ್ತಿ ಲಾಕ್‌ಡೌನ್‌ ನಡುವೆ ಏರಿಕೆ ದಾಖಲಿಸಿದ ಷೇರುಪೇಟೆ: ಸೆನ್ಸೆಕ್ಸ್ 1,860 ಪಾಯಿಂಟ್ಸ್ ಜಿಗಿತ

ಈ ಎರಡೂ ಬಗೆಯ ಸಲಹೆ ಕೇಳಿಸಿಕೊಂಡು ಗೊಂದಲದಲ್ಲಿ ಇದ್ದೀರಾ? ಒಂದು ಕಡೆ ಕೊರೊನಾ, ಮತ್ತೊಂದು ಕಡೆ ಆರ್ಥಿಕ ಕುಸಿತದ ಮುನ್ಸೂಚನೆಯ ಎಚ್ಚರಿಕೆ. ಏನಾಗುತ್ತಿದೆ ಷೇರು ಪೇಟೆಯಲ್ಲಿ? ನಾವು ಏನು ಮಾಡಬೇಕು? ಈ ಬಗ್ಗೆ ನಾವು ತಿಳಿದುಕೊಳ್ಳುವುದಾದರೂ ಹೇಗೆ? ಅಂತೆಲ್ಲ ಯೋಚಿಸುತ್ತಿರುವವರಿಗಾಗಿಯೇ ಈ ಲೇಖನ.

ಷೇರು ಪೇಟೆ ಚಲನೆ ರೀತಿಯನ್ನು ಗಮನಿಸಿದಾಗ ಚಂಚಲತೆ ಅರಿವಾಗುತ್ತದೆ. ಮಾರ್ಚ್ 24ನೇ ತಾರೀಕು ಸೆನ್ಸೆಕ್ಸ್ 25,638 ಕುಸಿದು, ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿತು. ಆದರೆ 25ನೇ ತಾರೀಕು 28,535 ಪಾಯಿಂಟುಗಳಿಗೆ ತಲುಪಿ, ಸುಮಾರು 2,896 ಪಾಯಿಂಟುಗಳ ಏರಿಕೆಯನ್ನು ಕಂಡಿದೆ ಅಂದರೆ ಶೇಕಡಾ 10ಕ್ಕೂ ಹೆಚ್ಚಿನ ಏರಿಕೆಯನ್ನು ಕಂಡಿದೆ. ಆದರೆ ಕೆಲವು ಅಗ್ರಮಾನ್ಯ ಕಂಪೆನಿಗಳ ಬೆಲೆ ಏರಿಕೆಯು ಇದಕ್ಕೂ ಹೆಚ್ಚಾಗಿತ್ತು.

ನಾಳೆ ಷೇರು ಮಾರ್ಕೆಟ್ ಏನಾಗುತ್ತೆ ಎಂದು ಕೇಳುವವರಿಗಾಗಿಯೇ ಈ ಲೇಖನ

ಇದು ಪೇಟೆಯ ಚಂಚಲತೆ ವೇಗವನ್ನು ತಿಳಿಸುತ್ತದೆ. ಕಳೆದ ಫೆಬ್ರವರಿ 20ರಿಂದ ನಿರಂತರವಾಗಿ, ಏಕಮುಖವಾಗಿ ಮಾರಾಟದ ಹಾದಿಯಲ್ಲಿ ಸಾಗುತ್ತಿರುವ ವಿದೇಶಿ ವಿತ್ತೀಯ ಸಂಸ್ಥೆಗಳ ಮಾರಾಟದ ಭರಾಟೆಯನ್ನು ಎದುರಿಸಲು ಸ್ವದೇಶಿ ವಿತ್ತೀಯ ಸಂಸ್ಥೆಗಳು ಸನ್ನದ್ಧವಾಗಿವೆ ಎಂದರೆ ಫೆಬ್ರವರಿ 24ರಿಂದ ನಿರಂತರವಾಗಿ ಏಕಮುಖವಾಗಿ ಖರೀದಿಯ ಹಾದಿಯಲ್ಲಿ ಸಾಗಿ ಪೇಟೆಯನ್ನು ಬೆಂಬಲಿಸಿವೆ.

