ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರಿಗೆ ಕೊಂಚ ನಿರಾಳ: ಪ್ರತಿ ಲೀಟರ್ ಅಡುಗೆ ಎಣ್ಣೆ ದರ 15 ರು. ಕಡಿತಕ್ಕೆ ಕೇಂದ್ರ ಸೂಚನೆ

|
Google Oneindia Kannada News

ನವದೆಹಲಿ, ಜುಲೈ 08: ಸತತ ದರ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಕೊಂಚ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಖಾದ್ಯ ತೈಲಗಳ ಬೆಲೆಯನ್ನು15 ರುಪಾಯಿ ಕಡಿತಗೊಳಿಸುವಂತೆ ಖಾದ್ಯ ತೈಲ ತಯಾರಕರ ಸಂಘಗಳಿಗೆ ಸೂಚನೆ ನೀಡಿದೆ. ತಕ್ಷಣವೇ ದರ ಇಳಕೆ ಮಾಡುವಂತೆ ಕೇಂದ್ರ ಸೂಚನೆ ನೀಡಿದ್ದರೂ ಬಹುತೇಕ ಇನ್ನೊಂದು ವಾರದಲ್ಲಿ ದರ ಪರಿಷ್ಕರಣೆಯಾಗಲಿದೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಸಾಮಾನ್ಯ ಸಭೆಯಲ್ಲಿ ಖಾದ್ಯ ತೈಲ ತಯಾರಕರ ಸಂಘಗಳಾದ ಎಸ್‌ಇಎಐ, ಐವಿಪಿಎ ಮತ್ತು ಎಸ್‌ಒಪಿಎ ಸೇರಿದಂತೆ ಪ್ರಮುಖ ಉದ್ಯಮ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಈ ಸೂಚನೆ ನೀಡಿದೆ. ಖಾದ್ಯ ತೈಲಗಳ ಬೆಲೆಗಳನ್ನು ತಕ್ಷಣವೇ ಕಡಿಮೆ ಮಾಡಿ ಮತ್ತು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ತಯಾರಕರು ಮತ್ತು ಸಂಸ್ಕರಣಾಗಾರರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

"ತಯಾರಕರು, ಸಂಸ್ಕರಣೆದಾರರು ವಿತರಕರಿಗೆ ಬೆಲೆಯಲ್ಲಿ ಕಡಿತವನ್ನು ಮಾಡಿದಾಗ, ಲಾಭವನ್ನು ಉದ್ಯಮದಿಂದ ಗ್ರಾಹಕರಿಗೆ ವರ್ಗಾಯಿಸಬೇಕು ಮತ್ತು ಇಲಾಖೆಗೆ ನಿಯಮಿತವಾಗಿ ಮಾಹಿತಿ ನೀಡಬೇಕು" ಎಂದು ಸಚಿವಾಲಯವು ಸೂಚನೆ ನೀಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕುಸಿತ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕುಸಿತ

ಕಳೆದ ಒಂದು ತಿಂಗಳಲ್ಲಿ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್‌ಗೆ 300-450 ಅಮೆರಿಕನ್ ಡಾಲರ್ ಗಳಷ್ಟು ಕಡಿಮೆಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಭಾರತವು ತನ್ನ ವಾರ್ಷಿಕವಾಗಿ ಒಟ್ಟು ಬಳಕೆಯ ಶೇಕಡ 56 ರಷ್ಟು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹಾಗಾಗಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಯಲ್ಲಿನ ಕುಸಿತವು ದೇಶೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಬೆಲೆಗಳ ಕುಸಿತವು ನಿರಂತರವಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಸ್ವಲ್ಪ ವಿಭಿನ್ನವಾಗಿದೆ. ಮಧ್ಯಪ್ರವೇಶಿಸಿದ ಭಾರತ ಸರ್ಕಾರ ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಎಸ್‌ಇಎಐ, ಐವಿಪಿಎ ಮತ್ತು ಎಸ್‌ಒಪಿಎ ಸೇರಿದಂತೆ ಪ್ರಮುಖ ಉದ್ಯಮ ಪ್ರತಿನಿಧಿಗಳೊಂದಿಗೆ ಸಭೆ ಕರೆದು ಜಾಗತಿಕ ಬೆಲೆಗಳ ಕುಸಿತದ ಮಧ್ಯೆ ಅಡುಗೆ ಎಣ್ಣೆಗಳ ಚಿಲ್ಲರೆ ಬೆಲೆಯಲ್ಲಿ ಕಡಿಮೆ ಮಾಡಲು ಸೂಚನೆ ನೀಡಿದೆ.

