ನ.3 ಮತ್ತು 4ರಂದು ಪೆಟ್ರೋಲ್ ಬಂಕ್ ಮುಷ್ಕರ
ನವೆಂಬರ್ 3 ಮತ್ತು 4ರಂದು ದೇಶವ್ಯಾಪ್ತಿ ಪೆಟ್ರೋಲ್ ಬಂಕ್ ಮುಷ್ಕರ ಜತೆಗೆ ನವೆಂಬರ್ 5 ರಿಂದ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರವೇ ಪೆಟ್ರೋಲ್ ಬಂಕ್ಗಳು ಕಾರ್ಯನಿರ್ವಹಿಸಲಿದೆ
ಬೆಂಗಳೂರು, ಅಕ್ಟೋಬರ್ 26: ಡೀಲರ್ಗಳಿಗೆ ನ್ಯಾಯಯುತ ಕಮಿಷನ್ ನೀಡುತ್ತಿಲ್ಲ. ಕಂಪನಿಗಳು ನೀಡುತ್ತಿರುವ ಕಮಿಷನ್ಗೆ ಇಂಧನ ಪೂರೈಸುವ ವಾಹನಗಳ ಪೆಟ್ರೋಲ್ಗೂ ಸಾಕಾಗುತ್ತಿಲ್ಲ ಎಂಬ ಕಾರಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 3 ಮತ್ತು 4ರಂದು ದೇಶವ್ಯಾಪ್ತಿ ಪೆಟ್ರೋಲ್ ಬಂಕ್ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಅಪೂರ್ವಚಂದ್ರ ವರದಿ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಪೆಟ್ರೋಲ್ ಬಂಕ್ ಮುಷ್ಕರಕ್ಕೆ ಕರ್ನಾಟಕದಲ್ಲಿ ಅಕ್ಟೋಬರ್ 26ರಿಂದಲೇ ಬೆಂಬಲ ವ್ಯಕ್ತವಾಗಿದೆ ಎಂದು ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ಅಧ್ಯಕ್ಷ ರವೀಂದ್ರನಾಥ್ ಹೇಳಿದರು.[ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ನಾಗರಿಕರಿಗೆ ಮತ್ತೆ ಶಾಕ್]
ಅಪೂರ್ವಚಂದ್ರ ವರದಿ: ಪೆಟ್ರೋಲ್ ಮತ್ತು ಡೀಸೆಲ್ ಡೀಲರ್ಸ್ ಬೇಡಿಕೆ ಪೂರೈಸಲು ಕೇಂದ್ರ ಸರ್ಕಾರ 2011ರಲ್ಲಿ ರಚಿಸಿದ್ದ ಅಪೂರ್ವ ಚಂದ್ರ ಸಮಿತಿ ನೀಡಿರುವ ವರದಿಯನ್ನು ತಕ್ಷಣವೇ ಜಾರಿ ಮಾಡಬೇಕು. ಡೀಲರ್ಗಳ ಕಮಿಷನ್ ಹೆಚ್ಚಿಸಬೇಕು. ಲ್ಯೂಬ್ ಡಂಪಿಂಗ್ ಸ್ಥಗಿತಗೊಳಿಸಬೇಕು. ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ವೆಚ್ಚವನ್ನು ಹೆಚ್ಚಳಗೊಳಿಸಲು ಕ್ರಮ ಕೈಗೊಳ್ಳ ಬೇಕೆಂದು ರವೀಂದ್ರನಾಥ್ ಮನವಿ ಮಾಡಿದರು.

ತೈಲ ಕಂಪನಿಗಳು ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 2.42ರು ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರಿಗೆ 1.49ರು ಕಮಿಷನ್ ನೀಡುತ್ತಿವೆ. ಆದರೆ, ಆದರೆ ಡೀಲರ್ ಗಳು ಈ ಕಮಿಷನ್ ಮೊತ್ತವನ್ನು ಪೆಟ್ರೋಲ್ 2.95 ಪ್ರತಿ ಲೀಟರಿಗೆ ಹಾಗೂ 2.10 ಪ್ರತಿ ಲೀಟರ್ ಡೀಸೆಲ್ ಗೆ ಏರಿಸುವಂತೆ ಬೇಡಿಕೆ ಇಟ್ಟಿದ್ದಾರೆ.
ಮುಷ್ಕರ ಯಾವಾಗ?: ತೈಲ ಕಂಪನಿಗಳು ಅನುಸರಿಸುತ್ತಿರುವ ಕ್ರಮ ಖಂಡಿಸಿ ಅಕ್ಟೋಬರ್ 19 ರಂದು ಸಂಜೆ 7 ರಿಂದ 7.15ರವರೆಗೆ ವಿದ್ಯುತ್ ದೀಪಗಳನ್ನು ಬಂದ್ ಮಾಡಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿತ್ತು. ಬುಧವಾರ(ಅಕ್ಟೋಬರ್ 26) ಸಂಜೆ 7 ರಿಂದ 7.15ರವರೆಗೆ ವಿದ್ಯುತ್ ದೀಪಗಳನ್ನು ಬಂದ್ ಮಾಡಲಾಗಿದೆ.
ನವೆಂಬರ್ 3 ಮತ್ತು 4ರಂದು ದೇಶವ್ಯಾಪ್ತಿ ಪೆಟ್ರೋಲ್ ಬಂಕ್ ಮುಷ್ಕರ ಜತೆಗೆ ನವೆಂಬರ್ 5 ರಿಂದ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರವೇ ಪೆಟ್ರೋಲ್ ಬಂಕ್ಗಳು ಕಾರ್ಯನಿರ್ವಹಿಸಲಿದೆ. ಉಳಿದಂತೆ ರಜಾದಿನಗಳು, 2ನೇ ಶನಿವಾರ ಹಾಗೂ ಎಲ್ಲ ಭಾನುವಾರಗಳಂದು ಬಂಕ್ಗಳು ರಜೆಯನ್ನು ಆಚರಿಸಲಿವೆ.












Click it and Unblock the Notifications