ಅಂದರೆ ಇದೊಂದು ರೀತಿಯ ಸ್ವದೇಶಿ ಆಂದೋಲನ ಎಂಬಂತಾಗಿದೆ. ಕೇವಲ ಎರಡೇ ತಿಂಗಳಲ್ಲಿ 16,635 ಪಾಯಿಂಟುಗಳ ಭಾರಿ ಕುಸಿತ ಪ್ರದರ್ಶಿಸಿದ ಸೆನ್ಸೆಕ್ಸ್ ಸದ್ಯದ ಪರಿಸ್ಥಿತಿಯಲ್ಲಿ ತಳ ಮಟ್ಟವನ್ನು ತಲುಪಿದೆ ಎನ್ನಬಹುದಾಗಿದೆ. ಬುಧವಾರದ ಏರಿಕೆಗೆ ಗುರುವಾರವು ಡೆರಿವೇಟಿವ್ ಪೇಟೆಯ ಚುಕ್ತಾ ದಿನವಾಗಿರುವುದು ಸಹ ಇದಕ್ಕೆ ಕಾರಣವಾಗಿದೆ.

ಏನಾಯಿತು, ಹೇಗಾಯಿತು ಬುಧವಾರ ಷೇರು ಮಾರ್ಕೆಟ್ ವ್ಯವಹಾರ ಎಂಬುದಕ್ಕೆ ಇಲ್ಲಿವೆ ನಿದರ್ಶನಗಳು.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ಈ ಕಂಪೆನಿ ಮೂಲತಃ ಟೆಕ್ಸ್ ಟೈಲ್ಸ್ ವಿಭಾಗದಲ್ಲಿದ್ದರೂ ಟೆಲಿಕಾಂ ಮತ್ತು ಇಂಧನ ವಿಭಾಗದಲ್ಲೂ ಮಹತ್ತರ ಪಾತ್ರ ವಹಿಸಿದೆ. ಕಳೆದ ಎರಡು ತ್ರೈಮಾಸಿಕಗಳಲ್ಲಿ ತಲಾ ಹತ್ತು ಸಾವಿರ ಕೋಟಿ ಲಾಭ ಗಳಿಸಿದೆ. ರು. 10 ಲಕ್ಷ ಕೋಟಿ ಮಾರ್ಕೆಟ್ ಕ್ಯಾಪಿಟಲ್ ತಲುಪಿದ ಭಾರತದ ಪ್ರಥಮ ಕಂಪೆನಿಯಾಗಿದೆ. ಕೇವಲ ಎರಡೇ ತಿಂಗಳಲ್ಲಿ ಈ ಕಂಪೆನಿಯ ಮಾರುಕಟ್ಟೆ ಬಂಡವಾಳ ಶೇಕಡಾ 40ಕ್ಕೂ ಹೆಚ್ಚು ಕುಸಿದು, ರು. 6.85 ಲಕ್ಷ ಕೋಟಿಯಲ್ಲಿದೆ. ಉತ್ತಮ ಕಂಪೆನಿಯ ಪರಿಸ್ಥಿತಿಯೇ ಈ ಮಟ್ಟಕ್ಕೆ ಕುಸಿದಿರುವುದು ಪೇಟೆಯ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಮಾರ್ಚ್ 25ರಂದು ಷೇರಿನ ಬೆಲೆಯೂ ರು. 1090ರವರೆಗೂ ಪುಟಿದೆದ್ದು, ಅನೇಕ ನಿಧಿಗಳ, ಹೂಡಿಕೆದಾರರ ಮನಸ್ಸಿಗೆ ಜೀವತುಂಬಿದಂತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಾವು ಮಾರ್ಚ್ ಅಂತ್ಯದಲ್ಲಿದ್ದೇವೆ. ಜತೆಗೆ ವರ್ಷಾಂತ್ಯದದಲ್ಲಿ ಇದ್ದೇವೆ. ಕಂಪೆನಿಯು ತನ್ನ ಫಲಿತಾಂಶವನ್ನು ಪ್ರಕಟಿಸುವ ಸಮಯ ಸಮೀಪಿಸುತ್ತಿದೆ. ಶೇಕಡಾ 24.55ರಷ್ಟು ಭಾಗಿತ್ವವನ್ನು ವಿದೇಶಿ ವಿತ್ತೀಯ ಸಂಸ್ಥೆಗಳು, ಶೇಕಡಾ 6.51ರಷ್ಟು ಭಾಗಿತ್ವವನ್ನು ವಿಮಾ ಕಂಪೆನಿಗಳು ಹೊಂದಿವೆ. ಈ ಕಂಪೆನಿಯ ಷೇರಿನ ಬೆಲೆ ಭಾರಿ ಕುಸಿತಕ್ಕೆ ಒಳಗಾಗಿರುವುದು ಉತ್ತಮ ವ್ಯಾಲ್ಯೂ ಪಿಕ್ ಆಗಿ, ಚುರುಕಾದ ಏರಿಕೆ ಪ್ರದರ್ಶಿಸಿದೆ. ಕೇವಲ ಎರಡೇ ದಿನಗಳಲ್ಲಿ ಶೇಕಡಾ 25ಕ್ಕೂ ಹೆಚ್ಚಿನ ಏರಿಕೆ ಕಂಡಿರುವುದು, ಅರ್ಹತೆಯನ್ನು ಮೀರಿ ಮಾರಾಟ ಮಾಡಿರುವುದಾಗಿದೆ.