ಕಸ್ಟಮ್ಸ್ ಸುಂಕ ತೆಗೆದುಹಾಕಿರುವ ಕೇಂದ್ರ ಸರ್ಕಾರ

ಕಸ್ಟಮ್ಸ್ ಸುಂಕ ತೆಗೆದುಹಾಕಿರುವ ಕೇಂದ್ರ ಸರ್ಕಾರ

ಸಾಸಿವೆ, ಸೂರ್ಯಕಾಂತಿ, ಸೋಯಾಬೀನ್ ಮತ್ತು ತಾಳೆ ಎಣ್ಣೆ ಬೆಲೆಗಳು ಜೂನ್ 1 ರಿಂದ ದೇಶದಲ್ಲಿ ಶೇಕಡಾ 5 ರಿಂದ 11 ರಷ್ಟು ಕಡಿಮೆಯಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಒದಗಿಸಿದ ಅಂಕಿಅಂಶಗಳು ತಿಳಿಸಿವೆ. ಮೇ ತಿಂಗಳಲ್ಲಿ, ಸರ್ಕಾರವು 2022-23 ಮತ್ತು 2023-24 ರ ಎರಡು ಹಣಕಾಸು ವರ್ಷಗಳಿಗೆ ಪ್ರತಿ ವರ್ಷಕ್ಕೆ 20 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಆಮದಿನ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಅನ್ನು ಹಣಕಾಸು ಸಚಿವಾಲಯ ತೆಗೆದುಹಾಕಿದೆ.

ದರ ಪರಿಷ್ಕರಣೆಗೆ ಕಂಪನಿಗಳ ಸಮ್ಮತಿ

ದರ ಪರಿಷ್ಕರಣೆಗೆ ಕಂಪನಿಗಳ ಸಮ್ಮತಿ

ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ, "ನಾವು ವಿವರವಾದ ಪ್ರಸ್ತುತಿಯನ್ನು ನೀಡಿದ್ದೇವೆ ಮತ್ತು ಕಳೆದ ಒಂದು ವಾರದಲ್ಲಿ ಜಾಗತಿಕವಾಗಿ ಬೆಲೆಗಳು ಶೇಕಡಾ 10 ರಷ್ಟು ಕುಸಿದಿದೆ ಎಂದು ತಿಳಿಸಿದ್ದೇವೆ. ಇದನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಎಂಆರ್‌ಪಿ ಕಡಿಮೆ ಮಾಡುವಂತೆ ನಾವು ಕೇಳಿದ್ದೇವೆ" ಎಂದು ತಿಳಿಸಿದರು.

ಖಾದ್ಯ ತೈಲಗಳ ಎಲ್ಲಾ ಪ್ರಮುಖ ಉತ್ಪಾದಕರು-ಅದಾನಿ ವಿಲ್ಮರ್ ಮತ್ತು ರುಚಿ ಸೋಯಾ ಮುಂದಿನ 7-10 ದಿನಗಳಲ್ಲಿ ಚಿಲ್ಲರೆ ಬೆಲೆಗಳನ್ನು ಪರಿಷ್ಕರಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ದರ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನತೆ

ದರ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನತೆ

ದೇಶದಲ್ಲಿ ಸತತವಾಗಿ ಪೆಟ್ರೋಲ್, ಡೀಸೆಲ್ ಏರಿಕೆಯಿಂದ ಜನ ಕಂಗಾಲಾಗಿದ್ದರು. ಇದರ ಜೊತೆ ತರಕಾರಿ, ದಿನಸಿಗಳ ಬೆಲೆಯಲ್ಲಿನ ಹೆಚ್ಚಳ ಸಾಮಾನ್ಯನ ಜೇಬಿಗೆ ಕತ್ತರಿ ಹಾಕಿತ್ತು. ರಷ್ಯಾ-ಉಕ್ರೇನ್ ಯುದ್ಧ ಶುರುವಾದ ನಂತರ ಜಾಗತಿಕವಾಗಿ ಆದ ಬದಲಾವಣೆಯಲ್ಲಿ ಖಾದ್ಯ ತೈಲ ದರ ಕೂಡ ಹೆಚ್ಚಳ ಕಂಡಿತ್ತು.

ಕೇಂದ್ರ ಸರ್ಕಾರ ಇಂಧನ ತೈಲದ ಮೇಲೆ ಸುಂಕ ಕಡಿಮೆ ಮಾಡುವ ಮೂಲಕ ಪೆಟ್ರೋಲ್, ಡೀಸೆಲ್ ದರ ಕೊಂಚ ಇಳಿಕೆ ಕಂಡಿತ್ತು. ಈಗ ಅಡುಗೆ ಎಣ್ಣೆ ದರ ಕಡಿಮೆ ಮಾಡಲು ಸೂಚನೆ ನೀಡಿರುವುದು ಗ್ರಾಹಕರಿಗೆ ಕೊಂಚ ನಿರಾಳವೆನಿಸಿದೆ.

English summary
The Centre has asked the edible oil associations to ensure reduction in the maximum retail price of edible oils by up to Rs 15 per litre, with immediate effect. The edible oil prices in the international market are witnessing a dramatic fall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X