Gold: ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ: ಬರೋಬ್ಬರಿ ₹24,500 ಇಳಿಕೆ; ಆಭರಣ ಪ್ರಿಯರಿಗೆ ನೆಮ್ಮದಿ
ಬೆಂಗಳೂರು: ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರವುಇತ್ತೀಚಿನ ದಿನಗಳಲ್ಲಿ ಭಾರಿ ಏರಿಳಿತ ಕಾಣುತ್ತಿದೆ. 2025ರಲ್ಲಿ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದ್ದ ಬಂಗಾರದ ಬೆಲೆ 2026ರ ಜನವರಿಯಲ್ಲಿ 10 ಗ್ರಾಂಗೆ ರೂಪಾಯಿ 1,80,779 ತಲುಪಿ ದಾಖಲೆ ಸೃಷ್ಟಿಸಿತ್ತು. ಇದೀಗ ಅದರ ಬೆಲೆಯಲ್ಲಿ ಸುಮಾರು ರೂಪಾಯಿ 24,500 ಕುಸಿದಿದ್ದು, ಬರೋಬ್ಬರಿ 13.50ರಷ್ಟು ಕಡಿಮೆ ಆಗಿದೆ. ಸದ್ಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 1,56,200 ರೂಪಾಯಿಗೆ ಇಳಿದಿದೆ. ದರ ಕುಸಿತಕ್ಕೆ ಕಾರಣವೇನು?
ಚಿನ್ನದ ಬೆಲೆ ಇಳಿಕೆಗೆ ಕಾರಣ ಇಲ್ಲಿದೆ
ಭಾರತದಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಶೇಕಡಾ 10.50 ರಷ್ಟು ಗಣನೀಯವಾಗಿ ಕುಸಿದಿದೆ. ಇದಕ್ಕೆ ವಿವಿಧ ಕಾರಣಗಳಲ್ಲಿ ಪ್ರಮುಖವಾದದ್ದು ರಷ್ಯಾ ಮತ್ತು ಅಮೆರಿಕದ ಸ್ನೇಹ ಸಂಬಂಧ. ರಷ್ಯಾ ದೇಶವು ಮತ್ತೆ ವಿಶ್ವದ ದೊಡ್ಡಣ್ಣ ದೇಶ ಅಮೆರಿಕದೊಂದಿಗೆ ಆರ್ಥಿಕ ಸಂಬಂಧ ಬೆಳೆಸಲು ಮತ್ತು ವ್ಯಾಪಾರದಲ್ಲಿ 'ಯುಎಸ್ ಡಾಲರ್' ಬಳಸಲು ಒಳವು ವ್ಯಕ್ತಪಡಿಸಿದೆ. ಮಹತ್ವದ ಒಪ್ಪಂದ ಏರ್ಪಡುವ ನಿರೀಕ್ಷೆ ಇದೆ. ಈ ವರದಿಗಳು ಪ್ರಕಟವಾಗುತ್ತಿದ್ದಂತೆ ಚಿನ್ನದ ಬೆಲೆ ಇಳಿಕೆ ಆಗಲು ಶುರುವಾಗಿದೆ.

ರಷ್ಯಾ ಸೇರಿದಂತೆ 'ಬ್ರಿಕ್ಸ್' (BRICS) ರಾಷ್ಟ್ರಗಳು ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಿ ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುತ್ತಿದ್ದವು. ಆದರೆ ರಷ್ಯಾ ಮತ್ತೆ ಡಾಲರ್‌ಗೆ ಮರಳಿದರೆ, ಜಾಗತಿಕವಾಗಿ ಚಿನ್ನದ ಬೇಡಿಕೆ ಕುಸಿಯಲಿದೆ ಎಂಬ ಆತಂಕ ಹೂಡಿಕೆದಾರರಲ್ಲಿ ಮೂಡಿದೆ. ಇದರಿಂದ ಚಿನ್ನ ಮಾರಾಟಕ್ಕೂ ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ಚಿನ್ನದ ಲಭ್ಯತೆ ಹೆಚ್ಚಾಗುತ್ತಿದ್ದಂತೆ ದರ ಇಳಿಕೆ ಆಗುವುದು ಸಹಜ.
ಡಾಲರ್ ಬಲವಾದರೆ ಚಿನ್ನದ ಬೆಲೆ ಕುಸಿತ
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಜಾಗತಿಕ ಕೇಂದ್ರೀಯ ಬ್ಯಾಂಕುಗಳ ಚಿನ್ನದ ಖರೀದಿ ಪ್ರಮಾಣದಲ್ಲಿ ಏರಿಕೆ ಆಗಿತ್ತು. ಆದರೆ ಈಗ ರಷ್ಯಾ-ಉಕ್ರೇನ್ ಯುದ್ಧದ ಅಂತ್ಯ ಮತ್ತು ಶಾಂತಿ ಒಪ್ಪಂದದ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿರುವುದು ಹೂಡಿಕೆದಾರರ ಚಿತ್ತವನ್ನು ಬದಲಾಯಿಸಿದೆ. ಮಾತ್ರವಲ್ಲದೇ ಅಮೆರಿಕದಲ್ಲಿ ಹಣದುಬ್ಬರ ಏರಿಕೆ ಆಗಿತ್ತಿದ್ದು, ಡಾಲರ್ ಮೌಲ್ಯ ಮತ್ತೆ ಬಲಗೊಳ್ಳುವ ಸಮಯ ಸಮೀಪಿಸುತ್ತಿದೆ. ಡಾಲರ್ ಬಲವಾದಷ್ಟೂ ಚಿನ್ನದ ಬೆಲೆ ಇಳಿಕೆಯಾಗುವುದು ವಾಡಿಕೆ.
ಒಟ್ಟಾರೆಯಾಗಿ, ರಷ್ಯಾದ ನಡೆಯು ಬ್ರಿಕ್ಸ್ ರಾಷ್ಟ್ರಗಳ 'ಡಿ-ಡಾಲರೀಕರಣ' ಪ್ರಯತ್ನಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಗೊಂದಲ ಇರುವ ಕಾರಣದಿಂದಾಗಿ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿಯುತ್ತದೆಯೇ ಅಥವಾ ಚೇತರಿಸಿಕೊಳ್ಳುತ್ತದೆಯೇ ಎಂಬುದು ರಷ್ಯಾದ ಅಧಿಕೃತ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿದೆ. ಒಪ್ಪಂದ ಏರ್ಪಟ್ಟಲ್ಲಿ ಚಿನ್ನದ ಬೆಲೆ ಮೊದಲಿನ ಸ್ಥಿತಿಗೆ ಬರಬಹುದು. ಇಲ್ಲವೇ ಯಥಾಸ್ಥಿತಿ ಕಾಯ್ದುಕೊಳ್ಳಬಹುದು.
ವಿಶೇಷ ಸೂಚನೆ: ಹೂಡಿಕೆದಾರರು ನೀವು ಚಿನ್ನದಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಮಾರುಕಟ್ಟೆಯ ಸ್ಥಿರತೆ, ತಜ್ಞರ ಸಹಲೆಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.












Click it and Unblock the Notifications