ಟೈಟಾನ್ ಕಂಪನಿ ಲಿಮಿಟೆಡ್

ಟೈಟಾನ್ ಕಂಪನಿ ಲಿಮಿಟೆಡ್

ವಜ್ರಾಭರಣ ವಲಯದ ಈ ಕಂಪೆನಿಯ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರು. 1296ರ ಸಮೀಪದಿಂದ ಜಾರಿ, ರು. 720ರ ವಾರ್ಷಿಕ ಕನಿಷ್ಠಕ್ಕೆ ಕುಸಿದಿತ್ತು. ಕಳೆದ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದ್ದ ಈ ಕಂಪೆನಿ ಜಾಗತಿಕ ಮಟ್ಟದ ಕೊರೊನಾ ವೈರಸ್ ಪ್ರಭಾವದ ಕಾರಣ ಕುಸಿದಿದೆ. ದಿನದ ಕನಿಷ್ಠ ರು. 720ರಿಂದ ಬುಧವಾರದಂದು ರು. 897ರವರೆಗೂ ಏರಿಕೆ ಕಂಡಿರುವುದು ಕಂಪೆನಿಯಲ್ಲಿ ಅಡಕವಾಗಿರುವ ಮೌಲ್ಯಗಳಿಗೆ ನೀಡಿದ ಮನ್ನಣೆಯಾಗಿದೆ. ಒಂದೇ ದಿನದಲ್ಲಿ ಶೇಕಡಾ 20ಕ್ಕೂ ಹೆಚ್ಚಿನ ಏರಿಕೆ ಕಂಡಿದೆ.

ಮಾರುತಿ ಸುಜುಕಿ ಲಿಮಿಟೆಡ್

ಮಾರುತಿ ಸುಜುಕಿ ಲಿಮಿಟೆಡ್

ಈ ಕಂಪೆನಿಯ ಷೇರಿನ ಬೆಲೆ ರು. 4038ರ ವರೆಗೂ ಕುಸಿದು, ವಾರ್ಷಿಕ ಕನಿಷ್ಠಕ್ಕೆ ಕುಸಿದಿತ್ತು. ಕಳೆದ ಒಂದು ತಿಂಗಳಲ್ಲಿ ರು. 6500ರ ಸಮೀಪದಿಂದ ರು. 4 ಸಾವಿರದವರೆಗೂ ಕುಸಿದಿದೆ. ಸುಮಾರು ಶೇಕಡಾ 23.18ರಷ್ಟು ಭಾಗಿತ್ವವನ್ನು ವಿದೇಶಿ ವಿತ್ತೀಯ ಸಂಸ್ಥೆಗಳು ಹೊಂದಿವೆ. ಈ ಕಂಪೆನಿ ಕೊರೋನಾ ವೈರಸ್ ಪ್ರಭಾವವನ್ನು ಎದುರಿಸಲು ಅವಶ್ಯವಿರುವ 'ವೆಂಟಿಲೇಟರ್' ಗಳ ತಯಾರಿ ನಡೆಸಿದೆ ಎಂಬ ಕಾರಣವೂ ಈ ಕಂಪೆನಿಯ ಷೇರಿನ ಬೆಲೆ ಒಂದೇ ದಿನದಲ್ಲಿ ಸುಮಾರು 25ರಷ್ಟು ಏರಿಕೆ ಕಾಣುವಂತೆ ಮಾಡಿರಬಹುದು.

ಐಸಿಐಸಿಐ ಬ್ಯಾಂಕ್ ಲಿಮಿಟೆಡ್

ಐಸಿಐಸಿಐ ಬ್ಯಾಂಕ್ ಲಿಮಿಟೆಡ್

ಈ ಷೇರಿನ ಬೆಲೆ ರು. 269ರ ವರೆಗೂ ಕುಸಿದು, ವಾರ್ಷಿಕ ಕನಿಷ್ಠ ದಾಖಲಿಸಿತು. ಸೋಜಿಗವೆಂದರೆ ಒಂದು ತಿಂಗಳಲ್ಲಿ ರು. 538ರಿಂದ ರು. 269ಕ್ಕೆ ಅಂದರೆ ಸರಿಯಾಗಿ ಅರ್ಧ ಬೆಲೆಗೆ ಕುಸಿದಿದೆ. ಬುಧವಾರ ಈ ಷೇರಿನ ಬೆಲೆ ರು. 330ರವರೆಗೂ ಏರಿಕೆ ಕಂಡು, ರು. 317ರ ಸಮೀಪ ಕೊನೆಗೊಂಡಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ಶೇಕಡಾ 45.81ರಷ್ಟು, ಮ್ಯೂಚುವಲ್ ಫಂಡ್ ಗಳು ಶೇಕಡಾ 25.98ರಷ್ಟು, ವಿಮಾ ಕಂಪೆನಿಗಳು ಶೇಕಡಾ 15.14ರಷ್ಟು ಭಾಗಿತ್ವವನ್ನು ಹೊಂದಿವೆ. ಈ ಕಂಪೆನಿಯು ವೃತ್ತಿಪರರಿಂದ ನಡೆಸಲಾಗುತ್ತಿದ್ದು, ಪ್ರವರ್ತಕರಿಲ್ಲ.

ಇಂಡಸ್ ಇಂಡ್ ಬ್ಯಾಂಕ್ ಲಿಮಿಟೆಡ್

ಇಂಡಸ್ ಇಂಡ್ ಬ್ಯಾಂಕ್ ಲಿಮಿಟೆಡ್

ಈ ಕಂಪೆನಿಯ ಗಮನ ಸೆಳೆಯುವ ವಿಚಾರವೆಂದರೆ, ಒಂದೇ ತಿಂಗಳಲ್ಲಿ ರು. 1182ರ ಸಮೀಪದಿಂದ ರು. 235ರ ಸಮೀಪಕ್ಕೆ ಏಕಮುಖವಾಗಿ ಕುಸಿದಿದೆ. ಮಾರ್ಚ್ 24ರಂದು ರು. 235ರ ಸಮೀಪ ಕೆಳಗಿನ ಸರ್ಕ್ಯೂಟ್ ನಲ್ಲಿದ್ದ ಕಂಪೆನಿ ಅಂದೇ ರು. 340ರವರೆಗೂ ಏರಿಕೆ ಕಂಡು ಬೆರಗಾಗಿಸಿದೆ. ಈ ಕಂಪೆನಿಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಶೇಕಡಾ 55.22ರಷ್ಟು ಭಾಗಿತ್ವ ಹೊಂದಿದ್ದು, ಟೆಲಿಕಾಂ ಕಂಪೆನಿಗಳಿಗೆ ಹೆಚ್ಚಿನ ಹಣ ಸಾಲ ನೀಡಿರುವುದು ಈ ಕಂಪೆನಿಯ ಬೆಳವಣಿಗೆಗೆ ಅಪಾಯಕರ ಎಂಬ ಕಾರಣಕ್ಕೆ ಈ ಕುಸಿತ ಉಂಟಾಗಿದೆ. ಒಂದೇ ದಿನ ಷೇರಿನ ಬೆಲೆ ರು. 235ರಿಂದ ರು. 340ರ ವರೆಗೂ ಪುಟಿದೆದ್ದಿದೆ.

ಬಜಾಜ್ ಫೈನಾನ್ಸ್ ಲಿಮಿಟೆಡ್

ಬಜಾಜ್ ಫೈನಾನ್ಸ್ ಲಿಮಿಟೆಡ್

ಇದು ನಾನ್ ಬ್ಯಾಂಕಿಂಗ್ ಫೈನಾನ್ಸ್ ವಲಯದ ಕಂಪೆನಿ. ಕಳೆದ ಒಂದು ತಿಂಗಳಲ್ಲಿ ರು. 4,837ರ ಸಮೀಪದಲ್ಲಿದ್ದಂತಹ ಈ ಕಂಪೆನಿ ಷೇರು ರು. 2105ಕ್ಕೆ ಕುಸಿದು ವಾರ್ಷಿಕ ಕನಿಷ್ಟಕ್ಕೆ ಜಾರಿದೆ. ಕೇವಲ ಒಂದು ತಿಂಗಳ ಹಿಂದೆ, ಅಂದರೆ ಫೆಬ್ರವರಿ 20ರಂದು ರು. 4923ರ ವಾರ್ಷಿಕ ಗರಿಷ್ಠ ದಾಖಲಿಸಿ, ಈ ಪರಿಯ ಭರ್ಜರಿ ಕುಸಿತವನ್ನು ಕೇವಲ ಒಂದೇ ತಿಂಗಳಲ್ಲಿ ಪ್ರದರ್ಶಿಸಿರುವುದಕ್ಕೆ ಹೂಡಿಕೆದಾರರಲ್ಲಿ ಮೂಡಿರುವ ಭಯವೇ ಕಾರಣವಿರಬೇಕು. ಶೇಕಡಾ 60ಕ್ಕೂ ಹೆಚ್ಚು ಕುಸಿತ ಕಂಡ ಕಂಪೆನಿ, ಒಂದೇ ದಿನದ ಅಂತರದಲ್ಲಿ ರು. 500ರಷ್ಟು ಏರಿಕೆ ಕಂಡಿರುವುದು ಮೌಲ್ಯಾಧಾರಿತ ಖರೀದಿ ಕಾರಣಕ್ಕೆ ಇರಬಹುದು.

ಯುಪಿಎಲ್ ಲಿಮಿಟೆಡ್

ಯುಪಿಎಲ್ ಲಿಮಿಟೆಡ್

ಆಗ್ರೋ ಕೆಮಿಕಲ್ಸ್ ವಲಯದ ಈ ಕಂಪೆನಿ ಷೇರಿನ ಬೆಲೆ ಒಂದು ತಿಂಗಳಲ್ಲಿ ರು. 569ರ ಸಮೀಪದಿಂದ 23ರಂದು ರು. 240ರ ಸಮೀಪಕ್ಕೆ ಕುಸಿದಿದೆ. ವಿಚಿತ್ರವೆಂದರೆ, ಬುಧವಾರ ರು. 299ರವರೆಗೂ ಏರಿಕೆ ಕಂಡು, ರು. 292ರ ಸಮೀಪಕ್ಕೆ ಕೊನೆಗೊಂಡಿದೆ. ಅಂದರೆ ಎರಡೇ ದಿನಗಳಲ್ಲಿ ರು. 52ರಷ್ಟು ಏರಿಕೆ ಕಂಡಿದೆ. ಅಲ್ಪಾವಧಿಯಲ್ಲಿ ಶೇ. 20ಕ್ಕೂ ಹೆಚ್ಚಿನ ಏರಿಕೆ ಕಂಡಿರುವುದು ಅಲ್ಪಾವಧಿಯಲ್ಲೇ ಷೇರುಪೇಟೆ ಹೇಗೆ ಸೃಷ್ಟಿಸಿಕೊಡುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಆದರೆ, ಷೇರುಪೇಟೆಯಲ್ಲಿ ವ್ಯವಹಾರ ಮಾಡುವಾಗ ಸಮಯ- ಸುದ್ದಿಯ ಜತೆಗೆ ಓಡುವ, ದೊಡ್ಡ ಸುನಾಮಿ- ಬಿರುಗಾಳಿ ಎದುರು ನಿಂತು ಧೈರ್ಯದಿಂದ ಇರುವುದು ಸಹ ಮುಖ್ಯ. ಹೀಗೆ ಪೇಟೆಗಳು ಭಾರಿ ಕುಸಿತ ಕಂಡಿರುವಾಗ ಈ ಅಲ್ಪ ಬಡ್ಡಿ ದರದ ಯುಗದಲ್ಲಿ ಷೇರುಪೇಟೆಯ ಅಗ್ರಮಾನ್ಯ ಕಂಪೆನಿಗಳು ಇಂತಹ ಮಟ್ಟದ ಲಾಭವನ್ನು ಗಳಿಸಿಕೊಡುತ್ತದೆ ಎಂಬುದರ ನಿದರ್ಶನವಿದಾಗಿದೆ. ಬ್ಯಾಂಕ್ ಬಡ್ಡಿ ದರ ಇಳಿಕೆ, ಕೊರೊನಾ ವೈರಸ್ ಕಾರಣಕ್ಕೆ ಲಾಕ್ ಡೌನ್ ಆಗಿರುವ ಈಗಿನ ದಿನಗಳಲ್ಲಿ ಷೇರುಪೇಟೆಯು ಭಾರಿ ಕುಸಿತ ಕಂಡಿರುವುದರಿಂದ ಸ್ವಲ್ಪ ಬುದ್ಧಿವಂತಿಕೆ, ಮಾರ್ಗದರ್ಶನಗಳ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಲು ಪ್ರಯತ್ನಿಸಬಹುದು. ಅಗ್ರಮಾನ್ಯ ಕಂಪೆನಿಗಳಲ್ಲಿ ಭಾರಿ ಕುಸಿತ ಕಂಡಾಗ ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡು, ಅನಿರೀಕ್ಷಿತವಾಗಿ ಸುಮಾರು 15 ರಿಂದ 20ರಷ್ಟು ಲಾಭವನ್ನು ಅಲ್ಪಕಾಲೀನದಲ್ಲಿ ದೊರೆತಾಗ ಈ ಸೂಕ್ಷ್ಮವಾದ ಪರಿಸ್ಥಿತಿಯಲ್ಲಿ ಲಾಭವನ್ನು ನಗದೀಕರಿಸಿಕೊಳ್ಳುವುದು ಉತ್ತಮ.

English summary
Corona virus impact on stock market, investors become panic. But still possibility for getting profit, Here is an explainer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X